ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ತಿಂಗಳ ಬಸವ ಬೆಳಕು -116 ಸಮಾರಂಭ

0
29

ಶಹಾಪುರ: ವಿದ್ಯಾಭ್ಯಾಸಕ್ಕೆ ತಕ್ಕಂತೆ ಸದುವಿನಯ, ಸದ್ಗುಣಗಳ ಖಣಿ ಬಸವಣ್ಣನವರಾಗಿದ್ದರು. ತಳ ಸಮೂಹದ ವ್ಯಕ್ತಿಯನ್ನು ಪುರಸ್ಕರಿಸಿ ಗೌರವಿಸಿದರು.

ಆದ್ದರಿಂದಲೆ ನಾಡಿನಲ್ಲಿ ಬಹುದೊಡ್ಡ ಕ್ರಾಂತಿ ಸಾಧ್ಯವಾಯಿತು ಎಂದು ವೀರಮ್ಮ ಗಂಗಸಿರಿ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದ ಸಮಾಜ ಶಾಸ್ತ್ರ ಮುಖ್ಯಸ್ಥ ಡಾ. ಮಹೇಶ ಗಂವ್ಹಾರ ನುಡಿದರು.

Contact Your\'s Advertisement; 9902492681

ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ತಿಂಗಳ ಬಸವ ಬೆಳಕು -116 ಸಮಾರಂಭದಲ್ಲಿ ಸಭೆಯಲ್ಲಿ ಸದುವಿನಯವೇ ಸದಾಶಿವನ ಒಲುಮೆ ಎಂಬ ವಿಷಯ ಕುರಿತು ಅವರು ಮಾತನಾಡಿದರು. ಮಹಾತ್ಮ ಬಸವಣ್ಣನವರು ವಿನಯದ ಮೂರ್ತಿ ಆಗಿದ್ದರು. ಬಿಜ್ಜಳ ಅರಸಲ್ಲಿ ಪ್ರಧಾನಿಯಾಗಿದ್ದಾಗಲೂ ಯಾವ ಅಹಂಕಾರವನ್ನು ಅವರು ಇಟ್ಟುಕೊಳ್ಳದೆ, ಸಹಜ ಸಜ್ಜನರಾಗಿ ಬದುಕಿದರು. ಆದ್ದರಿಂದಲೆ ಇಂದಿಗೂ ಅವರ ವಿಚಾರಗಳನ್ನು ಅನುಸರಿಬೇಕೆಂದು ಇಡೀ ಜಗತ್ತು ಕೊಂಡಾಡುತ್ತಿದೆ ಎಂದರು.

ಇಂದಿನ ಸಮಾಜದ ಯುವಕರಲ್ಲಿ ಸಭ್ಯತೆ ಕಣ್ಮರೆಯಾಗುತ್ತಿದೆ. ವಿನಯವಂತೂ ದೀಪ ಹಚ್ಚಿ ಹುಡುಕಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಪರಸ್ಪರನ್ನು ಕಂಡಾಗ ಆತ್ಮೀಯ ಭಾವ, ಅಂತಃಕರಣ ಮಾಯವಾಗಿದೆ. ಕೌಟುಂಬಿಕ ಸಂಬಂಧಗಳು ಹಿಂದಿನಷ್ಟು ಗಾಢವಾಗಿಲ್ಲ. ಮನೆಗೆ ಬಂದವನ್ನು ಸತ್ಕರಿಸುವ ಬದಲು ಅಸಡ್ಡೆಯಿಂದ ಕಾಣುವ ಮನೋಭಾವ ಹೆಚ್ಚುತ್ತಿದೆ. ಇದೆಲ್ಲಕ್ಕೂ ಕಾರಣ ಶರಣರ ಚಿಂತನೆಗಳ ಅಭಾವ. ಆದ್ದರಿಂದ ಬಸವಾದಿ ಶರಣರ ವಚನಗಳನ್ನು ಮೇಟಿಯಾಗಿಟ್ಟುಕೊಂಡು ನಾವು ಮುನ್ನಡೆಯಬೇಕಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಜೀವನ ಅನಿರೀಕ್ಷಿತ ತಿರುವುಗಳಿಗೆ ಒಳಗಾಗುವ ಸಂಭವ ಇದೆ. ಯಾವತ್ತೂ ನಾವೆಲ್ಲ ಈ ಮನುಷ್ಯ ಸಮಾಜದಿಂದ ಕಣ್ಮರೆಯಾಗುತ್ತೇವೋ ಗೊತ್ತಿಲ್ಲ. ಆದರೆ ಅದನ್ನೆಲ್ಲ ಮರೆತು ಮುನ್ನಡೆದಿದ್ದೇವೆ. ಜೀವನಾಯುಷ್ಯ ತೀರುವ ಮುನ್ನವೆ ನಾವುಗಳು ಸಮಾಜ ಮುಖಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ತಮ್ಮ ಮನೆಯಲ್ಲಿಯೆ ನಡೆದ ಘಟನೆಯೊಂದನ್ನು ಕಣ್ಣಿಗೆ ಕಟ್ಟುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ ಆನೇಗುಂದಿ ಸಭೆಯನ್ನು ಉದ್ಘಾಟಿಸಿ ಸಭೆಗೆ ತಿಳಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಗುಡಿ ಚರ್ಚು ಮಸೀದಿಗಳು ಜನರನ್ನು ಶೋಷಿಸುತ್ತಿವೆ ಎಂಬುದು ವಚನಕಾರರ ವಚನಗಳ ಓದಿನಿಂದ ತಿಳಿಯುತ್ತದೆ. ದೇಶಕ್ಕೆ ಇಂದು ಅಗತ್ಯವಿರುವುದು ಧಾರ್ಮಿಕ ಕಟ್ಟಡಗಳಲ್ಲ. ಯುವಕರು ಪ್ರಜ್ಞಾವಂತರಾಗಲು ಪುಸ್ತಕಗಳ ಓದು ಅತ್ಯಂತ ಅವಶ್ಯಕ. ಆದರೆ ಬಹುತೇಕ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ನಿಮಘ್ನರಾಗಿದ್ದಾರೆ.ದೃಶ್ಯ ಮಾಧ್ಯಗಳು ತಮ್ಮ ಹೊಣೆಯನ್ನು ಮರೆತು ಅತಿಯಾಗಿ ವರ್ತಿಸುತ್ತಿವೆ. ಇದಕ್ಕೆಲ್ಲ ಕಾರಣ ಅರಿತವ ದಿವ್ಯ ಮೌನವೇ ಆಗಿದೆ ಎಂದವರು ವಿಶ್ಲೇಷಿಸಿದರು.

ಸಂಗಣ್ಣ ಗುಳಗಿ ವಕೀಲರು ಸ್ವಾಗತಿಸಿದರು. ಫಜಲುದ್ದೀನ ರಹಮಾನ, ಅಲ್ಲಮಪ್ರಭು ಸತ್ಯಂಪೇಟೆ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಅರುಣ ನಂದಿ,ತಿಪ್ಪಣ್ಣ ಜಮಾದಾರ, ಶಿವಲೀಲಾ ವಡಿಗೇರಿ, ಲಲಿತಾ ಯಡ್ರಾಮಿ, ಪಾರ್ವತಿ ಪಾಲ್ಕಿ, ರುಕ್ಮಿಣಿ ಮರೆಪ್ಪ ಅಣಬಿ, ಶಿವಕುಮಾರ ಆವಂಟಿ, ಶಿವಯೋಗಪ್ಪ ಮುಡಬೂಳ, ಅಡಿವೆಪ್ಪ ಜಾಕಾ, ಬಸವರಾಜ ಹೇರುಂಡಿ,ಚಂದ್ರಶೇಖರ ಹವಾಲ್ದಾರ ಮುಡಬೂಳ, ಶರಣಪ್ಪ ಕೆ.ಇ.ಬಿ. ಕಾವೇರಿ ಲಾಳಸೇರಿ, ಮಹಾದೇವಿ ವಡಿಗೇರಿ ಸಿದ್ದರಾಮ ಹೊನ್ಕಲ್ ಮೊದಲಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here