ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿ ಹೋಬಳಿ & ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಿಗರಿಹಾಳ ಗ್ರಾಮದ ಸರ್ವೆ ನಂಬರ್ ೨೬೧ ರಲ್ಲಿ ೨೫ ಎಕರೆ ೧೭ ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ದಾಖಲಿಸಿದ ಸುಳ್ಳು ದೂರನ್ನು ಪರಿಗಣಿಸಿ ಮುಗ್ದ ರೈತನಿಗೆ ಕಂದಾಯ ನಿರೀಕ್ಷಕರು ವಂಚಿಸಿದ್ದು ಮಹಿಳೆಗೆ ಹೊಲದಲ್ಲಿ ಬೆಳೆದ ಬೆಳೆಯನ್ನು ಮಾರಿಕೊಂಡು ಉಪಭೋಗ್ಯಕ್ಕೆ ಒದಗಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ)ದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಗ್ರಾಮದ ಮಹಿಳೆ ಶ್ರೀದೇವಿ ನಿಂಗಪ್ಪ ಗೋಸಿ ಇವರು ಮಾಡಿದ ಒಂದು ಸುಳ್ಳು ಕೇಸ್ ಆಧರಿಸಿ ಸುರಪೂರ ತಹಸೀಲ್ದಾರರು ಸಿ.ಆರ್.ಪಿ.ಎಸ್. ಕಲಂ 145 ರ ಅಡಿಯಲ್ಲಿ ರೈತನ ಹೊಲ ಜಪ್ತಿಗೆ ಆದೇಶ ಮಾಡಿದ್ದಾರೆ. ತಹಸೀಲ್ದಾರರ ಈ ಆದೇಶವನ್ನೇ ಆಧಾರವಿಟ್ಟುಕೊಂಡು ಕಾನೂನು ಬಾಹಿರವಾಗಿ ಕೆಂಭಾವಿ ಕಂದಾಯ ನಿರೀಕ್ಷಕರು ಆ ಜಮೀನಿನಲ್ಲಿದ್ದ ಬೇಳೆಯನ್ನು ಟೆಂಡರ್ ಕರೆದು ಲಕ್ಷಾನುಗಟ್ಟಲೆ ಹಣ ಪಡೆದು ಮುಗ್ಧ ರೈತ ದೇವೇಂದ್ರಪ್ಪನಿಗೆ ಮೋಸ ಮಾಡಿದ್ದಾರೆ.
ಆದರೆ ಜಿಲ್ಲಾ ನ್ಯಾಯಾಲಯದ ದಿ:೨೬-೦೯-೨೦೧೯ ರಂದು ಸುರಪೂರ ತಹಸೀಲ್ದಾರರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಕಂದಾಯ ನಿರೀಕ್ಷಕರು ಅಕ್ಷಮ್ಯ ಅಪರಾಧ ಮಾಡುತ್ತಿದ್ದು ಈ ಹಗರಣದಲ್ಲಿ ಶಾಮೀಲಾಗಿರುವ ಕೆಂಭಾವಿಯ ಕಂದಾಯ ನಿರೀಕ್ಷಕರನ್ನು ವಜಾ ಮಾಡಿ ಮುಗ್ಧ ರೈತ ದೇವಿಂದ್ರಪ್ಪ ತಂ/ ತಿಪ್ಪಣ್ಣ ಗೋಸಿ ಇತನಿಗೆ ಬೆಳೆದ ಬೆಳೆಯನ್ನು ಸರಂಕ್ಷಣೆ ಮಾಡಿಕೊಂಡು ಜೀವನ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕೆಂಭಾವಿ ಕಂದಾಯ ನಿರೀಕ್ಷಕರು ನಡೆಸಿದ ಹರಾಜಿನಲ್ಲಿ ಹರಾಜು ಪಡೆದ ವ್ಯಕ್ತಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ಸುದ್ದಿ ಕೇಳುತ್ತಲೇ ರೈತ ಬೆಳೆದ ೨೫ ಎಕರೆಯಲ್ಲಿನ ಬೆಳೆಗಳನ್ನು ದನಕರುಗಳನ್ನು ಬಿಟ್ಟು ಮೇಯಿ ಸಿ ಬೆಳೆಯನ್ನು ನಾಶಪಡಿಸಿದ್ದರಿಂದ ಇಬ್ಬರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಬಂಧಿಸಿ ೨೫ ಎಕರೆ ಜಮೀನಿನ ಪರಿಹಾರ ಪ್ರತಿ ಎಕರೆಗೆ ೫೦ ಸಾವಿರದಂತೆ ೨೫ ಎಕರೆ ಜಮೀನಿನ ಪರಿಹಾರ ಕೊಡಿಸುವಂತೆ ಒತ್ತಾಯಿಸಿದರು.
ತಪ್ಪಿದಲ್ಲಿ ಅಕ್ಟೊಬರ್ ೦೫ರಂದು ಯಾದಗಿರಿ ಸಹಾಯಕ ಆಯುಕ್ತರಿಗೆ; ಇದಕ್ಕೂ ವಿಳಂಭವಾದರೆ 15 ರಂದು ಡಿ.ವೈ.ಎಸ್.ಪಿ. ಸುರಪುರ ರವರಿಗೆ; ಇಲ್ಲೂ ವಿಳಂಭವಾದರೆ ಅಕ್ಟೊಬರ್ 25 ರಿಂದ ನ್ಯಾಯ ಸಿಗುವವರೆಗೆ ಸುರಪುರ ತಹಸೀಲ್ ಕಛೇರಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಜೀಜ್ ಐಕೂರು, ಡಾ. ಮಲ್ಲಿಕಾರ್ಜುನ ಆಶನಾಳ, ಮಲ್ಲಿಕಾರ್ಜುನ ಮಳ್ಳಳ್ಳಿ, ಮಲ್ಲಿಕಾರ್ಜುನ ದೋರನಳ್ಳಿ, ಗೌತಮ ಕ್ರಾಂತಿ, ಶಿವರುದ್ರ ಕೋಟಗಾರವಾಡ, ಶರಣಪ್ಪ ಕುರಕುಂದಿ ಸೇರಿದಂತೆ ವಂಚನೆಗೊಳಗಾದ ರೈತ ದೇವೀಂದ್ರಪ್ಪ ಹಾಗೂ ಅವರ ಕುಟುಂಬದ ಸದಸ್ಯರಾದ ಭೀಮಣ್ಣ ಉಟ್ಕೂರ, ಎಪಿಎಂಸಿ ಸದಸ್ಯರಾದ ಮಲ್ಲಣ್ಣ ಎಜ್ಜೆರಿ, ಸಣ್ಣಕ್ಕೆಪ್ಪ ಸಾಹುಕಾರ, ಖಾಸಿಮ್ ಅಲಿ ದರ್ಜಿ ಚಿಗರಿಹಾಳ, ಕಾಶಿನಾಥ ಎಕ್ತಾಪೂರ, ನಾಗಣ್ಣ, ವೆಂಕಟೇಶ, ಶಿವಪ್ಪ ಬೋವಿ, ನಾಗಪ್ಪ ಬೋವಿ, ಬಾಲದಂಡಪ್ಪ ಗೋಸಿ ಇನ್ನಿತರರು ಇದ್ದರು.