ಕಲಬುರ್ಗಿ ಜಿಲ್ಲೆಯಲ್ಲಿ ಖೈದಿಗೆ ಸುಪಾರಿ ಕೊಲೆ: ನ್ಯಾಯಾಂಗ ತನಿಖೆಗೆ ಹೊಸ್ಮನಿ ಆಗ್ರಹ

0
155

ಕಲಬುರಗಿ: ನಗರದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಖೈದಿ ಬಸವಕಲ್ಯಾಣ್ ತಾಲ್ಲೂಕಿನ ಹಾರಕೂಡ್ ತಾಂಡಾದ ನಿವಾಸಿ ಸುಭಾಷ್ ತಂದೆ ಶಂಕರರಾವ್ ಮೇತ್ರೆ ಅವರ ಕೊಲೆಗೆ ಜೈಲು ಸಿಬ್ಬಂದಿಗೆ ಸುಪಾರಿ ನೀಡಲಾಗಿದ್ದು, ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ರಾಜ್ಯಾಧ್ಯಕ್ಷ ಎ.ಬಿ. ಹೊಸ್ಮನಿ ಅವರು ಇಲ್ಲಿ ಒತ್ತಾಯಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಭಾಷ್ ಮೇತ್ರೆಯವರು ಮಲತಾಯಿ ಮಹಾದೇವಿ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಸುಭಾಷ್ ಅವರು ಕೊಲೆ ಮಾಡದೇ ಇದ್ದರೂ ಬಸವಕಲ್ಯಾಣ್ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅವರ ಹೆಸರು ಸೇರಿಸಿ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದಾಗಿ ಸ್ವಖುಷಿ ಹೇಳಿಕೆ ಪಡೆದು ಆರೋಪಿಯನ್ನಾಗಿಸಲಾಗಿತ್ತು ಎಂದು ದೂರಿದರು. ಹತ್ಯೆಗೀಡಾದ ಮಹಾದೇವಿ ಹಾಗೂ ಕಾಂಗ್ರೆಸ್ ಮುಖಂಡ ಜಗನ್ನಾಥಗೌಡ ನಡುವೆ ಅಕ್ರಮ ಸಂಬಂಧ ಇದ್ದು, ಅದನ್ನು ಸುಭಾಷ್ ಮೇತ್ರೆ ಅವರು ವಿರೋಧಿಸುತ್ತಿದ್ದರು ಹಾಗೂ ಮಂಠಾಳ್ ಗ್ರಾಮದಲ್ಲಿನ ಸರ್ವೆ ನಂಬರ್ ೮೭ರ ೧೪ ಎಕರೆ ಜಮೀನು ಹಂಚಿಕೆ ಮಾಡುವಂತೆ ಹೇಳುತ್ತಿದ್ದುದರಿಂದ ಜಗನ್ನಾಥಗೌಡ ಅವರೇ ಆಸ್ತಿ ಆಸೆಗಾಗಿ ಮಹಾದೇವಿಯನ್ನು ಕೊಂದು ಸುಭಾಷ್ ತಂದೆ ಶಂಕರರಾವ್ ಮೇತ್ರೆ ಅವರ ಹೆಸರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅವರು ಆರೋಪಿಸಿದರು.

Contact Your\'s Advertisement; 9902492681

ಸುಭಾಷ್ ಕೊಲೆ ಪ್ರಕರಣದಲ್ಲಿ ಸುಭಾಷ್ ಮಲತಾಯಿ ಪುತ್ರಿ ಶ್ರೀಮತಿ ರೇಣುಕಾ ಹಾಗೂ ಜಗನ್ನಾಥಗೌಡ ಅವರ ಕೈವಾಡ ಇದೆ. ಅದಕ್ಕಾಗಿಯೇ ಜೈಲಿನಲ್ಲಿರುವ ಸುಭಾಷ್ ಅವರನ್ನು ಕೊಲ್ಲುವ ಕುತಂತ್ರ ನಡೆದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಖೈದಿಯಾಗಿರುವ ಸುಭಾಷ್ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕಲಬುರ್ಗಿಯ ಉಚವಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ತಿರಸ್ಕೃತಗೊಂಡಿದ್ದರಿಂದ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ವಜಾಗೊಳಿಸುವಂತೆ ಕೋರಿ ದಾವೆ ಹೂಡಿದ್ದರಿಂದ ಸರ್ವೋಚ್ಛ ನ್ಯಾಯಾಲಯವು ಕಲಬುರ್ಗಿ ಉಚ್ಛ ನ್ಯಾಯಾಲಯ ಪೀಠಕ್ಕೆ ವರ್ಗಾಯಿಸಿ ಪ್ರಕರಣ ಇತ್ಯರ್ಥಗೊಳಿಸುವಂತೆ ಆದೇಶಿಸಿದೆ. ಈಗ ಕಲಬುರ್ಗಿ ಪೀಠದಲ್ಲಿ ಪ್ರಕರಣ ಬಾಕಿ ಇದೆ ಎಂದು ಅವರು ಹೇಳಿದರು.

ಕಳೆದ ಜನವರಿ ೨೬ರಂದು ಸುಭಾ ಅವರ ಮೇಲೆ ಕೇಂದ್ರ ಕಾರಾಗೃಹದಲ್ಲಿಯೇ ಮಾರಣಾಂತಿಕ ಹಲ್ಲೆಯಾಯಿತು. ಬಲಗಣ್ಣು ಹಾಗೂ ತಲೆಗೆ ಗಂಭೀರ ಪೆಟ್ಟು ಬಿದ್ದುದರಿಂದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಮತ್ತೆ ಕಾರಾಗೃಹಕ್ಕೆ ಕರೆ ತಂದಿದ್ದಾರೆ. ಕಾರಾಗೃಹದ ವೈದ್ಯಾಧಿಕಾರಿ ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡುತ್ತಿದ್ದಾರೆ. ಪ್ರಕರಣ ವರದಿಯಾಗಿ ೮ ತಿಂಗಳು ಗತಿಸಿದರೂ ಸಹ ಇದುವರೆಗೆ ಸಂಬಂಧಿಸಿದ ಪೋಲಿಸ್ ಠಾಣೆಯವರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿಲ್ಲ ಎಂದು ಅವರು ಆರೋಪಿಸಿದರು.

ಸುಭಾಷ್ ಪುತ್ರಿ ಸೀಮಾಳ ಮದುವೆ ನಿಮಿತ್ಯ ಕಳೆದ ಜೂನ್ ೪ರಂದು ಜಾಮೀನಿನ ಮೇಲೆ ಸುಭಾಷ್ ಅವರು ಹೊರಬಂದಿದ್ದು, ಮದುವೆಯಾದ ನಂತರ ಕಾರಾಗೃಹಕ್ಕೆ ವಾಪಸ್ಸು ಕರೆದುಕೊಂಡು ಬರಲಾಗಿದೆ. ಸುಭಾಷ್ ಪತ್ನಿ ಶ್ರೀಮತಿ ಮಂಗಲಾಬಾಯಿ ಡೆಂಗ್ಯೂಜ್ವರದಿಂದ ಬಳಲುತ್ತಿದ್ದು, ಆ ಕುರಿತು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಭಾಷ್ ಅವರು ಕೋರಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಜೈಲಿನಲ್ಲಿಯೇ ಸುಭಾಷ್ ಅವರನ್ನು ಕೊಲೆ ಮಾಡುವ ಕುತಂತ್ರಗಳು ನಡೆದಿವೆ ಎಂದು ಅವರು ದೂರಿದರು.

ಸುಭಾಷನು ಪಾರ್ಶ್ವವಾಯು ಮತ್ತು ಕಣ್ಣಿನ ಕಾಯಿಲೆಗೆ ತುತ್ತಾಗಿದ್ದಾನೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಈ ಕುರಿತು ನ್ಯಾಯಾಂಗ ತನಿಖೆಯ ಮೂಲಕ ತಪ್ಪಿತಸ್ಥರಿಗೆ ಕಾನೂನಿನ ಅಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಅಣವಾರ್, ಮಿಲಿಂದ್ ಕಣಮುಸ್, ಶರಣಪ್ಪ ವಾಡೇಕರ್, ಸುಭಾಷ್ ಪತ್ನಿ ಮಂಗಲಾಬಾಯಿ, ಪುತ್ರಿ ಸೀಮಾ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here