ಕಲಬುರಗಿ: ಯಾವ ಔಷಧಿ ಕೇಂದ್ರದಲ್ಲಿ ದೊರೆಯದ ಮಾತ್ರೆ ವಚನ ಸಾಹಿತ್ಯ ಎಂಬ ಔಷಧಿ ಕೇಂದ್ರದಲ್ಲಿ ದೊರೆಯುತ್ತವೆ ಎಂದು ಡಾ.ಗುರುಲಿಂಗಪ್ಪ ಧಬಾಲೆ ತಿಳಿಸಿದರು.
ಆಳಂದ ತಾಲ್ಲೂಕಿನ ಜಿಡಾಗದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗ್ರಾಮೀಣ ಜನಜೀವನ ನೆಮ್ಮದಿಯ ತಾಣ ಗೋಷ್ಠಿ-3ರ ಆದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವಿಕಾರ ಸಂಸ್ಕೃತಿ ಬೆಳೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಅಸ್ಪೃಶ್ಯತೆ, ಮೂಢನಂಬಿಕೆ ತೊರೆದು ಕುಟುಂಬ ಹಾಗೂ ಸಮಾಜದ ಆರೋಗ್ಯ ಕಾಪಾಡಿಕೊಂಡು ಬರಬೇಕು, ಹದಗೆಟ್ಟಿರುವ ಸಾಮಾಜಿಕ, ಸಾಂಸ್ಕೃತಿಕ ವಾತಾವರಣವನ್ನು ತಿಳಿ ಮಾಡುವ ಕೆಲಸ ಸಾಹಿತ್ಯ ಸಮ್ಮೇಳನಗಳು ಮಾಡಬೇಕು ಎಂದು ತಿಳಿಸಿದರು.
ಕೌಟುಂಬಿಕ ಸಾಮರಸ್ಯ ವಿಷಯ ಕುರಿತು ಮಾತನಾಡಿದ ಡಾ. ಶಿವಲೀಲಾ ಚಟ್ನಳ್ಳಿ, ಕುಟುಂಬಗಳಲ್ಲಿ ಸಮಾರಸ್ಯ ಇಲ್ಲದ್ದರಿಂದ ದಂಪತಿ, ಹಿರಿಯರು ಹಾಗೂ ಮಕ್ಕಳ ಮೇಲೆ ಬಹಳ ಪ್ರಭಾವ ಬೀರುತ್ತಿದೆ ಅಭಿಪ್ರಾಯಪಟ್ಟರು.
ವಿವಾಹ ವಿಚ್ಛೇದನದಿಂದ ಪ್ರತಿದಿನಕ್ಕೆ ಬೆಂಗಳೂರು ಒಂದರಲ್ಲಿ ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ. ಹಿರಿಯರಿಗೆ ಸುರಕ್ಷತೆ ಇಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತಿಲ್ಲ. ಹೀಗಾಗಿ ಕುಟುಂಬ ಕಟ್ಟುವ ಮೂಲಕ ಸಮಾಜ ಕಟ್ಟುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಯುವಶಕ್ತಿ-ರಾಷ್ಟ್ರೀಯ ಭಾವೈಕ್ಯತೆ ವಿಷಯ ಕುರಿತು ಡಾ.ಲಕ್ಷ್ಮೀಕಾಂತ ಪಂಚಾಳ ಮಾತನಾಡಿ, ರಾಷ್ಟ್ರದ ಅಭಿವೃದ್ಧಿಗೆ ಭೌತಿಕ ಸಂಪತ್ತಿನ ಜೊತೆಗೆ ಭೌದ್ಧಿಕ ಸಂಪತ್ತು ಕೂಡ ಬಹಳ ಅಗತ್ಯ. ವಿಶ್ವದಲ್ಲಿ ಭಾರತ ತನ್ನ ಬೌದ್ಧಿಕ ಶಕ್ತಿಯಿಂದ ಹೆಸರು ಮಾಡಿದ್ದಾರೆ ಎಂದರು.
ಸೃಜನಶೀಲ ಹಾಗೂ ಯುವಶಕ್ತಿಯ ಜೊತೆಗೆ ಭಾವೈಕ್ಯತೆಯ ಮೂಲಕ ರಾಷ್ಟ್ರ ಕಟ್ಟುವ ಜವಾಬ್ದಾರಿ ಯುವಕರ ಮೇಲಿದೆ. ಯುವಕರು ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯಬೇಕು ಎಂದು ತಿಳಿಸಿದರು.
ಗ್ರಾಮೀಣ ಜನಜೀವನ-ಆರೋಗ್ಯ ವಿಷಯ ಕುರಿತು ಡಾ. ಎಚ್.ಎಸ್. ದೇಶಪಾಂಡೆ ಮಾತನಾಡಿ, ಯೋಗ ಸಾಧನೆ ಹಾಗೂ ನಗುವಿನಿಂದ ಆರೋಗ್ಯ ಕಾಪಾಡಿಕೊಂಡು ಬರಬೇಕು.ಎಂದು ತಿಳಿಸಿದರು.
ಅಪ್ಪಾಸಾಬ ತೀರ್ಥೆ ಇತರರಿದ್ದರು. ಡಾ. ಚನ್ನಮ್ಮ ಅಲ್ಬಾ ನಿರೂಪಿಸಿದರು. ಧರ್ಮಣ್ಣ ಧನ್ನಿ ಸ್ವಾಗತಿಸಿದರು. ಡಾ.ಸುಮಂಗಲಾ ರೆಡ್ಡಿ ವಂದಿಸಿದರು.