ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಯಿತು. ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ ಹಾಗು ಶಿಕ್ಷಣ ಇಲಾಖೆ ಇವರುಗಳ ವತಿಯಿಂದ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯವಾದಿ ಆದಪ್ಪ ಹೊಸ್ಮನಿ ಮಾತನಾಡಿ, ಮಕ್ಕಳಿಗೆ ಸರಕಾರ ಕಡ್ಡಾಯ ಹಾಗೂ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಿದ್ದು ಶಿಕ್ಷಕರು, ಪಾಲಕರು ಹಾಗೂ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಕಡ್ಡಾಯವಾಗಿ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು ಇದು ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.
ಕಡ್ಡಾಯ ಹಾಗೂ ಉಚಿತ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಇದನ್ನು ಯಾರೂ ಕಸಿದುಕೊಳ್ಳುವಂತಿಲ್ಲ ಎಂದು ಹೇಳಿದ ಅವರು 371(ಜೆ) ಅನ್ವಯ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ನಿಷೇಧ ಕಾಯ್ದೆ ಮೋಟಾರು ವಾಹನ ಕಾಯ್ದೆ ಸೇರಿದಂತೆ ಹಕ್ಕುಗಳು ಹಾಗೂ ಕಾಯ್ದೆ ಕುರಿತು ತಿಳಿಸಿಕೊಟ್ಟರು.
ಮುಖ್ಯ ಶಿಕ್ಷಕ ಜ್ಞಾನದೇವ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ಗುರುನಾಥ ರಾಠೋಡ, ಅಶ್ವಿನಿ ನಾಯಕ, ಚಿದಾನಂದ, ಚಂದಪ್ಪ, ನಿಂಗಪ್ಪ ಚವ್ಹಾಣ ಇತರರು ಉಪಸ್ಥಿತರಿದ್ದರು. ವಿವೇಕಾನಂದ ನಿರೂಪಿಸಿದರು ಕನಕಪ್ಪ ವಾಗಣಗೇರಾ ಸ್ವಾಗತಿಸಿದರು ಬಸವರಾಜ ವಂದಿಸಿದರು.