ಕಲಬುರಗಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಜಿಲ್ಲಾ ಸಮಿತಿ ಹಾಗೂ ಲಿಂ. ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ಆಶ್ರಯದಲ್ಲಿ ಜಗದ್ಗುರು ರೇಣುಕಾಚಾರ್ಯರ ದಿವ್ಯ ಜ್ಯೋತಿ ಯಾತ್ರೆಯು ಮಾ. 1ರಿಂದ ನಗರದ ಶರಣಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡು ಜಿಲ್ಲಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಿ ಶನಿವಾರ ನಗರ ಪ್ರವೇಶ ಮಾಡಿ ಎಲ್ಲ ವಾರ್ಡ್‍ಗಳಲ್ಲಿ ಸಂಚರಿಸಲಿದೆ ಎಂದು ಜಿಲ್ಲಾ ಸಮಿತಿ ಸಂಚಾಲಕ ವಿಶ್ವನಾಥ ಸಾಲಿಮಠ ತಿಳಿಸಿದರು.
ಈ ದಿವ್ಯ ಜ್ಯೋತಿ ಯಾತ್ರೆಯು ಮಾ. 5ರಂದು ಬೆಳಗ್ಗೆ 8.30ಕ್ಕೆ ಜರುಗಲಿರುವ ರೇಣುಕಾಚಾರ್ಯರ ಜಯಂತಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ರೇಣುಕಾಚಾರ್ಯರ 8 ಅಡಿ ಕಂಚಿನ ಉತ್ಸವ ಮೂರ್ತಿಯನ್ನು ಒಳಗೊಂಡು ಜಿಲ್ಲೆಯ ಅನೇಕ ಹರಗುರು ಚರಮೂರ್ತಿಗಳು, 2500ಕ್ಕೂ ಹೆಚ್ಚು ಕುಂಭ-ಕಳಸ ಮುತೈದೆಯರು, ಪುರವಂತರು, ಡೊಳ್ಳು ಕುಣಿತ ಹಾಗೂ ಅನೇಕ ವಾದ್ಯ ಕಲಾವಿದರ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದರು.
ಅಂದು ಬೆಳಗ್ಗೆ 11.30ಕ್ಕೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹಾಗೂ ಜಿಲ್ಲಾಡಳಿತ ಮತ್ತು ಜಯಂತ್ಯುತ್ಸವ ಸಮಿತಿ ವತಿಯಿಂದ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು. ಮೃತ್ಯುಂಜಯ ಪಲ್ಲಾಪುರ ಮಠ, ವೀರೂ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ಶರಣು ಹೆಬ್ಬಗಾ, ರಾಜಕುಮಾರ ಅವಂಟಗಿ ಇತರರಿದ್ದರು.