ಕಲಬುರಗಿ :ಕೋವಿಡ್ ಸೋಂಕಿನಿಂದ ಆಗಿರುವ ಅಸಮತೋಲನವನ್ನು ಕಲಿಕಾ ಚೇತರಿಕೆ, ಕಲಿಕಾ ಹಬ್ಬಗಳ ಮೂಲಕ ಸರಿದೂಗಿಸಲಾಗುತ್ತಿದೆ, ತರಗತಿ ಕೋಣೆಯಲ್ಲಿ ಒತ್ತಡ ಮುಕ್ತವಾಗಿ ಸಂಭ್ರಮದಿಂದ ಕಲಿಯಬಹುದು ಎಂಬುದಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಾಯಬಣ್ಣ ತಳವಾರ ಹೇಳಿದರು.
ಅವರು ಶಹಾಬಾದ ತಾಲೂಕಿನ ಸರಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಸಾಕ್ಷರತಾ ಇಲಾಖೆಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿತ್ತಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಹಾಬಾದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಡುತ್ತಾ ಕಲಿ, ಮಾಡುತ್ತಾ ತಿಳಿ, ನೋಡುತ್ತಾ ನಲಿ, ಹಾಡುತ್ತ ಕುಣಿ’ ಎಂಬ ಬೋಧನಾ ತತ್ವಗಳನ್ನು ಒಳಗೊಂಡಿದೆ. ಆಡು- ಹಾಡು, ಕಾಗದ- ಕತ್ತರಿ, ಊರು ತಿಳಿಯೋಣ, ಮಾಡು- ಆಡು ಎಂಬ ಗುಂಪುಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಚಟುವಟಿಕೆಗಳನ್ನೂ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುಬೇಕು ಎಂದು ಹೇಳಿದರು.
ಶಹಬಾದ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ಮಗುವೇ ಕಲಿಕೆಯ ಸಂದರ್ಭಗಳನ್ನು ಸೃಷ್ಟಿಸುವ, ನಿಭಾಯಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ದೊರೆತ ಅನುಭವಗಳ ಮೂಲಕ ತನ್ನದೇ ಜ್ಞಾನ ಸೃಷ್ಟಿಯಲ್ಲಿ ತೊಡಗುವ ಕ್ಲಾಸ್ ರೂಮುಗಳನ್ನು ನಿಜವಾಗಿಸಲು ಇಂತಹ ಹಬ್ಬಗಳು ಅಗತ್ಯ, ಕಲಿಕೆಯ ಹಬ್ಬವು ಘಟನೆ ಯಾಗದೆ ನಿತ್ಯದ ಬದುಕಾಗಲಿ ಎಂದು ಹೇಳಿದರು.
ದಸಂಸ ರಾಜ್ಯ ಸಂ. ಸಂಚಾಲಕರಾದ ಮರಿಯಪ್ಪ ಹಳ್ಳಿ, ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ, ಮಹ್ಮದ ಉಬೇದುಲ್ಲಾ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಚಿದಾನಂದ ಕುಡನ, ಮುಖ್ಯ ಗುರುಗಳಾದ ಎಮಿನೆಮ್ ರಾಠೋಡ, ಸತ್ಯನಾರಾಯಣ, ಶ್ರೀಧರ ರಾಠೋಡ, ರವಿ ರಾಠೋಡ, ಅಹ್ಮದ ಪಟೇಲ ವೇದಿಕೆ ಮೇಲೆ ಇದ್ದರು.
ಮಕ್ಕಳ ಕಲಿಕಾ ಹಬ್ಬದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಡ್ರಮ್, ವಾದ್ಯಗಳ ಸಮೇತ ಸಂಚರಿಸಿತು. ಈ ವಾದ್ಯ ಮೇಳದಲ್ಲಿ ವಿಜಯಲಕ್ಷ್ಮಿ ಪಾಟೀಲ, ವಾಣಿಶ್ರೀ, ಪ್ರಮೋದ ಒಂಟಿ, ಹೀರೆಮಠ, ವಿಜಯಲಕ್ಷ್ಮಿ ರಾಠೋಡ ಶಿಕ್ಷಕರು ಮತ್ತು ಸಿಬ್ಬಂದಿಯವರು ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.