ಯಾದಗಿರಿ ಜಿಲ್ಲೆಯಲ್ಲೊಂದು ಮಾದರಿ ಮದುವೆ

0
97
ಜಾತಿ, ಸಂಪ್ರದಾಯ ಮತ್ತು ವರದಕ್ಷಿಣೆಗೆ ಬ್ರೇಕ್, ಸಮಾಜವಾದ ಸಿದ್ಧಾಂತ ಒಪ್ಪಿಕೊಂಡು ಮಾದರಿ ಮದುವೆಯಾದ ಹೋರಾಟಗಾರರು

• ಭೀಮಾಶಂಕರ ಪಾಣೇಗಾಂವ

ಯಾದಗಿರಿ : ಹೋರಾಟದ ಚಿಲುಮೆಗಳಾದ ಭಗತ್ ಸಿಂಗ್, ನೇತಾಜಿ ಸೇರಿದಂತೆ ಇತರೆ ಮಹಾತ್ಮರ ಜೀವನಾದರ್ಶಗಳು ಹಾಗೂ ಸಮಾಜವಾದಿ ತತ್ವಸಿದ್ಧಾಂತದ ಆಶಯದಂತೆ ಮೌಢ್ಯ, ಅವೈಜ್ಞಾನಿಕ ಆಚರಣೆಗಳಿಗೆ ಸೆಡ್ಡು ಹೊಡೆದು ಸಮ ಸಮಾಜದ ಕನಸನ್ನು ನನಸಾಗಿಸಲು ಹೊರಟಿದ್ದಾರೆ ಇಬ್ಬರು ನವದಂಪತಿಗಳು.

Contact Your\'s Advertisement; 9902492681

ಸಮಾಜದಲ್ಲಿ ಬದಲಾವಣೆ ಬಯಸಿ ವೈಚಾರಿಕತೆ ಮೂಡಿಸಲು ಪಣ ತೊಟ್ಟ ಹೋರಾಟದ ಜೋಡಿಗಳು ಜಾತಿ, ಸಂಪ್ರದಾಯ ಮೀರಿ, ವರದಕ್ಷಿಣೆಯ ಇಲ್ಲದೆ, ಆಡಂಬರದ ಗೋಜಿಗೆ ಹೋಗದೆ ಸರಳವಾಗಿ ಮದುವೆಯಾದ ಜೋಡಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾದ ಅಂತರ್ಜಾತಿ ವಿವಾಹಕ್ಕೆ ಸಾಕ್ಷಿಯಾದವರು ರಾಮಲಿಂಗಪ್ಪ ಬಿ.ಎನ್ ಮತ್ತು ಶಿಲ್ಪಾ ಬಿ.ಕೆ. ಎಂಬ ಕ್ರಾಂತಿಕಾರಿ ಹೋರಾಟದ ಯುವ ಸಂಗಾತಿಗಳು.

ಜಿಲ್ಲೆಯ ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ನಿಂಗಮ್ಮ ಬಸಲಿಂಗಪ್ಪ ಮತ್ತು ಅವರ ಪುತ್ರ, ಎಐಯುಟಿಯುಸಿ ಕಾರ್ಮಿಕ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್. ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಹೊಸ ಹೆಬ್ಬಾಳ ಗ್ರಾಮದ ಸುರೇಖಾ ಮತ್ತು ಬಸವರಾಜ್ ಅವರ ಪುತ್ರಿ, ಎಐಡಿಎಸ್ಓ ಕಲಬುರಗಿ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯೆ ಶಿಲ್ಪಾ ಅವರ ಜೊತೆಗೆ ಜಾತಿ ಸಂಪ್ರದಾಯ ಮೀರಿ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ ಜಾತ್ಯತೀತ ರಾಷ್ಟ್ರ ಕಟ್ಟಲು ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ವಿವಾಹ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಸರಳ ವೇದಿಕೆ, ಉಡುಪು ಧರಿಸಿದ ಜೋಡಿಗಳು ಕುಳಿತಿದ್ದರು. ಜಾತಿ, ಧರ್ಮ, ಬಿಂಬಿಸುವ ನಾಯಕರ ಭಾವಚಿತ್ರಗಳಿರಲಿಲ್ಲ. ಮಂತ್ರ ಪಠಣ ಇರಲಿಲ್ಲ. ಬ್ಯಾಂಡ್, ಭಜಂತ್ರಿ ಯಾವುದು ಇರಲಿಲ್ಲ. ಹೂವಿನ ಹಾರ ಕೂಡಾ ಬದಲಿಸಲಿಲ್ಲ, ಜ್ಯೋತಿಷಿ ನೋಡಲಿಲ್ಲ. ಮದುವೆಯಲ್ಲಿ ಯಾವುದೇ ಆಡಂಬರ ಇರಲಿಲ್ಲ. ವೇದಿಕೆಗೆ ಕೂಡಾ ಯಾವದೇ ಅಲಂಕಾರ ಮಾಡಲಿಲ್ಲ, ಪುರೋಹಿತರ ಹಂಗಿಲ್ಲದೆ, ತಾಳಿ ಕಾಲುಂಗರ, ಬಾಸಿಂಗವೂ ಗೋಜುಯಿಲ್ಲದ ಸರಳ ಮದುವೆ ನಡೆಡಿದ್ದು ಸತ್ಯ. ಯಾವುದೇ ಶಾಸ್ತ್ರಗಳಿಲ್ಲದೆ ಪರಸ್ಪರ ಒಪ್ಪಿ, ಜೊತೆಗೆ ಎರಡು ಕುಟುಂಬಗಳನ್ನ ಒಪ್ಪಿಸಿ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ( ಕಮ್ಯುನಿಸ್ಟ್ )ಪಕ್ಷದ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಒಂದಾದ ಸಂಗಾತಿಗಳ ಮದುವೆ ನೋಡಿ ನೆರೆದಿದ್ದ ಜನ ತುಂಬಾ ಆಶ್ಚರ್ಯಪಟ್ಟರು .

ನಿಜ, ಯಾವುದೇ ದುಂದು ವೆಚ್ಚವಿಲ್ಲದೆ, ವರದಕ್ಷಿಣೆ ವಾಸನೆವಿಲ್ಲದೆ ಜಾತಿ ರಹಿತ ಸಮಾಜಮುಖಿ ವಿವಾಹವಿದು. ಇಂಥ ಮದುವೆ ಮಾಡಿಕೊಳ್ಳಲು ಸಾಮಾನ್ಯ ಮಾತಲ್ಲ.ಈ ಸರಳ ವಿವಾಹದಲ್ಲಿ ಭಾಗವಹಿಸಿ, ಶುಭ ಕೋರಿ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಬಳ್ಳಾರಿ ಮಾತನಾಡಿ, ಸ್ನಾತಕೋತ್ತರ ಪದವಿ ಓದಿರುವ ರಾಮಲಿಂಗಪ್ಪ ಮತ್ತು ಶಿಲ್ಪಾ ಇಬ್ಬರೂ ವಿದ್ಯಾರ್ಥಿ ದೆಶೆಯಿಂದಲೇ ನಮ್ಮ ಸಂಘಟನೆ ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಆಚರಣೆಗೆ ತಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡ ಇವರು, ಇಂಥ ಪ್ರಗತಿಪರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಿಸಿಕೊಂಡು ಸಾಮಾಜಿಕ ಪಿಡುಗುಗಳಾದ ನಿರುದ್ಯೋಗ, ವರದಕ್ಷಿಣೆ ಜಾತಿ ಪದ್ಧತಿ, ಮೂಢನಂಬಿಕೆಗಳಂತ ಅನೇಕ ಸಾಮಾಜಿಕ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟಕ್ಕಿಳಿದ ಅವರು, ತಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತರಲು ಮದುವೆಯ ಮೂಲಕವೂ ಸಾಕ್ಷಿಯಾಗಿದ್ದಾರೆ .

ಸಾಮಾಜಿಕ ಕಳಕಳಿ ಹೊಂದಿರುವ ಇವರು ಜಾತಿ ರಹಿತ, ವರದಕ್ಷಿಣೆ ರಹಿತ, ಸಾಂಪ್ರದಾಯಿಕ ರಹಿತ ಮದುವೆಯಾಗಲು ನಿರ್ಧರಿಸಿ ಇಂಥ ಸರಳ ವಿವಾಹವಾಗಿ ಸಮಾಜಕ್ಕೆ, ವಿಶೇಷವಾಗಿ ನವ ಯುವಕರಿಗೆ ಆದರ್ಶವಾಗಿದ್ದಾರೆ ಎಂದರು.

ಎಸ್ ಯುಸಿ ಐ ಪಕ್ಷದ ಕಲ್ಬುರ್ಗಿ ಜಿಲ್ಲಾ ಸಮಿತಿಯ ಸದಸ್ಯೆ ವಿ. ನಾಗಮ್ಮಾಳ ಮಾತನಾಡಿ, ವರದಕ್ಷಿಣೆ ಹೆಸರಲ್ಲಿ ಹೆಣ್ಣುಮಕ್ಕಳನ್ನು ಅಮಾನುಷವಾಗಿ ಶೋಷಿಸಲಾಗುತ್ತಿದೆ. ಆಳುವ ಸರ್ಕಾರಗಳು ಮನುಷ್ಯ ಮನುಷ್ಯರ ನಡುವೆ ಜಾತಿ ಗೋಡೆಗಳ ನಿರ್ಮಿಸಿ, ರಾಜಕೀಯ ಸೃಷ್ಟಿಸುತ್ತಿವೆ. ಮರ್ಯಾದೆ ಹತ್ಯೆ ಹೆಸರಲ್ಲಿ ಪ್ರೀತಿಸಿ ಮದುವೆಯಾದವರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಪಕ್ಷದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿ, ತತ್ವ ಸಿದ್ಧಾಂತಗಳ ಅಡಿ ಮದುವೆಯಾಗಲು ನಿರ್ಧರಿಸಿ, ಎರಡು ಕುಟುಂಬಗಳ ಸಮ್ಮತಿ ಪಡೆದು ಮದುವೆಯಾಗಿದ್ದಾರೆ. ಸಾಂಪ್ರಾದಾಯ ಪದ್ಧತಿಗೆ ಕಡಿವಾಣ ಹಾಕಿ, ಬದುಕಿಗೆ ತಾಳಿ ಒಗ್ಗೂಡಿಸಲು ಸಾಧ್ಯವಿಲ್ಲ, ಪರಸ್ಪರ ಪ್ರೀತಿ ವಿಶ್ವಾಸ, ಭರವಸೆ ಹೊಂದಾಣಿಕೆಯೇ ಬದುಕಿಗೆ ಆದರ್ಶ ಎಂಬುದು ಹೇಳಿದರು.

ಮೈಸೂರಿನಿಂದ ಆಗಮಿಸಿದ ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಂ. ಶಶಿಧರ ಮಾತನಾಡಿ, “ಬಹಳಷ್ಟು ಜನ ಆದರ್ಶ ಮದುವೆಗಳ ಕುರಿತು ಮಾತನಾಡುತ್ತಾರೆ. ಆದರೆ ಅವರ ಕುಟುಂಬದ ವಿಷಯ ಬಂದಾಗ ಅದನ್ನು ಅನುಸರಿಸುವುದಿಲ್ಲ. ಆದರೆ, ಮಾರ್ಕ್ಸ್, ಲೆನಿನ್, ಕಾಮ್ರೇಡ್ ಶಿವದಾಸ ಘೋಷ್ ಅವರ ಚಿಂತನೆಗಳಡಿ ಸಮಾಜದ ಮೂಲಭೂತ ಬದಲಾವಣೆಗೆ ಹೋರಾಡುತ್ತಿರುವ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದಲ್ಲಿ ಇಂತಹ ವೈಚಾರಿಕ ಕ್ರಾಂತಿ ಜೀವಂತವಾಗಿದೆ. ಮೌಢ್ಯ, ಗೊಡ್ಡು ಸಂಪ್ರದಾಯ, ಜಾತಿಯತೆ ಮತ್ತು ಧರ್ಮಾಂಧತೆ, ಇವುಗಳನ್ನು ಧಿಕ್ಕರಿಸುವ ಎದೆಗಾರಿಕೆ ಯುವಜನರಲ್ಲಿ ಬರಬೇಕು. ಅಗ್ನಿ ಸಾಕ್ಷಿ ಮದುವೆಗಳು ಮುರುದು ಬೀಳುತ್ತಿವೆ. ಮನಸಾಕ್ಷಿ ಮದುವೆಗಳು ಗೆಲ್ಲುತ್ತಿವೆ. ಇಂತಹ ಸರಳ ಮತ್ತು ಅಂತರ್ಜಾತಿ ಮದುವೆಗಳಿಂದ ಸಹಜವಾಗಿ ಪೋಷಕರಿಂದ ಪ್ರತಿರೋಧ ಬರುತ್ತದೆ. ಬದಲಾವಣೆಯ ಗಾಳಿ ಬೀಸುವಾಗ ನೋವುಗಳನ್ನು ಎದುರಿಸಬೇಕಾದ್ದು ಅನಿವಾರ್ಯ” ಎಂದರು.

ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಘಟನೆ ಮುಖಂಡರಾದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ
ಕೆ.ಸೋಮಶೇಖರ, ಎಸ್‌ಯುಸಿಐ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ, ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್.ವೀರೇಶ, ಎಸ್‌ಯುಸಿಐ ರಾಯಚೂರು ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಗಿರೀಶ, ಎಐಯುಟಿಯುಸಿ ಕಲಬುರಗಿ ಜಿಲ್ಲಾಧ್ಯಕ್ಷ ವಿ.ಜಿ.ದೇಸಾಯಿ,ಎಐಕೆಕೆಎಂಎಸ್ ಯಾದಗಿರಿ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಎಐಎಸ್‌ಇಸಿ ರಾಜ್ಯ ಕಾರ್ಯದರ್ಶಿ ಮಹೇಶ ಎಸ್.ಜಿ, ವೀರಭದ್ರಪ್ಪ ಆರ್.ಕೆ, ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಎಐಯುಟಿಯುಸಿ ಜಿಲ್ಲಾಧ್ಯಕ್ಷೆಡಿ.ಉಮಾದೇವಿ, ಹಿರಿಯರಾದ ಅಜೀಜ್ ಅಹ್ಮದ್ ಸಹನಾ, ವೆಂಕಪ್ಪ ಆಲೆಮನೆ, ಗುಂಡಪ್ಪ ಕಲಬುರಗಿ ನಿವೃತ್ತ ಶಿಕ್ಷಣಾಧಿಕಾರಿ ಜಿ.ಎಂ. ಪಟ್ಟೇದಾರ, ಮುಖ್ಯ ಅಂಚೆ ಅಧಿಕಾರಿ ಕುಪೇಂದ್ರ ವಟಾರ, ಪ್ರಾಂಶುಪಾಲರಾದ ರಘುನಾಥರೆಡ್ಡಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಉಪನ್ಯಾಸಕ ಡಾ.ಎಸ್.ಎಸ್.ನಾಯಕ, ಬಿಸಿಎಂ ಅಧಿಕಾರಿ ಪ್ರಭು ದೊರೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಚನ್ನಬಸವ, ತಹಶೀಲ್ದಾರ ಡಾ.ಮಲ್ಲಪ್ಪ ಹಾದಿಮನಿ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಪುಟ್ಟರಾಜ್ ಲಿಂಗಶೆಟ್ಟಿ, ಕೀರ್ತಿ, ವಿಶಾಲಾಕ್ಷಿ ದೇಸಾಯಿ ಹಾಗೂ ಮತ್ತಿತರರು ಕ್ರಾಂತಿಗೀತೆಗಳನ್ನು ಹಾಡಿ ಗಮನ ಸೆಳೆದರು.

ಆದರ್ಶ ಮದುವೆಗೆ ನೂರಾರು ಜನ ಬಂಧು -ಬಳಗ ಸ್ನೇಹಿತರು ಹೋರಾಟಗಾರರು, ಶಿಕ್ಷಕರು, ಸೇರಿದಂತೆ ಅನೇಕರು ಆಗಮಿಸಿ, ಶುಭನುಡಿಗಳ ಮೂಲಕ ಹಾರೈಸಿ, ಸರಳ ತಿಂಡಿ ಸವೆದು ಸಂತಸ ಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here