ವಾಡಿ: ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿ ಆದೇಶ ಹೊರಡಿಸಿರುವ ಕ್ರಮವನ್ನು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಸೈದ್ಯಾಂತಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಕಾಂಗ್ರೆಸ್ ಪಕ್ಷದೊಂದಿಗೆ ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ಕೇಂದ್ರ ಸರ್ಕಾರ ರಾಹುಲ್ ಗಾಂಧಿ ವಿರುದ್ಧ ಅನುಸರಿಸಿರುವ ಸೇಡಿನ ರಾಜಕಾರಣವನ್ನು ನಾವು ಒಪ್ಪುವುದಿಲ್ಲ.
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವ ಸಂಸದೀಯ ಸಚಿವಾಲಯದ ನಡೆ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಅನಾಗರಿಕ ಕ್ರಮವಾಗಿದೆ. ಸಂಸದೀಯ ಸಚಿವಾಲಯದ ಈ ತರಾತುರಿಯನ್ನು ನೋಡಿದರೆ, ಅದು ಸೂರತ್ ನ್ಯಾಯಾಲಯದ ತೀರ್ಪಿಗೆ ಕಾಯುತ್ತಿದ್ದಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.