ಶಹಾಬಾದ; 31.55 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

0
24

ಶಹಾಬಾದ: ನಗರದ ನಗರಸಭೆಯಲ್ಲಿ ಗುರುವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಸುಮಾರು 31.55 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.

ನಗರಸಭೆಯ 2023-24ನೇ ಸಾಲಿನ ಪ್ರಾರಂಭಿಕ ಶುಲ್ಕ 29.04 ಲಕ್ಷ ರೂ, ಅಂದಾಜು ಆದಾಯ 2826.84 ಲಕ್ಷ ಸೇರಿದಂತೆ ಒಟ್ಟು 2855.88 ಲಕ್ಷ ರೂ. ಗಳ ಬಜೆಟನಲ್ಲಿ ಅಂದಾಜು ವೆಚ್ಚ 2824.33 ಲಕ್ಷ ರೂ.ಗಳಾಗಲಿದ್ದು, ಒಟ್ಟು 31.55 ಲಕ್ಷ ರೂ. ಉಳಿತಾಯ ಬಜೆಟ್‍ನ್ನು ಲೆಕ್ಕಾಧಿಕಾರಿ ನಾರಾಯಣರೆಡ್ಡಿ ಮಂಡಿಸಿದರು.ಇದಕ್ಕೆ ಸರ್ವ ಸದಸ್ಯರು ಅನುಮೋದನೆ ನೀಡಿದರು.

Contact Your\'s Advertisement; 9902492681

ಸದಸ್ಯರ ವಾರ್ಡಗಳಲ್ಲಿನ ಸಮಸ್ಯೆಗಳಿಗೆ ಪೌರಾಯುಕ್ತರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಐದು ದಿನಗಳ ಹಿಂದಷ್ಟೆ ಕರೆದ ಬಜೆಟ್ ಸಭೆಗೆ ನಗರಸಭೆಯ ಸರ್ವ ಸದಸ್ಯರು ಬಹಿಷ್ಕರಿಸಿದ್ದರು.ನಂತರ ಗುರುವಾರ 11 ಗಂಟೆಗೆ ಮತ್ತೆ ಬಜೆಟ್ ಸಭೆ ಕರೆದ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಸಭೆಗೆ ಬಾರದನ್ನು ಕಂಡು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹಾಗೂ ಪೌರಾಯುಕ್ತ ಬಸವರಾಜ ಹೆಬ್ಬಾಳ ಮನವೊಲಿಸಿ ತಡವಾದರೂ ಬಜೆಟ್ ಸಭೆ ಪ್ರಾರಂಭಿಸಿದರು.

ನಗರಸಭೆಯ ಸದಸ್ಯ ರವಿ ರಾಠೋಡ, ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸದಸ್ಯರ ಮಾತಿಗೆ ಸ್ಪಂದಿಸಬೇಕು. ಅಲ್ಲದೇ ನಮ್ಮ ವಾರ್ಡಗಳಲ್ಲಿನ ಸಮಸ್ಯೆ ಬಗೆಹರಿಸಬೇಕು. ಜನರಿಂದ ಉಗುಳಿಸಿಕೊಳ್ಳುವ ಪರಿಸ್ಥಿತಿ ತರದಂತೆ ನೋಡಿಕೊಳ್ಳಿ. ನಗರಸಭೆಯ ಸದಸ್ಯರ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬೇಕೆಂದು ತಾಕೀತು ಮಾಡಿದರು.ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಮುಖ್ಯ ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು.ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟರೂ ಕಾರ್ಯಗತಗೊಳ್ಳುತ್ತಿಲ್ಲ.ಇದರಿಂದ ಬೇಸಿಗೆಯಲ್ಲಿ ಮಳೆಗಾಲದಲ್ಲಿ ಸಾರ್ವಜನಿಕರು ಬಹಳಷ್ಟು ತೊಂದರೆಗೆ ಈಡಾಗುತ್ತಿದ್ದಾರೆ.ಕೂಡಲೇ ತಂಗುದಾಣ ನಿರ್ಮಿಸುವತ್ತ ಗಮನಹರಿಸಿ ಎಂದರು.

ನಂತರ ನಗರಸಭೆಯ ಸದಸ್ಯ ನಾಗರಾಜ ಕರಣಿಕ್ ಮಾತನಾಡಿ, ನಗರದಲ್ಲಿ ಸಾರ್ವಜನಿಕರಿಗೆ ಮೂತ್ರಾಲಯ ಹಾಗೂ ಶೌಚಾಲಯವನ್ನು ನಿರ್ಮಿಸಬೇಕು.ಜನರು ಮೂತ್ರಾಲಯವಿಲ್ಲದೆ ಇರುವುದರಿಂದ ಎಲ್ಲೆಂದರಲ್ಲಿ ಸರಕಾರಿ ಕಚೇರಿಯ ಗೋಡೆಗಳಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಜನರಿಗೆ ಕಾಣುವಂಥ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ನಗರದ ಉದ್ಯಾನವನ ಅಭಿವೃದ್ಧಿಪಡಿಸಿ.ನಗರದ ಸೌಂದರ್ಯಿಕರಣ ಹೆಚ್ಚಿಸುವ ಮೂಲಕ ಮಾದರಿ ನಗರ ಮಾಡುವಲ್ಲಿ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಪೌರಾಯುಕ್ತ ಬಸವರಾಜ ಹೆಬ್ಬಾಳ, ನಗರಸಭೆಯ ಸರ್ವ ಸದಸ್ಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಎಲ್ಲರದಾಗಿದೆ.ನಿಮ್ಮ ಸಲಹೆಗಳನ್ನು ಪರಿಗಣಿಸಿ ಹಾಗೂ ತಮ್ಮ ವಾರ್ಡ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೆನೆ ಎಂದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ,ಎಇಇ ಶರಣು ಪೂಜಾರಿ, ಪರಿಸರ ಎಇಇ ಮುಜಾಮಿಲ್ ಅಲಂ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ, ಆರೋಗ್ಯ ನೀರಿಕ್ಷಕ ಶಿವರಾಜಕುಮಾರ, ನಗರಸಭೆಯ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here