ಎಸ್‌ಯುಸಿಐ ಸಂಸ್ಥಾಪಕ ಶಿವದಾಸ ಘೋಷ್ ಸ್ಮರಣೆ

0
54

ವಾಡಿ: ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ರವಿವಾರ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಹಾನ್ ಮಾರ್ಕ್ಸ್‌ವಾದಿ ಚಿಂತಕ ಕಾಮ್ರೇಡ್ ಶಿವದಾಸ್ ಘೋಷ್ ಅವರ ೪೩ನೇ ಸ್ಮಾರಕ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕಾಮ್ರೇಡ್ ವಿ.ಜಿ.ದೇಸಾಯಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ೭೨ ವರ್ಷಗಳ ಕಾಲ ವಿವಿಧ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಭಾರತವನ್ನು ಆಳಿರುವ ಟಾಟಾ, ಬಿರ್ಲಾ, ಅಂಬಾನಿ, ಅದಾನಿ, ಕಿರ್ಲೋಸ್ಕರ್, ಗೋಯಂಕಾ ರಂತಹ ಬಂಡವಾಳಶಾಹಿಗಳು ದುಡಿಯುವ ಜನರ ಶೋಷಣೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಪಕ್ಷಗಳೆಲ್ಲ ಜನಪರವಾಗಿದ್ದರೆ ಇಂದಿಗೂ ದೇಶದಲ್ಲಿ ಬಡತನ, ಹಸಿವು, ದಾರಿದ್ರ್ಯ ಜೀವಂತ ಇರುತ್ತಿರಲಿಲ್ಲ. ಪ್ರಜಾತಂತ್ರದ ಹೆಸರಿನಲ್ಲಿ ಪ್ರಜೆಗಳ ಶೋಷಣೆ ನಡೆದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳು ಶ್ರೀಮಂತರ ಹಿತಕಾಪಾಡುತ್ತಿವೆ. ಯಾವ ಪಕ್ಷಗಳೂ ದುಡಿಯುವ ಜನರ ಪರವಾಗಿಲ್ಲ ಎಂದು ಆರೋಪಿಸಿದರು.

Contact Your\'s Advertisement; 9902492681

ಪಶ್ಚಿಮ ಬಂಗಾಳದಲ್ಲಿ ೧೯೪೮ರಲ್ಲಿ ಕೇವಲ ಏಳು ಜನ ಸಂಗಾತಿಗಳೊಂದಿಗೆ ಕೂಡಿಕೊಂಡು ಎಸ್‌ಯುಸಿಐ ಪಕ್ಷವನ್ನು ಸ್ಥಾಪಿಸಿದ ಮಾರ್ಕ್ಸ್‌ವಾದಿ ಚಿಂತಕ ಕಾಮ್ರೇಡ್ ಶಿವದಾಸ್ ಘೋಷ್, ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಪಕ್ಷವನ್ನು ಬಲಪಡಿಸಿದ್ದಾರೆ. ಭಾರತದಲ್ಲಿದ್ದ ನಾಮಾಂಕಿತ ಕಮ್ಯುನಿಸ್ಟ್ ಪಕ್ಷಗಳಾದ ಸಿಪಿಐ, ಸಿಪಿಎಂ ಹಾಗೂ ಸಿಪಿಐ (ಎಂಎಲ್) ಪಕ್ಷಗಳಿಗೆ ಪರ್ಯಾಯವಾಗಿ ಎಸ್‌ಯುಸಿಐ ಬೆಳೆಸಿದರು. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳು ನೀಡುವ ಹಣದಿಂದ ಉಸಿರಾಡುತ್ತಿವೆ. ಎಸ್‌ಯುಸಿಐ (ಸಿ) ಪಕ್ಷ ಮಾತ್ರ ಜನಸಾಮಾನ್ಯರು ನೀಡುವ ಹಣದಿಂದ ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಕಂಕಣಬದ್ಧವಾಗಿ ಹೋರಾಡುತ್ತಿದೆ ಎಂದು ವಿವರಿಸಿದರು.

ಎಸ್‌ಯುಸಿಐ (ಸಿ) ಪಕ್ಷದ ವಾಡಿ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಮಾತನಾಡಿ, ೭೦ ವರ್ಷ ಬಡವರ ಹೆಸರಿನಲ್ಲಿ ರಾಜಕಾರಣ ಮಾಡಿದವರು ಭಾರತದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಭೂತದಂತೆ ಬೆಳೆಸಿದ್ದಾರೆ. ಅಚ್ಚೇ ದಿನಗಳ ಹೆಸರಿನಲ್ಲಿ ರಾಜ್ಯಭಾರ ನಡೆಸುತ್ತಿರುವ ಸರಕಾರ, ಧರ್ಮಾಧಾರಿತ ರಾಜಕಾರಣ ಮಾಡುತ್ತ ಕೋಮುಸಾಮರಸ್ಯವನ್ನು ಹಾಳು ಮಾಡುವ ಮೂಲಕ ಜನರ ಐಕ್ಯತೆ ಒಡೆಯುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಜನರನ್ನು ತುಳಿದು ಕಾರ್ಖಾನೆಗಳ ಮಾಲೀಕರನ್ನು ಬೆಳೆಸುತ್ತಿವೆ. ದುಡಿಯುವ ಜನರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಒಡೆದು ಹೋಗದೆ ಒಗ್ಗಟ್ಟಿನಿಂದ ಹೋರಾಡಲು ಎಸ್‌ಯುಸಿಐ ಪಕ್ಷದ ಕೆಂಪುಭಾವುಟ ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಪಕ್ಷದ ಮುಖಂಡರಾದ ಗುಂಡಣ್ಣ ಎಂ.ಕೆ, ಶರಣು ಹೇರೂರ ಸೇರಿದಂತೆ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಎಸ್‌ಯುಸಿಐ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕಾ.ಶಿವುದಾಸ್ ಘೋಷ್ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಗೌರವ ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here