ಮನುಕುಲ ಉದ್ಧರಿಸಿದ ಸತ್ಪುರುಷ ಶರಣಬಸವೇಶ್ವರರು

0
61

ಜನರ ಕಷ್ಟಗಳನ್ನು ಕಳೆದು ಮನುಕುಲದ ಒಳಿತಿಗಾಗಿ ಅರ್ಚನ, ಅರ್ಪಣ, ಅನುಭಾವ ನಡೆಸಿದ ಸತ್ಪುರುಷ ಮಹಾದಾಸೋಹಿ ಶರಣಬಸವೇಶ್ವರರು ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸಿದ್ದಮ್ಮ ಗುಡೇದ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಒಂದು ಸಲ ದಾಸೋಹ ಮನೆಯಲ್ಲಿ ಭಕ್ತರಿಗಾಗಿ ಹುಗ್ಗಿ ಮಾಡಲಾಗುತ್ತಿತ್ತು. ಕುಂಬಾರ ಲಿಂಗಣ್ಣ ಎನ್ನುವ ಭಕ್ತನು ಬಹಳ ಭಕ್ತಿಯಿಂದ ಬಂದ ಭಕ್ತರಿಗೆ ಪ್ರಸಾದ ಮಾಡಿಸುತ್ತಿದ್ದ. ಒಂದು ಸಲ ಆ ಹುಗ್ಗಿಯ ಕಡಾಯಿಯೊಳಗೆ ಬಿದ್ದು ಬಿಟ್ಟ. ’ ಯಪ್ಪಾ ಶರಣಾ’ ಎಂದು ಕೂಗುತ್ತಲೇ ಇದ್ದ. ಶರಣರಿಗೆ ಈ ವಿಷಯ ತಿಳಿದು ವಿಭೂತಿ ಹಿಡಿದು ಹುಗ್ಗಿಯ ಕಡಾಯಿ ಕಡೆಗೆ ಬಂದರು. ಶರಣರು ವಿಭೂತಿಯನ್ನು ಆ ಪಾತ್ರೆಯೊಳಗೆ ಹಾಕಿ ’ ಶಾಂತಳಾಗು ತಾಯಿ’ ಎಂದು ಪ್ರಸಾದಕ್ಕೆ ಕೈ ಮುಗಿಯುತ್ತಾರೆ. ತಕ್ಷಣವೇ ಬೆಂಕಿಯಾಗಿರುವ ಕಡಾಯಿ ತಣ್ಣಗಾಗುತ್ತದೆ. ಶರಣರು ಲಿಂಗಣ್ಣಗೆ ಹೊರಗೆ ತೆಗೆಯಲು ತಿಳಿಸುತ್ತಾರೆ. ಅವನಿಗೆ ಹೊರಗೆ ತೆಗೆದು ನೋಡಿದಾಗ ಒಂದು ಗುಳ್ಳೆಗಳಿಲ್ಲ, ಉರಿ ನೋವುಗಳಿಲ್ಲ. ಸಾವಿನ ದವಡೆಯಿಂದ ಶರಣರು ಅವನಿಗೆ ಪಾರು ಮಾಡುತ್ತಾರೆ.

ಕಲಬುರ್ಗಿಯ ಬ್ರಹ್ಮಪೂರದ ಬ್ರಾಹ್ಮಣ ಜಾನಕಿಬಾಯಿ, ಶರಣರ ಭಕ್ತೆಯಾಗಿದ್ದು ಅವರ ಹರಕೆಯಿಂದ ಮಗನನ್ನು ಪಡೆದಿರುತ್ತಾಳೆ. ಆ ಕೂಸಿನ ಮುಂಜಿಯ ದಿನ ಒಂದು ಸಾವಿರ ರೂಪಾಯಿ ಶರಣರ ದಾಸೋಹಕ್ಕೆ ಅರ್ಪಿಸುವುದಾಗಿ ಹೇಳಿರುತ್ತಾಳೆ. ಮುಂಜಿಯ ದಿನ ತನ್ನ ಗಂಡನಿಗೆ ವಿಷಯ ತಿಳಿಸಿದಾಗ ಅವನು ಶರಣರನ್ನು ಬಯ್ಯುತ್ತಲೇ ಆತ ಹೆಂಡತಿಗೆ ಹೊಡೆಯುತ್ತಾನೆ. ಆದರೆ ಮಡದಿಯ ಮೈಮೇಲಿನ ಏಟುಗಳೆಲ್ಲ ಅವನಿಗೆ ಬಿದ್ದು ಆತನ ಮೈಯಿಂದಲೇ ರಕ್ತ ಹರಿಯಲು ಪ್ರಾರಂಭಿಸುತ್ತದೆ. ಶರಣರಿಗೆ ಬೈದದ್ದೆ ಇದಕ್ಕೆಲ್ಲ ಕಾರಣವೆಂದರಿತ ಆ ಬ್ರಾಹ್ಮಣ ತನ್ನ ಮಡದಿ ಜಾನಕಿಬಾಯಿಯನ್ನು ಕರೆದುಕೊಂಡು ಶರಣರಲ್ಲಿಗೆ ಬಂದು ಎಲ್ಲವನ್ನು ಶರಣರೆದುರಿಗೆ ಹೇಳುತ್ತಾನೆ. ಶರಣರು ಭಸ್ಮ ತಂದು ಅವನ ಮೈಗೆಲ್ಲ ಹಚ್ಚಿದ ಕೂಡಲೇ ಎಲ್ಲವು ನಿಂತು ನೋವು ಕಡಿಮೆಯಾಗುತ್ತದೆ. ಸಾವಿರ ರೂಪಾಯಿ ದಾಸೋಹಕ್ಕರ್ಪಿಸಿ ಶರಣರ ಭಕ್ತನಾಗುತ್ತಾನೆ.

ಶರಣರ ದರ್ಶನಕ್ಕೆ ಬಂದ ಜನರು ಸಾಲಾಗಿ ನಿಂತಿರುತ್ತಾರೆ. ತಂದೆ ತಾಯಿಗಳೊಂದಿಗೆ ಬಂದ ಮಕ್ಕಳು ಅಲ್ಲಿಯೇ ಆಟವಾಡುತ್ತಿರುತ್ತಾರೆ. ಅಲ್ಲಿಗೆ ಸಮೀಪದಲ್ಲಿ ಬಂದ ಒಂದು ನಾಗರಹಾವನ್ನು ನೋಡಿ ಬಾಲಕನೊಬ್ಬ ಕಲ್ಲಿನಿಂದ ಹೊಡೆದ. ಸಿಟ್ಟಿನಿಂದ ಆ ಹಾವು ಆ ಬಾಲಕನಿಗೆ ಕಚ್ಚಿ ಅವನಿಗೆ ಸುತ್ತಿಕೊಳ್ಳುತ್ತದೆ. ಅದು ಶರಣರ ಕಿವಿಗೆ ಬೀಳುತ್ತದೆ. ಶರಣರು ಭಸ್ಮವನ್ನು ಹಿಡಿದುಕೊಂಡೇ ಬರುತ್ತಾರೆ. ಸರ್ಪವನ್ನು ಕಂಡು ಕೇಳುತ್ತಾರೆ ’ನೀನೇಕೆ ಬಂದೇ ಇಲ್ಲಿ, ಇದು ನಿನ್ನ ಜಾಗವಲ್ಲಪ್ಪ ನಾಗರಾಜ, ಇನ್ನು ಮುಂದೆ ಈ ನನ್ನ ಜಾಗದಾಗ ಬರಬೇಡ’ ಎನ್ನಲು ಶರಣರ ವಾಣಿಗೆ ಆ ಸರ್ಪ ಬಾಲಕನನ್ನು ಬಿಟ್ಟು ಹೊರಟು ಹೋಗುತ್ತದೆ. ನಂತರ ಶರಣರು ಕೂಸಿನ ಹಣೆಗೆ ಭಸ್ಮ ಹಚ್ಚಿದಾಗ ಕೂಸು ಮೊದಲಿನಂತಾಗುತ್ತದೆ. ಎಲ್ಲರೂ ಶರಣರ ಪಾದಕ್ಕೆ ನಮಸ್ಕರಿಸುತ್ತಾರೆ.

ಒಂದು ಸಲ ಶರಣರು ಬ್ರಹ್ಮಪೂರದ ಓಣಿಯಲ್ಲಿ ಬರುತ್ತಿದ್ದಾಗ ವೆಂಕಟ ಎನ್ನುವ ಬ್ರಾಹ್ಮಣ ಎದುರಾಗುತ್ತಾನೆ. ಶರಣರ ನೋಡಿ ಮಾರುದ್ದ ಹಾರುತ್ತಾನೆ. ಮುಟ್ಟಬೇಡ ಎಂದು ತನ್ನಷ್ಟಕ್ಕೆ ತಾನೇ ಗೊಣಗುತ್ತಾನೆ. ಮನಸ್ಸಿನೊಳಗೆ ನಕ್ಕ ಶರಣರು ಏನೊಂದು ಆಡದೆ ಮುಂದೆ ಹೋಗುತ್ತಾರೆ. ಅಲ್ಲಿಯೇ ಇದ್ದ ಹಂದಿಯೊಂದು ಆತನಿಗೆ ಬೆನ್ನಟ್ಟಿ ಮುಡುಚಟ ಮಾಡುತ್ತದೆ. ಆತ ಎಷ್ಟೇ ಸಲ ಸ್ನಾನ ಮಾಡಿ ಬಂದರೂ ಅದು ಹೊಂಚು ಹಾಕಿ ಆತನಿಗೆ ಮುಟ್ಟುತ್ತದೆ. ಸಾಕಾಗಿ ಅಳುತ್ತಾ ಕುಳಿತಾಗ ಹಿರಿಯ ಬ್ರಾಹ್ಮಣನೊಬ್ಬರು ಬಂದು ಶರಣರಿಗೆ ಅವಮಾನ ಮಾಡಿದ್ದಿ ಅದರ ಪ್ರತಿಫಲವಿದು ಹೋಗಿ ಶರಣರ ಪಾದ ಹಿಡಿ ಅಂದಾಗ ಶರಣರಲ್ಲಿಗೆ ಬಂದು ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಆಗ ಶರಣರು ’ ಮಡಿಯಿಲ್ಲ ತನುವಿಗೆ ಮಡಿಬೇಕು ಮನಸ್ಸಿಗೆ’ ಎಂದು ಹೇಳಿ ಆಶೀರ್ವದಿಸುತ್ತಾರೆ ಎಂದು ಶರಣರ ಶಿವಲೀಲೆಗಳನ್ನು ಡಾ.ಸಿದ್ದಮ್ಮ ಗುಡೇದ ವಿವರಿಸಿದರು.

ಡಾ. ಸಿದ್ದಮ್ಮ ಗುಡೇದ, ವಾಣಿಜ್ಯ ವಿಭಾಗದ ಮುಖ್ಯಸ್ಥೆ 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here