ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಿದ್ದ ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ಕಲ್ಲಂಗಡಿ, ದ್ರಾಕ್ಷಿ, ನಿಂಬೆ, ಬಾಳೆ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುವುದರಿಂದ ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ 25,000 ರೂ. ತೋಟಗಾರಿಕೆ ಬೆಳೆಗಳಿಗೆ ಎಕರೆಗೆ 50,000 ರೂ. ಶೀಘ್ರವೇ ಪರಿಹಾರ ಒದಗಿಸಬೇಕು ಎಂದು ಮಾಜಿ ಉಪ ಸಬಾಪತಿ ಬಿ.ಆರ್. ಪಾಟೀಲ ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಅತೀವೃಷ್ಟಿಯಿಂದಾಗಿ ಬಿತ್ತನೆ ಮಾಡಿದ ಉದ್ದು, ಹೆಸರು, ಸೋಯಾಬಿನ್ ಮತ್ತು ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ನೆಟೆ ರೋಗದಿಂದ ಸಂಪೂರ್ಣವಾಗಿ ಹಾಳಾಗಿದ್ದು, ಇತ್ತೀಚಿಗೆ ಬಿದ್ದ ಆಲಿಕಲ್ಲು ಮಳೆಯಿಂದಾಗಿ ರೈತನಿಗೆÀ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಣಿಜ್ಯ ಬೆಳೆಗಳನ್ನು ನಂಬಿರುವ ರೈತರು ಬ್ಯಾಂಕ್‍ಗಳಲ್ಲಿ ಸಹಕರಿ ಸಂಸ್ಥೆಗಳಿಂದ ಸಾಲ ಪಡೆದು ಬೀಜ, ರಸಗೊಬ್ಬರ ತಂದು ಬಿತ್ತನೆ ಮಾಡಿದ್ದು, ಪ್ರಕೃತಿ ವಿಕೋಪದಿಂದಾಗಿ ಸಂಪೂರ್ಣವಾಗಿ ಬೆಳೆಗಳು ಹಾನಿಯಾಗಿವೆ. ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದು ದಾಮ್ ದುಪ್ಪಟ್ಟು ಮಾಡುವುದಾಗಿ ಹೇಳಿ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ರೀತಿಯಿಂದ ಬೆಂಬಲ ಬೆಲೆ ನೀಡದ ಡಬಲ್ ಇಂಜಿನ್ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದರು.
ಅಸಮರ್ಪಕ ಪರಿಹಾರ ನೀಡುವ ಮೂಲಕ ರೈತರನ್ನು ಬೀದಿಗೆ ತಂದಿರುವ ಸರ್ಕಾರ ರೈತರಿಗೆ ಖಾಸಗಿ ಕಂಪನಿಗಳಿಂದ ವಿಮೆ ಕೊಡಿಸುವಲ್ಲಿ ಸಹ ಮೋಸ ಮಾಡಲಾಗುತ್ತಿದ್ದು, ಹಾನಿಗೊಳಗಾದ ರೈತರ ಪ್ರತಿ ಹೆಕ್ಟೇರ್‍ಗೆ 10 ಸಾವಿರ ರೂ. ಪರಿಹಾರ ನೀಡುವುದಾಗಿ ಕಲಬುರಗಿಗೆ ಭೇಟಿ ನೀಡಿದಾಗ ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ರೈತರಿಗೆ ಬಿಡಿಗಾಸು ಕೊಟ್ಟಿರುವುದಿಲ್ಲ ಎಂದು ಆರೋಪಿಸಿದರು.
ಸರ್ಕಾರದ ಈ ಚಾರ್ ದಿನ್ ಕಾ ಮಹಿಮಾ ಕುರಿತು ಸರ್ಕಾರದ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಸಹವಿವರವಗಿ ಪತ್ರ ಬರೆದು ತುರ್ತಾಗಿ ಪರಿಹಾರ ಘೋಷಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಲಾಗಿದೆ ಅವರು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸಿದ್ದರಾಮ ಪ್ಯಾಟಿ, ಮಹಾಂತಪ್ಪ ಸಂಗಾವಿ, ಗಣೇಶ ಪಾಟೀಲ್ ಇತರರಿದ್ದರು.
ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಳಂದ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದೆ ಬಂದರೆ ಆಳಂದ ಕ್ಷೇತ್ರ ಬಿಟ್ಟು ಕೊಟ್ಟು ತಾವು ತ್ಯಾಗ ಮಾಡುವುದಾಗಿ ಮಾಜಿ ಶಾಸಕ ಬಿ.ಆರ್. ಪಾಟೀಲ್ ತಿಳಿಸಿದರು.
ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದರೆ ಸಾಕು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ತಮ್ಮದು ಎಂದರು. ಆಳಂದ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಟ್ಟು, ತಾವು ಕ್ಷೇತ್ರ ತ್ಯಾಗ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆದರೂ ಆಳಂದ ಕ್ಷೇತ್ರಕ್ಕೆ ಬಂದರೆ ನನಗೆ ಅತೀವ ಸಂತೋಷ ಎಂದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರಂತೆ ಇನ್ನಷ್ಟು ವಿಕೆಟ್ ಗಳು ಬಿಜೆಪಿಯಿಂದ ಪತನವಾಗಲಿವೆ. ಕಾದು ನೋಡಿ ಎಂದರಲ್ಲದೇ ಯಾರ್ಯಾರು ಬರ್ತಾರೆಂದರೆ ಊಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಬಿಜೆಪಿಯವರು ಕಾಂಗ್ರೆಸ್‍ಗೆ ಬರಲಿದ್ದಾರೆ ಎಂದು ಹೇಳಿದರು.