ಸಮಕಾಲಿನ ಸಣ್ಣ ಕಥೆಗಳ ಒಂದು ಸಂವಾದ – ಮತ್ತದೇ ರಾಗ ತಾಳ

0
350

ಸಾಹಿತ್ಯ ಅಕಾಡೆಮಿ ನವದೆಹಲಿ ಇಂದು ಕಲಬುರ್ಗಿಯಲ್ಲಿ ಸಮಕಾಲಿನ ಸಣ್ಣಕಥೆಗಳ ಓದು ಮತ್ತು ಸಂವಾದ ಏರ್ಪಡಿಸಿತ್ತು. ನಮ್ಮ ಕಲಬುರ್ಗಿ ಭಾಗದ ಭರವಸೆಯ ಕಥೆಗಾರರಾದ ಬಸವರಾಜ ಡೋಣೂರು ಮತ್ತು ಮಾಹಾಂತೇಶ ನವಲಕಲ್ ತಮ್ಮ ಕಥೆಗಳನ್ನು ಓದುವ ಮೂಲಕ ಕೇಳುಗರೊಂದಿಗೆ ಸಂವಾದ ನಡೆಸಿದರು. ನಾನು ಈ ಎರಡು ಕಥೆಗಳನ್ನು ಸಕ್ರಿಯವಾಗಿ ಆಲಿಸಿದ ಬಳಿಕ ಬರೆಯಲೇಬೇಕಾದ ಅಗತ್ಯವೆನಿಸಿತು. ಈ ಅನಿಸಿಕೆ ನನ್ನ ಸಂಪೂರ್ಣ ವಯಕ್ತಿಕವಾಗಿದ್ದು, ಹಲವು ಕಥೆಗಳ ಓದಿಗೆ ನಿಲುಕಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಡೋಣೂರ ಅವರ ಅಲ್ಲಾಭಕ್ಷ ಕಥೆಯು ಸುಂದರ ಹಾಗೂ ಕೌತುಕಭರಿತವಾಗಿದ್ದು ಅವರೊಬ್ಬ ಪ್ರೋಫೆಸರ್ ಆಗಿರುವ ಕಾರಣ ಓದುವ ಶೈಲಿಯೂ ಅಷ್ಟೆ ಪರಿಣಾಮಕಾರಿಯಾಗಿತ್ತು. ಡೋಣೂರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದು ಕನ್ನಡ ಭಾಷೆಯ ಮೇಲಿನ ಅವರ ಪ್ರಭುತ್ವ ಮೆಚ್ಚಲೇಬೇಕು.

Contact Your\'s Advertisement; 9902492681

ಅವರ ಕಥೆ ಪರಂಪರೆಯನ್ನು ಹೇಳುತ್ತದೆ. ಕನ್ನಡ ಸಾಹಿತ್ಯ ಜಗತ್ತಿನ ಮೂಲ ಪರಂಪರೆಯನ್ನು ಕಳಚದೇ ಸಾವಿನ ಸುತ್ತಮುತ್ತ ಸುಳಿದಾಡುತ್ತದೆ. ಡೊಣೂರು ಅವರ ಸಾವು ಕಥೆಯಂತೆ ಅಲ್ಲಾಭಕ್ಷ ಕಥೆಯು ದುರಂತ ಸಾವಿನ ಬಗ್ಗೆಯೇ ಪ್ರಸ್ತಾಪಿಸುತ್ತದೆ. ಮತ್ತದೇ ಬ್ರಾಹ್ಮಣ್ಯವನ್ನು ಕಡಿಮೆ ಮಾಡುತ್ತ ಸಾಗುತ್ತದೆ. ನಾಟಕ ವೃತ್ತಿ ರಂಗಭೂಮಿಯ ಅಲ್ಲಾಭಕ್ಷನನ್ನು ಇವತ್ತಿನ ಇತರೇ ಪರಂಪರೆಗಳು ಹೇಗೆ ಅವನ ಬದುಕು ಹೀನಾಯಗೊಳಿಸುತ್ತವೆ ಎನ್ನುವ ದಾರುಣ ಸ್ಥಿತಿ ಹಿಡಿಯುತ್ತವೆ. ಸಣ್ಣ ಕಥೆಯಂದು ಶಿರ್ಷಿಕೆಯಿಟ್ಟು ದೊಡ್ಡ ಕಥೆಯನ್ನು ಓದಿದರು. ಒಂಬಂತ್ತು ಪುಟಗಳ ಕಥೆ ಅದು ಹೇಗೆ ಸಣ್ಣ ಕಥೆಯಂದು ಆಯ್ಕೆ ಮಾಡಿದರು ಅರ್ಥವಾಗಲಿಲ್ಲ. ಕಥೆ ಅತ್ಯಂತ ಸಾರಸ್ಯಭರಿತವಾಗಿರಲಿಲ್ಲ ಒಂದು ರಾತ್ರಿಯಲ್ಲಿ ಮುಗಿಯುವ ಕಥೆ ಐದರಿಂದ ಆರು ಪಾತ್ರ ಸುಮ್ಮನೆ ಇಡಿ ರಾತ್ರಿ ಎಳೆದುಕೊಂಡು ಬೆಳಗಿನ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಹೆಚ್ಚು ಕಲಾತ್ಮಕತೆ ಉಪಮೇಯ ಉಪಮಾನ ಯಾವುದೇ ಬಳಸದೇ ಅತ್ಯಂತ ಸರಳವಾಗಿ ಕಥೆ ಕೊನೆಗೊಳ್ಳುತ್ತದೆ. ಡೋಣೂರು ಅವರು ಕನ್ನಡ ಸಾಹಿತ್ಯ ಜಗತ್ತಿನ ಪರಂಪರೆಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿದ್ದಾರೆ ಹೀಗಾಗಿ ಅವರದ್ದೇ ಪರಂಪರೆಯ ದಾರಿಯಲ್ಲಿ ಈ ಕಥೆ ರಚನೆ ಮಾಡಿದ್ದಾರೆ.

ಡೋಣೂರು ಅವರ ಕಥೆ ನನಗೆ ಹೆಚ್ಚು ವ್ಯಕ್ತಿಚಿತ್ರವಾಗಿ ಕಾಣಿಸಿತು. ಈ ಸಂಧರ್ಭದಲ್ಲಿ ನಾನು ಮಸರಿನ ಮಂಜಮ್ಮ ಕಥೆ ನೆನಪಿಸಿಕೊಂಡೆ. ಸಣ್ಣವರಾದ ನಾವುಗಳು ಕೆಲವು ಕತೆಗಳನ್ನು ಬರೆದಾಗ ಒಂದು ಸನ್ನಿವೇಶವನ್ನಿಟ್ಟುಕೊಂಡು ಕಥೆ ಹಣಿಯುವಾಗ ಈ ಕಥೆಗಳ ಆಯಾಮಗಳು ಬೇಕು ಅಲಂಕಾರಗಳು ಬೇಕು ಎನ್ನುವ ಗೊಂದಲಕ್ಕೀಡಾಗಿ ಬರೆಯುವುದೇ ಎಷ್ಟುಬಾರಿ ನಿಲ್ಲಿಸಿದ ಉದಾಹರಣೆಗಳಿವೆ. ಈ ಕಥೆಯಲ್ಲಿ ಘಟನೆಯಿತ್ತೆ ವಿನ: ಕಲಾತ್ಮಕತೆ ಕಡಿಮೆಯಿತ್ತು ಎನ್ನುವುದು ನನ್ನ ಅಳಲು.

ನಾನು ಇದೇ ಸಂದರ್ಭಕ್ಕೆ ವಸುದೇಂದ್ರ ಅವರ ಅಮೃತಸೊಪ್ಪು ಕಥೆ ನೆನಪಿಸಿಕೊಂಡೆ, ಒಂದು ಚಿಕ್ಕ ಸೊಪ್ಪನ್ನು ಎಷ್ಟೆಲ್ಲ ಕಲಾತ್ಮಕವಾಗಿ ಬರೆಯಬಹುದೆಂಬುವುದು ಇದರಿಂದ ಅರೆತುಕೊಂಡೆ ಇಂತಹ ಯಾವುದೇ ಕಲಾತ್ಮಕತೆ ಡೋಣೂರು ಅವರ ಕತೆಯಲ್ಲಿ ನನಗೆ ಕಾಣಲಿಲ್ಲ.

ಡೋಣೂರು ಅವರ ಕಥೆಯಲ್ಲಿ ಕಂಡಿದ್ದು ಒಂದು ಘಟನೆ ಮಾತ್ರ. ಬಿಚ್ಚಿದ ಜೋಳಿಗೆಯಂತಹ ರೋಚಕತೆ ನನ್ನ ನಿರೀಕ್ಷೆಯಿತ್ತು. ಒಬ್ಬ ವ್ಯಕ್ತಿಯ ಆತ್ಮಕತೆ ಅತ್ಯಂತ ಚಿಕ್ಕದಾಗಿ ಚೊಕ್ಕದಾಗಿ ಮುಗಿಸಿದಂತೆ ಭಾಸವಾಯಿತು. ಅವರ ಕಥೆಯೊಳಗೆ ನನಗೆ ತುಂಬಾ ಇಷ್ಟವಾಗಿದ್ದು ಅಲ್ಲಾಭಕ್ಷನ ಬದುಕು ಕಟ್ಟಿಕೊಡುವ ಸಂದೇಶ ವೃತ್ತಿ ರಂಗಭೂಮಿ ಕಲಾವಿದರ ಬದುಕಿಗೆ ಹಿಡಿದ ಕನ್ನಡಿಯಾಗಿತ್ತು. ಕಥಾ ಜಗತ್ತಿನಲ್ಲಿ ಅಳೆದು ತೂಗಬಲ್ಲ ಶಕ್ತಿ ಡೋಣೂರ ಅವರ ಕಥೆಯಲ್ಲಿ ನನಗೆ ಕಾಣಲಿಲ್ಲ. ಅವರೊಬ್ಬ ಸಂವೇಧಾಶೀಲ ಚಿಂತಕರು ಈ ನೆಲದ ಮೂಲವನ್ನು ಅತ್ಯಂತ ಮಾರ್ಮಿಕವಾಗಿ ಕಣ್ಣಿಗೆ ಕಟ್ಟಿಕೊಡುವಂತೆ ಕಥೆ ಅವರಿಂದ ನನ್ನ ನಿರಿಕ್ಷೆಯಿದೆ.

ಇನ್ನು ಮಾಹಾಂತೇಶ ನವಲಕಲ್ ಅವರ ಕಥೆ ಒಂದು ಸಿದ್ಧಾಂತವನ್ನು ಪ್ರತಿಪಾದಿಸುವ ಧಾವಂತಕ್ಕೆ ಬಿದ್ದು ಕಥೆ ಎನ್ನುವುದಕ್ಕಿಂತ ಲೇಖನವೆಂದು ಅನಿಸಿತು. ಕಥೆಯಲ್ಲಿ ಪಾತ್ರಧಾರಿಗಳಿದ್ದರು ಮಾತನಾಡಿದ್ದು ಬರಹಗಾರ ಮಾತ್ರ ಎಂಬುವುದು ವಿಚಿತ್ರ ಸಂಗತಿಯಾಗಿತ್ತು. ಒಂದು ವಾದವನ್ನು ಮಂಡಿಸುವುದು ಲೇಖನದ ಮೂಲಕ ಕಥೆಯ ಮೂಲಕ ಕಟ್ಟಿಕೊಡುವಲ್ಲಿ ನವಲಕಲ್ ಸೋತಿದ್ದಾರೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಒಂದು ಕಥೆಯ ಪ್ರಾರಂಭ ಮತ್ತು ಅಂತ್ಯಂತ ಸುಂದರ ಹಾಗೂ ಕಣ್ಣಿಗೆ ಕಟ್ಟುವಂತಿರಬೇಕು. ಇದೇ ವೇದಿಕೆಯಲ್ಲಿದ್ದ ಸಂಧ್ಯ ಹೊನ್ನಗುಂಟೇಕರ್ ಅವರ ಎಷ್ಟೊ ಕಥೆಗಳು ಈ ಕಲಾತ್ಮಕತೆ ಹೊಂದಿವೆ ಎಂಬುವುದು ನೆನಪಿಗೆ ಬಂತು.

ನವಲಕಲ್ ಅವರ ಕತೆಯು ಭಾವನಾತ್ಮಕ ವಿಷಯದ ಜೊತೆಗೆ ಸಿದ್ಧಾಂತದ ಪ್ರತಿಪಾದನೆ ಮಾಡುತ್ತಾ ಮತ್ತೇ ಅದೇ ಹಳೆ ರಾಗ ತಾಳ ಮೇಳೈಸುತ್ತದೆ. ಬಸವನ ತತ್ವ ಪ್ರತಿಪಾದಿಸುವ ಭರಾಟೆಯಲ್ಲಿ ಕಥೆ ಮತ್ತು ಅದರ ಹಂದರವನ್ನೇ ಮರೆತುಬಿಡುತ್ತದೆ. ನಮ್ಮ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಕಥೆಗಳ ಜೊತೆಗೆ ಸಿದ್ಧಾಂತ ಪ್ರತಿಪಾಸಿದ್ದು ಇದೇ ಆದರೆ ಅದರ ಶೈಲಿಯೊಳಗೆ ವಿಶೇಷವಿದೆ ಅಂತಹ ಯಾವುದೇ ಶೈಲಿ ನವಲ್ ಕಲ್ ಅವರ ಕಥೆ ಹೇಳಲೇಯಿಲ್ಲ.

ಇವರ ಕಥೆ ಒಂದೇ ಬಾರಿಗೆ ಅರ್ಥವಾಗಲಿಕ್ಕಿಲ್ಲವೆನಿಸುತ್ತದೆ ಅಥವಾ ನನ್ನ ಈ ಓದಿನ ಅನುಭವ ಸಾಲದೇಯಿರಬಹುದೆಂಬುವುದು ಅರೆತಿದ್ದೇನೆ. ನನಗೆ ಕಥೆಯಂದರೆ ಕುಂಮಿಯವರ ರೊಟ್ಟಿ, ಅವರ ಜೀವನ ಚರಿತ್ರೆ ಹಾಗೆ ಇರಬೇಕೆಂದು ಭಾವಿಸಿದ್ದೆ. ಈ ಮುಂಚೆ ನವಲಕಲ್ ಅವರ ಭಾರತ ಭಾಗ್ಯವಿಧಾತ ಪುಸ್ತಕ ಕೆಲವು ಭಾಗಗಳು ಓದಿದ್ದೆ ಈ ಓದಿನ ಮುಂದೆ ಇವತ್ತಿನ ಕಥೆ ಸಪ್ಪೆಯೆನಿಸಿತು. ಕಥೆಯ ಭಾಷೆಯಲ್ಲಿ ತುಂಬಾ ಪಾಲಿಶ್ ಭಾಷೆಬಳಸಬೇಕೆಂಬ ಹಠಕ್ಕೆ ಬಿದ್ದಂತೆ ಕಥೆಗಾರ ಕಾಣಸುತ್ತಾನೆ. ನಮ್ಮನಮ್ಮದೇ ಭಾಷೆ ಕಥಾಹಂದರಲ್ಲಿದ್ದರೆ ಒಳಿತು. ಇವತ್ತು ಬೈರಪ್ಪ ಹಾಗೂ ವಸುದೇಂದ್ರರಂತಹ ಕಥೆಗಾರರು ಬಳಸುವ ಅತ್ಯಂತ ಪಾಲಿಶ್ ಭಾಷೆಯ ಉಳಿವಿಕೆ ಬಹಳ ಕಡಿಮೆಯಂದು ಭಾವಿಸುತ್ತೇನೆ. ಪುಸ್ತಕೀಯ ಭಾಷೆ ಬಳಕೆ ಮಾಡಿದ್ದು ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಆಯಾ ಪ್ರಾದೇಶಿಕತೆಯಲ್ಲಿ ಕಥೆ ಹಣೆದರೆ ಒಳಿತೆನ್ನುವುದು ನನ್ನ ಅನಿಸಿಕೆ.

ಈ ಕಾರ್ಯಕ್ರಮದ ಆದ್ಯತೆ ಸಂವಾದವಾಗಿತ್ತು. ಕಥೆಗಳ ಕುರಿತು ಕೇಳುಗರಿಂದ ಅನಿಸಿಕೆಗಳು ಪ್ರಶ್ನೆಗಳಿಗೆ ಆದ್ಯತೆ ಇರಬೇಕಿತ್ತು. ಅದು ಸ್ವಲ್ಪ ಕೊರತೆಯೆನಿಸಿತು. ಪ್ರಶ್ನೆ ಕೇಳುವವರು ಕೂಡ ಕಥೆಗಾರರನ್ನು ಕುರಿತು ಮಾತನಾಡಿದರೆ ಹೊರತು ಕಥೆಯ ಕುರಿತು ಹೆಚ್ಚು ಸಂವಾದ ನಡೆಯಲಾಗಲಿಲ್ಲ. ಇಂತಹ ಸಂವಾದಗಳಲ್ಲಿ ಹೆಚ್ಚು ಯುವ ಕಥೆ ಬರೆಯುತ್ತೇನೆ ಎಂದು ಹೊರಟವರಿದ್ದರೆ ಒಳಿತಾಗುತ್ತಿತ್ತು. ಬಾಳಾಸಾಹೇಬರಂತಹ ಕಥೆಗಾರರು ಅನೇಕ ಕಥೆಗಳನ್ನು ಬರೆದಿದ್ದಾರೆ ಅವರಿಗೂ ಪ್ರಶ್ನೆಗಳಿದ್ದವು ಎಂದರೆ ಹೊಸ ಕಥೆಗಾರರಿಗೆ ಎಷ್ಟು ಪ್ರಶ್ನೆಗಳಿರಬಹುದು.

ಇದೇ ಸಂವಾದದಲ್ಲಿ ಕಥೆಗಾರ ಲೋಕಾಪುರೆಯವರು ಎತ್ತಿದ ಬಹುಮುಖ್ಯ ಪ್ರಶ್ನೆ ನನ್ನದೂ ಕೂಡಾ ಆಗಿತ್ತು. ಅವರು ಅತ್ಯಂತ ಉತ್ತಮವಾದ ಪ್ರಶ್ನೆ ಕೇಳಿದರು. ಕುವೆಂಪು ಅವರನ್ನು ಉಲ್ಲೇಖಿಸುತ್ತಾ, ಕಥೆಯೊಳಗೆ ಜಾತಿಯತೆಯ ಪ್ರಶ್ನೆ ಮಾಡಿದರು ತಾವು ಹೆದರುವ ವಿಚಾರವನ್ನು ಪ್ರಸ್ತಾಪಿಸುತ್ತಾ ಸಮಕಾಲಿನ ಕಥೆಗಾರರಿಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆ ಇನ್ನು ಚರ್ಚಿಸುವ ಅಗತ್ಯವಿತ್ತೇನೊ ಎನಿಸಿತು. ಬಹುಮುಖ್ಯವಾದ ವಿಚಾರವಿತ್ತು ಹೆಚ್ಚು ಚರ್ಚೆಗೊಳಪಡಲಿಲ್ಲ. ಕಥಾ ಹಂದರಕ್ಕೆ ಸಂಬಂದಿಸಿದಂತೆ ಸಂಧ್ಯಾ ಮೇಡಂ ಮಾತನಾಡುತ್ತಿದ್ದರು ಆದರೆ ಆ ಸಮಯದ ಅಭಾವದಿಂದ ಕಡಿತಗೊಳಿಸಿದರು.

ಈ ಎರಡು ಕಥೆಗಳ ಓದಿನಿಂದ ನನ್ನೊಳಗೆ ಹುಟ್ಟಿದ ಪ್ರಶ್ನೆಗಳು ಈ ಕೆಳಗಿನಂತಿವೆ.

  1. ಓದಿದ ಎರಡೂ ಕಥೆಗಳು ಸಣ್ಣ ಕಥೆಗಳೆ?
  2. ಘಟನೆ ಮತ್ತು ಕಥಾ ಹಂದರ ಎರಡೂ ಕಥೆಗಳಲ್ಲಿ ಇತ್ತೆ?
  3. ಕಥೆಯೊಳಗಿನ ರೋಚಕತೆ, ಅಲಂಕಾರಗಳು ಇದ್ದವೆ?
  4. ಕಥೆಯ ಪ್ರಾರಂಭ ಮತ್ತು ಅಂತ್ಯ ಸರಿಯಾಗಿದ್ದವೆ?
  5. ಬಳಸಿರುವ ಭಾಷೆ ಕಥೆಗಾರನ ಸ್ವಂತದ್ದಾಗಿದ್ದರು ಓದುಗರಿಗೆ ರುಚಿಸುವ ಭಾಷೆ ಕಥೆಯಲ್ಲಿತ್ತೆ?
  6. ದೊಡ್ಡ ಕಥೆಗಾರರೇ ತುಂಬಿರುವ ಸಭೆಯಲ್ಲಿ ಪ್ರಶ್ನೆಗಳು ಕಡಿಮೆಯಾಗಿದ್ದು ಏಕೆ?

ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಈ ಸಂವಾದ ಹುಟ್ಟು ಹಾಕಿತ್ತು. ನನ್ನ ಪ್ರಶ್ನೆಗಳು ತಪ್ಪು ಕೂಡ ಇರಬಹುದು, ನನ್ನ ಓದಿನ ಅರಿವಿನ ಪರಿಧಿಯೊಳಗೆ ನಾನು ಆಲಿಸಿದ ರೀತಿಯಲ್ಲಿ ಈ ಪ್ರಶ್ನೆಗಳು ಕೇಳಿರುವೆ. ಕನ್ನಡ ಸಾಹಿತ್ಯದ ಕಥಾಪರಂಪರೆಯನ್ನು ಅರೆತ ನಾವುಗಳೆಲ್ಲರೂ ಕಥೆಯೊಂದು ಕಟ್ಟಿಕೊಡಬಲ್ಲ ಶಕ್ತಿ ಎಂತಹದ್ದು ಎಂದರೆ ನಾನು ಇವತ್ತಿಗೂ ಅದೆಷ್ಟೊ ಕಥೆಗಳಿಂದ ಹೊರಬರಲು ಸಾಧ್ಯವಾಗಿಲ್ಲ ಅಂತಹ ಕಥೆಗಳು ಇಂದಿನ ಸಮಕಾಲಿನ ಅವಶ್ಯಕತೆಯಿದೆ ಎಂಬುವುದು ನನ್ನ ಅನಿಸಿಕೆ. ಸತ್ಯ ಕಥೆಗಳು ಕಥೆಯ ಚೌಕಟ್ಟು ಓದುಗರ ಮನಸ್ಸನ್ನು ಹಿಡಿದಿಡುವಂತಹ ಸಂದರ್ಭಗಳು ಇವತ್ತಿನ ಅವಶ್ಯಕೆತೆಯಂದು ನಾನುಬಯಸುತ್ತೇನೆ.

ಇದರ ಜೊತೆಗೆ ನಿರಗುಡಿಯವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು ತಾವು ನಿಂತುಕೊಂಡೆ ಉಳಿದವರಿಗೆ ಆಸನ ವ್ಯವಸ್ಥೆ ಮಾಡಿದ್ದರು. ಈ ನಾಡಿನ ಹೊಸ ಚಿಗುರುವ ಕಥೆಗಾರರು ಹಿರಿಯ ತಲೆಮಾರಿನ ಬಹುದೊಡ್ಡ ಕಥೆಗಾರರು ಸಾಹಿತಿಗಳು ಉಪಸ್ಥಿತರಿದ್ದರು. ಒಟ್ಟಾರೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿತ್ತು. ಮುನ್ನೂರು ಅವರ ನಿರೂಪಣೆ ಈ ಕಾರ್ಯಕ್ರಮಕ್ಕೆ ಭೂಷಣವಾಗಿತ್ತು. ಇನ್ನಷ್ಟು ಇಂತಹ ಕಾರ್ಯಕ್ರಮಗಳು ಕಲಬುರ್ಗಿಯಂತಹ ನಾಡಿಗೆ ಅತೀ ಅಗತ್ಯವೆಂದು ಭಾವಿಸುತ್ತೇನೆ.


ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು. 9686714046.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here