ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋರಾಟ ಅಗತ್ಯ: ಮೇಯರ್

0
26

ಇ-ಮೀಡಿಯಾ ಲೈನ್ ನ್ಯೂಸ್

ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ ವೇದಿಕೆ ಸಾಮಾಜಿಕ ಚಳವಳಿಯನ್ನು ಉಂಟು ಮಾಡುತ್ತಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯಿಕೊಡಿ ಹೇಳಿದರು.

Contact Your\'s Advertisement; 9902492681

ಮಾನವ ಬಂಧುತ್ವ ವೇದಿಕೆ ವತಿಯುಂದ ನಗರದ ಜಿಲ್ಲಾ ಪತ್ರಕರ್ತರ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆದ ಒಂದು ದಿನದ ವಿದ್ಯಾರ್ಥಿ ಯುವ ಜನರ ನಾಯಕತ್ವ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪಾಲಿಕೆ ವತಿಯಿಂದ ಸ್ಮಶಾನಗಳ ಸ್ವಚ್ಛತೆಗೆ ಹೆಚ್ವಿನ ಗಮನ ಕೊಡಲಾಗುತ್ತಿದೆ.‌ ಸಂಜೀವ ನಗರದಲ್ಲಿನ ಸ್ಮಶಾನಭೂಮಿಗೆ ಹೊಸ ಕಾಯಕಲ್ಪ ನೀಡಲಾಗುತ್ತಿದೆ. ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋಗಲಾಡಿಸಲು ಯುವಕರು ಮುಂದಾಗಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಮಹಾನಗರ ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ, ಸಾಮಾಜಿಕ ಮುಖಂಡರಾದ ಶೌಕತ್ ಅಲಿ ಆಲೂರ ಮಾತನಾಡಿ, ಹೋರಾಟ ಮನೊಭಾವನೆ ಜೊತೆಗೆ ವಿದ್ಯಾರ್ಥಿಗಳು-ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು.‌ ಸಮಯ ನಿರ್ವಹಣೆ ಮಾಡುವವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.

ಅಜ್ಞಾನ, ಅಂಧಕಾರ ತೊರೆದು ಬದುಕಬೇಕು. ವೈಚಾರಿಕತೆ ಬೆಳೆಸಿಕೊಂಡು ಬದುಕಿನ ವಾಸ್ತವತೆ ಅರಿತು ನಾಯಕತ್ವ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ತಿಳಿಸಿದರು.

ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡು ಬರಬೇಕು. ವಿದ್ಯಾರ್ಥಿಗಳು ರಾಜಕೀಯ ಪ್ರವೇಶಿಸಿ ಕಲುಷಿತ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಕರೆ ನೀಡಿದರು.

ಭೋವಿ ಸಮಾಜದ ಹಿರಿಯ ಮುಖಂಡ ಸಿದ್ರಾಮ ದಂಡಗುಲಕರ್, ಬಂಜಾರ ಸಮಾಜದ ಹಿರಿಯ ಮುಖಂಡ ಶಾಮರಾವ್ ಪವಾರ ವೇದಿಕೆಯಲ್ಲಿದ್ದರು.

ವಚನ ಸಾಹಿತ್ಯ- ಸಂವಿಧಾನದ ಅಧ್ಯಯನ ಅಗತ್ಯ:

ನಂತರ ನಡೆದ ಮೊದಲ ಗೋಷ್ಠಿಯಲ್ಲಿ ಸಂವಿಧಾನ ಮತ್ತು ವಿದ್ಯಾರ್ಥಿ – ಯುವಜನರ ಜವಾಬ್ದಾರಿ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ. ಐ ಎಸ್ ವಿದ್ಯಾಸಾಗರ ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಆ ಮೂಲಕ ಸಮಾಜ, ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.

ಜಾತಿ ವ್ಯವಸ್ಥೆ, ವರ್ಗ ಅಸಮಾನತೆ, ಲಿಂಗ ಅಸಮಾನತೆ ತೊಡೆದು ಹಾಕಿ ಸಮಾಜಕ್ಕೆ ಹೊಸ ದಿಕ್ಕು, ಭರವಸೆ ಮಾಡುವವರು ನಾಯಕರಾಗಲು ಸಾಧ್ಯ ಎಂದು ಹೇಳಿದರು. ದೇಶ, ಧರ್ಮ, ಲಿಂಗ, ಜಾತಿಯನ್ನು ಒಂದುಗೂಡಿಸಿದ ಸಂವಿಧಾನವೆಂಬ ಸರ್ವೋಚ್ಛ ಕಾನೂನು ಎಲ್ಲರಿಗೂ ಸಮಾನ ಹಕ್ಕು, ಸಮಾನ ಅವಕಾಶ, ಸಮಾನ ಸ್ವಾತಂತ್ರ್ಯ ಕಲ್ಪಿಸಿದೆ.‌ ಹೀಗಾಗಿ ಸಂವಿಧಾನವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೇಲ್ವಿಚಾರಕ ನೀಲಕಂಠ ಶಿಂಧೆ, ಸಾಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಸಂಜೂಕುಮಾರ್ ಯಳವಂತಗಿ, ಜಾಗತಿಕ ಲಿಂಗಾಯತ ಮಹಾಸಭಾದ ಶಾಂತಪ್ಪ ಪಾಟೀಲ ವೇದಿಕೆಯಲ್ಲಿ ಇದ್ದರು. ಬಂಜಾರ ಸಮಾಜದ ಮುಖಂಡ ಚಂದು ಜಾಧವ ಅಧ್ಯಕ್ಷತೆ ವಹಿಸಿದ್ದರು.

ಎರಡನೇ ಗೋಷ್ಠಿಯಲ್ಲಿ ವಚನ ಸಾಹಿತ್ಯ ಮತ್ತು ಇಂದಿನ ತಲ್ಲಣಗಳು ವಿಷಯ ಕುರಿತು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಜಾಗತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿಯಾಗಿದೆ.‌ ಜಾತಿ ವ್ಯವಸ್ಥೆ, ನಿರುದ್ಯೋಗ, ರೈತರ ಆತ್ಮಹತ್ಯೆ, ಕೋಮುವಾದ, ಮೂಢನಂಬಿಕೆ, ಅಂಧಶ್ರದ್ಧೆ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳಿಗೆ ವಚನ ಸಾಹಿತ್ಯದಲ್ಲಿ ಸೂಕ್ತ ಪರಿಹಾರವಿದೆ ಎಂದು ಅವರು ತಿಳಿಸಿದರು.

ಬದುಕಿನ ಹಕ್ಕಿನ ಜೊತೆಗೆ ಮಾನವನ ಗೌರವ, ಘನತೆಯನ್ನು ಎತ್ತಿ ಹಿಡಿದ ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ ಎಂದು ವಿವರಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೇಲ್ವಿಚಾರಕ ವಿನೋದಕುಮಾರ ಕಾಂಬ್ಳೆ ಉಪಸ್ಥಿತರಿದ್ದರು. ಅಪಜಲಪುರ ಅನುದಾನಿತ ಪ್ರೌಡ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಂಘದ ಅಧ್ಯಕ್ಷ ಎಸ್ ಎಂ ಕರಿಕಲ್ ಅಧ್ಯಕ್ಷತೆ ವಹಿಸಿದ್ದರು.

ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ವಿಭಾಗೀಯ ಸಂಚಾಲಕ ಸುನಿಲ ಮಾರುತಿ ಮಾನಪಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ ಸರಡಗಿ ನಿರೂಪಿಸಿದರು. ದಿನೇಶ ದೊಡ್ಡಮನಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here