ದಿಶಾ ಸಭೆ: ಸಂಸದ ಜಾಧವ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜಟಾಪಟಿ

0
270

ಕಲಬುರಗಿ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿಯ ೨೦೧೯-೨೦೨೦ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹಾಗೂ ಚಿತ್ತಾಪೂರ್ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರ ನಡುವಿನ ವಾಗ್ವಾದದಿಂದ ಇಡೀ ಸಭೆಯಲ್ಲಿ ತಬ್ಬಿಬ್ಬು ವಾತಾವರಣ ಉಂಟಾಗಿತ್ತು.

ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿವರಣೆ ನೀಡುವಾಗ ಮಧ್ಯ ಪ್ರವೇಶಿಸಿದ ಶಾಸಕ ಪ್ರಿಯಾಂಕ್ ಖರ್ಗೆಯವರು ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರವು ಕಳೆದ ಎರಡು ವರ್ಷಗಳಿಂದ ಅನುದಾನ ಕೊಟ್ಟಿಲ್ಲ. ಈಗ ಸುಮಾರು ೨,೫೦೦ ಕೋಟಿ ರೂ.ಗಳು ಬಾಕಿ ಉಳಿದಿವೆ. ಯೋಜನೆಯು ನಮ್ಮ ಅನುದಾನದಿಂದ ಅನುಷ್ಠಾನಗೊಂಡಿದೆ ಎಂದು ಆರೋಪಿಸಿದ್ದೇ ಸಭೆಯಲ್ಲಿ ಸಂಸದ ಹಾಗೂ ಶಾಸಕ ವಾಗ್ವಾದಕ್ಕೆ ಮೂಲ ಕಾರಣವಾಯಿತು.

Contact Your\'s Advertisement; 9902492681

ಇದು ಜಿಲ್ಲಾ ಮಟ್ಟದ ಸಭೆ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಕುರಿತು ಚರ್ಚಿಸುತ್ತಿದ್ದೇವೆ. ಇಲ್ಲಿ ಕೇಂದ್ರದ ಅನುದಾನದ ಕುರಿತು ಪ್ರಸ್ತಾಪಿಸುವುದು ಸರಿಯಲ್ಲ. ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಗೆ ಅನುದಾನದ ಕೊರತೆ ಇಲ್ಲ. ಕೇವಲ ಒಂದು ತಿಂಗಳಿನ ಹಣವನ್ನು ಕೊಡಬೇಕಾಗಿದೆ ಎಂದು ಹೇಳಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದರು. ಇದರಿಂದ ಕೋಪಗೊಂಡ ಪ್ರಿಯಾಂಕ್ ಖರ್ಗೆಯವರು, ನೀವು ಪಕ್ಕದ ಮನೆಯ ದುಡ್ಡು ಕೊಟ್ಟರೆ ಹೇಗೆ. ಕೇಂದ್ರದಿಂದ ಇಲ್ಲಿಯವರೆಗೆ ಒಂದು ರೂ. ಸಹ ಬಂದಿಲ್ಲ. ನಾನು ಸಚಿವನಾಗಿದ್ದಾಗ ಎರಡು ಬಾರಿ ಕೇಂದ್ರದ ಬಳಿಗೆ ನಿಯೋಗ ಹೋಗಿದ್ದೆ. ರಾಜ್ಯ ಸರ್ಕಾರವೇ ಯೋಜನೆಗೆ ಹಣ ಭರಿಸುತ್ತಿದೆ. ರಾಜ್ಯದಿಂದ ೨೬ ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದೀರಿ. ಅನುದಾನ ಬಿಡುಗಡೆ ಮಾಡದೇ ಇರುವ ಕುರಿತು ಕೇಳುತ್ತಿಲ್ಲ ಎಂದು ಸಂಸದರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೇಂದ್ರದಿಂದ ಅನುದಾನ ಬಿಡುಗಡೆ ಕುರಿತು ಇಲ್ಲಿ ಚರ್ಚಿಸುವುದು ವೇದಿಕೆಯಲ್ಲ. ರಾಜ್ಯ ಮಟ್ಟದ ಅಭಿವೃದ್ಧಿ ಹಾಗೂ ಮೇಲ್ವಿಚಾರಣೆ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಬಹುದಾಗಿದೆ. ಕೇಂದ್ರದ ಅನುದಾನ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಆಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚೆ ಆಗಬೇಕು. ಇದು ಜಿಲ್ಲಾ ಮಟ್ಟದ ಸಭೆ. ಇಂತಹ ವಿಷಯ ಚರ್ಚೆ ಬೇಡ ಎಂದು ಸಂಸದರು ಪದೇ ಪದೇ ಹೇಳಿದರು.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಂಸದರ ಹೇಳಿಕೆಯನ್ನು ಒಪ್ಪದೇ, ಇದು ಜಿಲ್ಲಾ ಮಟ್ಟದ ಸಭೆಯಾದರೂ ಕೇಂದ್ರ ಪುರಸ್ಕೃತ ಯೋಜನೆಗಳ ಸಭೆ ಇದೆ. ಕೇಂದ್ರದಿಂದ ಜಿಲ್ಲೆಗೆ ಅನುದಾನ ಬಂದಿಲ್ಲ ಎಂದರೆ ಹೇಗೆ? ಮತ್ತು ನೀವು ಈ ಕುರಿತು ಸಭೆ ನಡೆಸುವುದಾದರೂ ಏಕೆ? ಎಂದು ಹರಿಹಾಯ್ದರು.

ವಿವಾದ ವಿಕೋಪಕ್ಕೆ ಹೋಯಿತು. ಶಾಸಕ ಮತ್ತು ಸಂಸದರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಹೋಯಿತು. ಒಂದು ಹಂತದಲ್ಲಿ ಸಂಸದರ ಪುತ್ರ ಹಾಗೂ ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್ ಅವರು ಶಾಸಕ ಪ್ರಿಯಾಂಕ್ ಖರ್ಗೆಯವರನ್ನು ತರಾಟೆಗೆ ತೆಗೆದುಕೊಳ್ಳಲು ಮಾತು ಆರಂಭಿಸಿದಾಗ, ಸಂಸದ ಡಾ. ಉಮೇಶ್ ಜಾಧವ್ ಅವರು ನಾನು ಮಾತನಾಡುತ್ತೇನೆ. ನೀನು ಬೇಡ ಎಂದು ಕೈಸನ್ನೆ ಮೂಲಕ ತಮ್ಮ ಪುತ್ರನಿಗೆ ಸುಮ್ಮನೇ ಕೂಡಿಸಿದರು. ಆ ಸಂದರ್ಭದಲ್ಲಿ ಆಳಂದ್ ಕ್ಷೇತ್ರದ ಬಿಜೆಪಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರು ಸಂಸದರ ಬೆನ್ನಿಗೆ ನಿಲ್ಲುವ ರೀತಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಯವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

ಕೇಂದ್ರದ ಅನುದಾನವು ನೇರವಾಗಿ ಜಿಲ್ಲೆಗೆ ಬರುತ್ತದೆಯೇ? ಎಂದು ಗುತ್ತೇದಾರ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆ ರೀತಿ ಜಿಲ್ಲೆಗೆ ಬರುವುದಿಲ್ಲ. ರಾಜ್ಯ ಸರ್ಕಾರಕ್ಕೆ ಅನುದಾನ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಈ ಹಂತದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಯವರ ಪರ ನಿಲ್ಲುವ ರೀತಿಯಲ್ಲಿ ಅಫಜಲಪೂರ್ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ್ ಅವರು ಶಾಸಕ ಪ್ರಿಯಾಂಕ್ ಖರ್ಗೆ ಅವರು ನಿಮಗೆ ಬೆಂಬಲಿಸುವ ರೀತಿಯಲ್ಲಿ ಪ್ರಶ್ನಿಸುತ್ತಿದ್ದಾರೆ ಎಂದು ಸಂಸದರಿಗೆ ಹೇಳಿದರು. ಆಗ ಸಂಸದರು ಇದು ಕೇಂದ್ರ ಅನುದಾನದ ಬಿಡುಗಡೆ ಕುರಿತು ಚರ್ಚಿಸುವ ವೇದಿಕೆಯಲ್ಲ. ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚೆ ಆಗಬೇಕಾದ ವಿಷಯ. ನಾನೂ ಸಹ ಸಂಬಂಧಿಸಿದ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತೇನೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನದ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಕುರಿತು ಚರ್ಚೆ ಅನಗತ್ಯ ಎಂದು ಸಂಸದರು ತಿಳಿಸಿದರು.

ಕೋಪ ಶಮನಗೊಳ್ಳದ ಶಾಸಕ ಪ್ರಿಯಾಂಕ್ ಖರ್ಗೆಯವರು, ನನ್ನನ್ನು ನೀವು ನಿಯಂತ್ರಿಸಲು ಯತ್ನಿಸುತ್ತಿದ್ದೀರಿ. ನೀವು ನನ್ನ ಮೈಮೇಲೆ ಮುಗಿಬೀಳುತ್ತಿದ್ದೀರಿ. ನಾನು ಮಾತನಾಡುವುದು ಬೇಡ ಎಂದರೆ ಬಿಟ್ಟು ಬಿಡುತ್ತೇನೆ ಎಂದು ಬೆದರಿಸುವ ರೀತಿಯಲ್ಲಿ ಹೇಳಿದರು. ನೀವೇ ಮೈಮೇಲೆ ಹಾಕಿಕೊಂಡು ಮುಗಿಬೀಳಿಸಿಕೊಂಡರೆ ಮುಗಿಬೀಳಬೇಕಾಗುತ್ತದೆ ಎಂದು ಸಂಸದರು ತಿರುಗೇಟು ನೀಡಿದರು. ಆಗ ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರು ಸಂಸದರನ್ನುದ್ದೇಶಿಸಿ ನೀವು ಅಲ್ಲಿ ಕುಳಿತಿರುವುದನ್ನು ನೋಡಿ ಮುಗಿಬೀಳುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಅವರ ಹೆಸರು ಹೇಳದೇ ಚುಚ್ಚಿದರು.

ನೀವು ಸಂಪುಟ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದೀರಿ. ನೀವು ಈಗ ಮಾಜಿ ಸಚಿವರು. ನಿಮಗೆ ಎಲ್ಲಿ, ಯಾವ ವಿಷಯ ಚರ್ಚೆ ಮಾಡಬೇಕು ಎಂಬುದು ಗೊತ್ತು. ಕೇಂದ್ರ ಸರ್ಕಾರದ ವಿರುದ್ಧ ಟೀಕೆಗೆ ಜಿಲ್ಲಾ ಮಟ್ಟದ ಸಭೆಯನ್ನು ಬಳಕೆ ಮಾಡಿಕೊಳ್ಳಬೇಡಿ. ಅನುದಾನವನ್ನು ಕೇಂದ್ರದಿಂದ ಪಡೆಯುತ್ತೇವೆ. ರಾಜ್ಯ ಸರ್ಕಾರವು ಬಳಕೆ ಪ್ರಮಾಣಪತ್ರ ಕೊಟ್ಟರೆ ಕೇಂದ್ರದ ಅನುದಾನ ಬಿಡುಗಡೆ ಆಗುತ್ತದೆ. ಒಂದು ವೇಳೆ ಬಾಕಿ ಇದ್ದರೂ ಸಹ ಅದನ್ನು ತರಿಸುತ್ತೇನೆ ಎಂದು ಸಂಸದ ಜಾಧವ್ ಅವರು ಹೇಳಿದರು. ರಾಜ್ಯ ಮಟ್ಟದ ಸಭೆಯಲ್ಲಿ ಈ ಕುರಿತು ನಾನೂ ಚರ್ಚೆ ಮಾಡುತ್ತೇನೆ. ಇಲ್ಲಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲಿಸೋಣ ಎಂದು ತಿಳಿಸಿದ ಸಂಸದರು, ಅಧಿಕಾರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುವರ್ಣ ಹಣಮಂತ್ ಮಲಾಜಿ, ಜಿಲ್ಲಾಧಿಕಾರಿ ಬಿ. ಶರತ್, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಶಾಸಕರಾದ ಶ್ರೀಮತಿ ಕನೀಜ್ ಫಾತಿಮಾ, ಬಿ.ಜಿ. ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತ್ರ ಸಂಸದರ ಹಾಗೂ ಶಾಸಕರ ನಡುವಿನ ವಾಗ್ವಾದದಿಂದ ಆತಂಕವನ್ನು ಉಂಟು ಮಾಡಿತ್ತು. ಕೊನೆಗೂ ಉಭಯತರರು ವಿವಾದವನ್ನು ಅಷ್ಟಕ್ಕೆ ಅಂತ್ಯಗೊಳಿಸುವ ಮೂಲಕ ಸಭೆಯಲ್ಲಿ ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here