ಸುರಪುರ : ನಗರದ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದ ಗುಮ್ಮಾನವರ ನಿವಾಸದ ಆವರಣದಲ್ಲಿ ಪ್ರತಿ ವರ್ಷದಂತೆ ಮಹಾಶಿವರಾತ್ರಿ ನಿಮಿತ್ತ (ಫೆ 10) ಇಂದಿನಿಂದ ಶರಣಬಸವೇಶ್ವರ ಪುರಾಣ ಮಹೋತ್ಸವ ಹಾಗೂ ಶರಣ-ಸಂತರಿಂದ ಸದ್ಭಾವ ಚಿಂತನೆ ಕಾರ್ಯಕ್ರಮ ಫೆ.20 ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಜರುಗಲಿದೆ.
ಇಂದು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಉದ್ಘಾಟಿಸುವರು. ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸಾನ್ನಿಧ್ಯ. ತೋಟೆಂದ್ರ ಶಾಸ್ತ್ರಿ ಕೊಲ್ಲೂರ ಪುರಾಣಿ ಪ್ರವಚನಕಾರ, ವಿರೇಶಕುಮಾರ ಕಟ್ಟಿಸಂಗಾವಿ ಮತ್ತು ರವಿಕುಮಾರ ಆಳಂದ ಸಂಗೀತ ಸಾಥ್ ನೀಡಲಿದ್ದಾರೆ. ಫೆ.19 ರಂದು ಸಾಧಕರಿಗೆ ಸತ್ಕಾರ ಮತ್ತು ಶರಣ ಶ್ರೀ ಪ್ರಶಸ್ತಿ ಪ್ರದಾನವಿದೆ ಎಂದು ಶರಣಬಸವೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರದ್ಧಾ-ಭಕ್ತಿಯ ಕೇಂದ್ರ : ತಿಮ್ಮಾಪುರ-ರಂಗಂಪೇಟೆ ಜನರ ಹಾಗೂ ಗುಮ್ಮಾ ಮನೆತನದವರ ಆರಾಧ್ಯ ದೈವ ಶರಣಬಸವೇಶ್ವರ ನಾಗದೇವನ ಹುತ್ತದ ರೂಪದಲ್ಲಿ ನೆಲೆಗೊಂಡು ಭಕ್ತರ ಬದುಕಿಗೆ ಸಂಜೀವಿನಿಯಾಗಿ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ. 11 ದಿನಗಳವರೆಗೆ ಶರಣಬಸವೇಶ್ವರ ಪ್ರವಚನದ ಜತೆಗೆ, ಜ್ಞಾನ ದಾಸೋಹ, ಶರಣರ-ಸಂತರ ಸದ್ಭಾವ ಚಿಂತನೆ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಠಾಧೀಶರಿಂದ ಆಶೀರ್ವಚನ ನಡೆಯುತ್ತಿದೆ.