ಕಲಬುರಗಿ: ಇನ್ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮುನಿಕೇಷನ್ ಇಂಜಿನಿಯರಿಂಗ್ (ಐಇಟಿಇ) ಕೇಂದ್ರ ಸಮಿತಿ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಆಯ್ಕೆಯಾಗಿದ್ದಾರೆ.
ಬರುವ ಮೂರು ವರ್ಷದ ಅವಧಿಗಾಗಿ ಇತ್ತೀಚೆಗೆ ಜರುಗಿದ ಆನ್ ಲೈನ್ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರೊ. ಗಾದಗೆ ಅವರು ಕರ್ನಾಟಕದಿಂದ ಅತೀ ಹೆಚ್ಚು ಮತ ಗಳಿಸಿ ಜಯಭೇರಿ ಸಾಧಿಸಿದ್ದಾರೆ. ಈ ಹಿಂದೆ ಐಇಟಿಇ ಉಪಾಧ್ಯಕ್ಷರಾಗಿ ಒಂದು ಅವಧಿ ಸೇವೆ ಸಲ್ಲಿಸಿದ ಪ್ರೊ.ಗಾದಗೆ ಅವರು ಇದೀಗ ಗವರ್ನಿಂಗ್ ಕೌನ್ಸಿಲ್ ಗೆ ಆಯ್ಕೆಯಾಗಿ ಈ ಭಾಗವನ್ನು ಪ್ರತಿನಿಧಿಸಲಿದ್ದಾರೆ.
ಐಇಟಿಇ 1953ರಲ್ಲಿ ಸ್ಥಾಪನೆಯಾಗಿದ್ದು, ದೇಶದ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮುನಿಕೇಷನ್ ಇಂಜಿನಿಯರಿಂಗ್ ಸಂಸ್ಥೆಗಳ ಪ್ರಮುಖ ಸಮಿತಿಯಾಗಿದೆ. ದೇಶದಲ್ಲಿ 63 ಕೇಂದ್ರಗಳ ಮೂಲಕ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಐಇಟಿಇ ಸುಮಾರು 1.25 ಲಕ್ಷ ಮತದಾರ ಪ್ರತಿನಿಧಿಗಳನ್ನು ಹೊಂದಿದೆ.
ಗವರ್ನಿಂಗ್ ಕೌನ್ಸಿಲ್ ನ ಖಾಲಿ ಇದ್ದ 7 ಸ್ಥಾನಕ್ಕೆ ಚುನಾವಣೆ ನಡೆದಿದ್ದು, 29 ಮಂದಿ ಸ್ಪರ್ಧಿಸಿದ್ದರು. ಕರ್ನಾಟಕದಿಂದ ಪ್ರೊ. ಗಾದಗೆ ಅವರಲ್ಲದೆ ಡಾ.ಎಂ.ಎಚ್.ಕೋರಿ, ಡಾ.ಸತ್ಯಾನಂದ ಅವರು ಸಹ ಆಯ್ಕೆಯಾಗಿದ್ದಾರೆ.
ಐಇಟಿಇ ಮೂಲಕ ಇಲ್ಲಿನ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಪ್ರೊ.ಗಾದಗೆ ಅವರು ನಿರಂತರ ವಿವಿಧ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇವರ ಕ್ರಿಯಾಶೀಲ ಕೆಲಸಗಳ ಕಾರಣದಿಂದ ಕಲಬುರಗಿ ಐಇಟಿಇ ಕೇಂದ್ರ ಎರಡು ವರ್ಷದ ಹಿಂದೆ ದೇಶದ ಅತ್ಯುತ್ತಮ ಕೇಂದ್ರ ಎಂಬ ಪ್ರಶಸ್ತಿ ಪಡೆದಿತ್ತು.
ಇಲ್ಲಿನ ಕೇಂದ್ರದಲ್ಲಿ ಸಂಶೋಧನಾ ಚಟುವಟಿಕೆ, ವಿವಿಧ ಅಭಿವೃದ್ಧಿ ಕೆಲಸ ಹಾಗೂ ವಿಚಾರ ಸಂಕಿರಣ, ಸಮಾವೇಶ ಇನ್ನಿತರೆ ಕಾರ್ಯ ಕೈಗೊಳ್ಳಲು ಈ ಆಯ್ಕೆ ಪೂರಕವೆನಿಸಿದೆ. ಕಲಬುರಗಿ ಕೇಂದ್ರಕ್ಕೆ ದೇಶದ ಟಾಪ್ 10 ಕೇಂದ್ರದೊಳಗೆ ತರುವುದು ತಮ್ಮ ಧ್ಯೇಯವಾಗಿದೆ ಎಂದು ಪ್ರೊ.ಗಾದಗೆ ಹೇಳಿದ್ದಾರೆ.
ಅಭಿನಂದನೆ: ಐಇಟಿಇಗೆ ಆಯ್ಕೆಯಾದ ಪ್ರೊ.ಗಾದಗೆ ಅವರಿಗೆ ಮಂಗಳವಾರ ಇಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ಈ ಭಾಗದ ಇಂಜಿನಿಯರಿಂಗ್ ಕಾಲೇಜುಗಳ ಪ್ರತಿನಿಧಿಗಳು, ಕೇಂದ್ರದ ಪ್ರಮುಖರು ಸತ್ಕರಿಸಿ ಅಭಿನಂದಿಸಿದರು.
ಎರಡು ವಾರಗಳ ಹಿಂದಷ್ಟೇ ಐಎಸ್ ಟಿಇ ರಾಷ್ಟ್ರೀಯ ಫೆಲೋಶಿಪ್ ಪುರಸ್ಕಾರಕ್ಕೆ ಭಾಜನರಾದ ಪ್ರೊ.ಗಾದಗೆ ಅವರು ಇದೀಗ ಐಇಟಿಇ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಡಾ. ಶುಂಭುಲಿಂಗ ಬಾಣಿ, ಡಾ.ರಾಹುಲ್ ಮೂಲಭಾರತಿ, ಡಾ.ಶುಭಾಂಗಿ, ಡಾ.ಎಂ.ಎ.ವಹೀದ್, ಡಾ.ಬ್ರಿಜ್ ಭೂಷಣ, ಡಾ.ಶೈಲಜಾ, ಡಾ.ಸತೀಶ, ಡಾ.ಬಾಬುರೆಡ್ಡಿ ಇತರರಿದ್ದರು.