ಕಮಲಾಪುರ: ಬಸವಾದಿ ಶಿವಶರಣರು ಪ್ರತಿಪಾದಿಸಿದ ಬಹುತೇಕ ನೈತಿಕ ಮೌಲ್ಯಗಳು ಇಂದು ಸಂವಿಧಾನದ ಶಾಸನಗಳು, ಕಾನೂನುಗಳಾಗಿವೆ ಎಂದು ಶರಣ ಚಿಂತಕ ಕುಪೇಂದ್ರ ಪಾಟೀಲ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಮಾತೋಶ್ರೀ ಮಹಾದೇವಿಯಮ್ಮ ಗುರುಪಾದಪ್ಪ ಮಾಲಿಪಾಟೀಲ ಸ್ಮರಣಾರ್ಥ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ ‘ವಚನ ಸಾಹಿತ್ಯ ಮತ್ತು ಸಂವಿಧಾನದ ಆಶಯ‘ ಕುರಿತು ಮಾತನಾಡಿದರು.
ಜಾತಿ, ವರ್ಣ, ವರ್ಗಗಳು ದೈವ ಸೃಷ್ಟಿಯಲ್ಲ, ಇವನ್ಯಾರವ ಎಂದೆನಿಸದೆ ಇಂವ ನಮ್ಮ ಎಂದೆನಿಸಯ್ಯ ಎಂದವರು ಶರಣರು. ಕೆಳ ಜಾತಿಯವರನ್ನು ಅಣ್ಣ, ತಮ್ಮ, ಅಪ್ಪ ಎಂದು ಸಂಬೋಧಿಸು ಸಮಾನತೆಯ ಪ್ರತೀಕ. ಕಾಯಕ, ದಾಸೋಹದ ಮೂಲಕ ದುಡಿಮೆಯ ಶ್ರೇಷ್ಠತೆ, ಸಂಪತ್ತಿನ ಕ್ರೋಢಿಕರಣಕ್ಕೆ ಕಡಿವಾಣ ಹಾಕಿದ್ದರು. ಅನುಭವ ಮಂಟಪ ಸ್ಥಾಪಿಸಿ ಜಾತಿ, ಲಿಂಗ, ಧರ್ಮ, ಪ್ರದೇಶ ಭೇಧವಿಲ್ಲದೆ ಸರ್ವರ ವಾದ ಮಂಡಿಸಲು ಅನುವು ಮಾಡಿಕೊಟ್ಟರು. ಜ್ಯಾತ್ಯಾತೀತೆ, ಸಮಾಜವಾದ, ಸಮಾನತೆ, ಸ್ವಾತಂತ್ರ್ಯ, ಸಾರ್ವಭೌಮತೆ, ಮನಾವ ಹಕ್ಕುಗಳು ಒದಗಿಸಿದರು. ಇವೆಲ್ಲವೂ ತಾವು ರಚಿಸಿದ ವಚನಗಳಲ್ಲಿ ತಿಳಿಸಿದ್ದಾರೆ. ವಚನಗಳು ಕವಿ ಕಲ್ಪನೆಯ ಕೃತಿಗಳಲ್ಲ, ಜನಜೀವನದ ಅನುಭವಗಳನ್ನು ಒಳಗೊಂಡ ನೈತಿಕ ಮೌಲ್ಯಗಳು. ಅವುಗಳನ್ನು ಇಂದು ನಾವು ಶಾಸನ ರೂಪದಲ್ಲಿ ಕಾಣುತ್ತೇವೆ ಎಂದರು.
ಶರಣಬಸವ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಕಲ್ಯಾಣರಾವ ಪಾಟೀಲ ಮಾತನಾಡಿ ವಿದ್ಯಾರ್ಥಿಗಳ ಕಾಲಹರಣ ಮಾಡದೆ ಅಧ್ಯನದಲ್ಲಿ ತೊಡಗಬೇಕು. ಸಣ್ಣ ಸಮಸ್ಯೆಗಳ ನೆಪವೊಡ್ಡಿ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ಸತತ ಪರಿಶ್ರಮದಿಂದ ಸಾಧನೆ ಸುಲಭ ಎಂದರು.
ಪ್ರಾಚಾರ್ಯರಾದ ಅಮೃತಾ ಕಟಕೆ ಮಾತನಾಡಿ ರಾಜ ಪ್ರಭುತ್ವದಲ್ಲಿ ಪ್ರಜೆಗಳಿಗಾಗುವ ಶೋಷಣೆಯಿಂದ ಮುಕ್ತಿಗೊಳಿಸಲು ಪ್ರಜಾಪ್ರಭುತ್ವ ತರಲಾಯಿತು. ಪ್ರಜ್ಞಾ ಹೀನ ಪ್ರಜೆಗಳಿಂದ ಪ್ರಜಾಪ್ರಭುತ್ವ ಮತ್ತೆ ರಾಜಪ್ರಭುತ್ವದತ್ತ ಮರಳುತ್ತಿದೆ. ಹೀಗಾಗಿ ಈಗ ನಮಗೆ ಬೇಕಾಗಿರುವುದು ಪ್ರಜ್ಞಾಪ್ರಭುತ್ವ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ, ಪ್ರಾಧ್ಯಾಪಕಿ ಶಾಂತಾ ಅಸ್ಟಿಗೆ, ಜಗದೇವಪ್ಪ ಧರಣಿ, ಶಿವಲೀಲಾ, ನಿವೇದಿತಾ, ಸವಿತಾ ಪಾಟೀಲ ಮತ್ತಿತರರು ಇದ್ದರು.