ಕಲಬುರಗಿ: ಸಮಾಜದಲ್ಲಿ ಮೌಲ್ಯಗಳು ಹಾಳಾಗುತ್ತಿರುವಂತೆ ಮಾಧ್ಯಮಗಳಲ್ಲೂ ಮೌಲ್ಯಗಳು ಹಾಳಾಗುತ್ತಿವೆ ಎಂದು ಪತ್ರಕರ್ತ ಸಂಜಯ ಪಾಟೀಲ ತಿಳಿಸಿದರು.
ಆಳಂದ ತಾಲ್ಲೂಕಿನ ಜಿಡಾಗದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ: ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಾಧ್ಯಮವೂ ಕೂಡ ಇಂದು ಉದ್ಯಮವಾಗಿರುವುದರಿಂದ ಮಾಧ್ಯಮಗಳಲ್ಲಿ ಮೌಲ್ಯ ಹುಡುಕಾಡುವುದು ತಪ್ಪು ಎಂಬ ಭಾವನೆ ಜನ ಸಾಮಾನ್ಯರಲ್ಲಿ ಕೂಡ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮಗಳು ವಿಸ್ಮಯ, ಕ್ರೋದ, ಹಿಂಸೆ, ಜಾತಿ, ಕೋಮು ಭಾವನೆ ಬಿತ್ತುತ್ತಿವೆ. ಹೀಗಾಗಿ ಮಾಧ್ಯಗಳಿಂದ ಯಾವ ಸಂದೇಶ ಕೊಡಬಹುದು ಎಂಬ ಪ್ರಶ್ನೆ ಎದುರಾಗುತ್ತಿದೆ. ಮುದ್ರಣ ಮಾಧ್ಯಮಗಳಲ್ಲಿ ಅಷ್ಟಿಷ್ಟು ಜಬಾಬ್ದಾರಿ ಉಳಿದುಕೊಂಡಿದೆ. ಇಷ್ಟೆಲ್ಲವುಗಳ ಮಧ್ಯೆ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಮಾಧ್ಯಮ ರಂಗ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಿ.ವಿ. ಚಕ್ರವರ್ತಿ ಮಾತನಾಡಿ, ಗಾಂಧೀಜಿ, ಅಂಬೇಡ್ಕರ್ ಅವರು ಹೊರ ತರುತ್ತಿದ್ದ ಪತ್ರಿಕೆಗಳು ದೇಶಪ್ರೇಮ, ಸ್ವಾತಂತ್ರ್ಯ ಹುಟ್ಟಿಸುವ, ಅಸ್ಪೃಶ್ಯತೆ ನಿವಾರಣೆಯನ್ನು ಮಾಡುತ್ತಿದ್ದವು. ಸ್ವಾತಂತ್ರ್ಯ ನಂತರವೂ ಮಾಧ್ಯಮಗಳು ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದವು. ಆದರೆ ಮಾಧ್ಯಮಗಳು ಇಂದು ವಿಶ್ವಾಸಾರ್ಹತೆ ಯನ್ನು ಉಳಿಸಿಕೊಂಡಿಲ್ಲ ಎಂದು ತಿಳಿಸಿದರು.
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕೋಮುದ್ವೇಷ ಸಾಮರಸ್ಯ ತಾಣವಾದ ಕಲ್ಯಾಣ ನಾಡಿನಲ್ಲಿ ಹಬ್ಬುತ್ತಿರುವುದು ಆತಂಕದ ವಿಷಯ. ಜನಪರ, ಜೀವಪರ ಸುದ್ದಿಗಳನ್ನು ವಿವೇಚನೆಯಿಂದ ಪ್ರಕಟಿಸಿದಾಗ ಮಾತ್ರ ಸಮಾಜದಲ್ಲಿ ಜಾಗೃತಿ ಉಂಟು ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸೋಮಶೇಖರ ಜಮಶೆಟ್ಟಿ, ಕಲ್ಯಾಣಿ ಸಾವಳಗಿ, ಅಶೋಕ ರೆಡ್ಡಿ, ಆನಂದ ದೇಶಮುಖ, ಮಹೇಶ ಕಾಶಿ, ರಾಜಶೇಖರ ಹರಿಹರ, ಮಲ್ಲಿಕಾರ್ಜುನ ಕಂದಗೂಳೆ ವೇದಿಕೆಯಲ್ಲಿದ್ದರು.
ರವಿಕುಮಾರ ಶಾಪುರಕರ್ ನಿರೂಪಿಸಿದರು. ನಾಗಪ್ಪ ಎಂ.ಸಜ್ಜನ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಇಬ್ರಾಹಿಂಪುರ ವಂದಿಸಿದರು.