ವಾಡಿ: ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಪ್ರಾರ್ಥಿಸಿ ಅಭಿಮಾನಿಯೋರ್ವ ಉಪವಾಸ ವೃತದ ಮೊರೆ ಹೋಗಿದ್ದಾರೆ. ಪ್ರತಿದಿನವೂ ಮತದಾರರ ಮನೆ ಬಾಗಿಲಿಗೆ ಹೋಗಿ ಪ್ರಿಯಾಂಕ್ ಪರ ಮತದಾನ ಮಾಡುವಂತೆ ವಿನಂತಿಸುತ್ತಿದ್ದಾರೆ.
ಪಟ್ಟಣದ ರೆಸ್ಟ್‍ಕ್ಯಾಂಪ್ ತಾಂಡಾ ನಿವಾಸಿ ಗುರುಪಾದ ದೊಡ್ಡಮನಿ ಎಂಬ ಯುವಕ ಪ್ರಿಯಾಂಕ್ ಖರ್ಗೆ ಅಭಿಮಾನಿಯಾಗಿದ್ದು, ಅವರ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಮೇ.17 ರಂದು ನಾಮಪತ್ರ ಸಲ್ಲಿಸಿದ ದಿನದಿಂದ ಉಪವಾಸ ವೃತ ಆರಂಭಿಸಿರುವ ಈತ ಮೇ.13 ರಂದು ಫಲಿತಾಂಶ ಪ್ರಕಟವಾಗುವವರೆಗೂ ವೃತ ಮುಂದುವರೆಸುವುದಾಗಿ ಹೇಳಿದ್ದಾರೆ. ಶಾಸಕರಾಗಿ ಮಂತ್ರಿಯಾಗಿ ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಪ್ರಗತಿಗಾಗಿ ದುಡಿದ್ದಾರೆ.
ಮನೆಯಲ್ಲಿ ಕುಳಿತರೂ ಅವರು ಗೆಲ್ಲಬಹುದಾದಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೂ ಬದಲಾದ ರಾಜಕೀಯ ಪರಸ್ಥಿತಿಯಲ್ಲಿ ಬಿಜೆಪಿ ಓರ್ವ ರೌಡಿ ಶೀಟರ್‍ನನ್ನು ಕಣಕ್ಕಿಳಿಸಿದೆ. ಸುಳ್ಳು ಗೊಳ್ಳೊ ಪ್ರಚಾರ ಮಾಡಿ ಖರ್ಗೆ ಅವರನ್ನು ಸೋಲಿಸುವ ತಂತ್ರ ರೂಪಿಸಿದೆ. ಅಭಿವೃದ್ಧಿ ಚಿಂತಕನ ಗೆಲುವು ಕ್ಷೇತ್ರದ ಜನರ ಗೆಲುವಾಗಲಿದೆ. ಅನೈತಿಕ ರಾಜಕಾರಣಕ್ಕೆ ಪ್ರಿಯಾಂಕ್ ಖರ್ಗೆ ಬಲಿಯಾಗಬಾರದು ಎಂಬ ಕಾರಣಕ್ಕೆ ಉಪವಾಸ ವೃತದ ಮೊರೆ ಹೋಗಿದ್ದೇನೆ.
ಮೇ.13 ರಂದು ಪ್ರಿಯಾಂಕ್ ಅವರ ಗೆಲುವು ಘೋಷಣೆಯಾಗುತ್ತಿದ್ದಂತೆ ಗತ್ತರಗಿ ಭಾಗ್ಯವಂತಿ ದೇವಿಯ ದೇವಸ್ಥಾನಕ್ಕೆ ತೆರಳುತ್ತೇನೆ. ಗಂಗಾಸ್ನಾನ ಗೈದು ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ಕೊನೆಗೊಳಿಸುತ್ತೇನೆ ಎಂದು ಖರ್ಗೆ ಅಭಿಮಾನಿ ಗುರುಪಾದ ಪ್ರತಿಕ್ರೀಯಿಸಿದ್ದಾರೆ.