ಬಸವಣ್ಣ ನಾಲ್ಕು ಕಾಲಿನ ಎತ್ತಲ್ಲ: ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವ ವ್ಯಕ್ತಿ

0
89

೧೨ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಬಸವಣ್ಣನವರ ಬದುಕು ಹಾಗೂ ಬೋಧನೆ ಬಗ್ಗೆ ಅಂದಿನಿಂದ ಇಂದಿನವರೆಗೆ ಚರ್ಚೆ, ಚಿಂತನೆ ನಡೆಯುತ್ತಲೇ ಇದೆ. ಒಬ್ಬ ಐತಿಹಾಸಿಕ ಪುರುಷನ ಕುರಿತು ೧೨ನೇ ಶತಮಾನ ತಿರುವು ಮುರುವು ಆಗಿರುವ ಇಂದಿನ ೨೧ನೇ ಶತಮಾನದಲ್ಲೂ ಅವರ ಬದುಕು ಹಾಗೂ ಬೋಧನೆ ಬಗ್ಗೆ ಚರ್ಚೆ ನಡೆಯುತ್ತಿರುವುದು ಬಸವಣ್ಣ ಹಾಗೂ ಅವರ ವಿಚಾರಗಳ ಜೀವಂತಿಕೆಯನ್ನು ತೋರಿಸಿಕೊಡುತ್ತದೆ.

ಬದುಕಿನ ಎಲ್ಲ ಕ್ಷೇತ್ರಗಳ ಕುರಿತು ಅಂದೇ ಇದಮಿತ್ಥಂ ಎಂದು ಮಾತನಾಡಿದ ಬಸವಣ್ಣ ಹಾಗೂ ಶರಣರಿಗೆ ಮಸಿ ಬಳಿಯುವ ಕೆಲಸವನ್ನು ಅನೇಕ ಪಟ್ಟಭದ್ರರು ಅಂದಿನಿಂದ ಇಂದಿನವರೆಗೆ ಮಾಡುತ್ತಲೇ ಬರುತ್ತಿದ್ದಾರೆ. ಇನ್ನು ಕೆಲವರು ಸಂಶೋಧನೆ ಹೆಸರಿನಲ್ಲಿ ಏನೇನೋ ಊಹೆ ಮಾಡಿ ತಮ್ಮ ಮೂಗಿನ ನೇರಕ್ಕೆ ವಿಚಾರ ಮಾಡಿ ಬಸವಣ್ಣನೆಂಬ ಲೋಕಸೂರ್ಯನಿಗೆ ಉಗುಳುವ ಪ್ರಯತ್ನ ಮೊದಲಿನಿಂದಲೂ ಮಾಡುತ್ತಿದ್ದಾರೆ. ಆದರೆ ಆ ಉಗುಳು ಅವರಿಗೆ ಸಿಡಿಯುತ್ತದೆ ಎಂಬ ಸಾಮಾನ್ಯ ತಿಳಿವಳಿಕೆ ಅವರಿಗಿಲ್ಲ.

Contact Your\'s Advertisement; 9902492681

ಇದು ಸಾಧ್ಯವೆ?
ಸಂಶೋಧನೆ, ಅಭಿಪ್ರಾಯ, ಅನಿಸಿಕೆ, ಅಭಿಮತದ ಹೆಸರಿನಲ್ಲಿ ಬಸವಾದಿ ಶರಣರ ಬಗ್ಗೆ ಅಪಚಾರವೆಸಗುವ, ಅವರ ಹೆಸರಿಗೆ ಮಸಿ ಬಳಿದು ಸುಳ್ಳನ್ನೇ ಸತ್ಯವೆಂದು ಸಾಬೀತುಪಡಿಸಲೆತ್ನಿಸುವವರು ಯಾರೇ ಆಗಿದ್ದರೂ ಅವರನ್ನು ತಡೆದು ಪ್ರಶ್ನಿಸಬೇಕು. ಇನ್ನುಮುಂದೆ ಹೀಗೆ ಮಾಡದಂತೆ ತಾಕೀತು ಮಾಡಬೇಕು. ಅಂಥವರ ವಿರುದ್ಧ ಕಾನೂನು ಸಮರ ನಡೆಸಬೇಕು. ಆದರೆ ಬಸವಣ್ಣನವರನ್ನೇ ಬಂಡವಾಳ ಮಾಡಿಕೊಂಡ ಮಠಾಧೀಶರು ಹಾಗೂ ಅನುಕೂಲಸಿಂಧು ನಡವಳಿಕೆಯ ಬಸವಾನುಯಾಯಿಗಳಿಂದ ಇದು ಸಾಧ್ಯವೇ?

ಬಸವಾದಿ ಶರಣರ ಬಗ್ಗೆ ಮಾತನಾಡಬೇಕಾದರೆ ಅಥವಾ ಬರೆಯಬೇಕಾದರೆ ಅದಕ್ಕೆ ಬೇಕಾದ ಸಂಶೋಧನೆಯ ಪೂರಕ ಆಕರಗಳನ್ನೇ ಮರೆತು ತಮ್ಮ ಬರವಣಿಗೆಗೆ ಅನುಕೂಲವಾಗುವ ಯಾವುದ್ಯಾವುದೋ ಆಕರಗಳನ್ನು ಬಳಸಿಕೊಂಡು ಬಸವಣ್ಣ ಆತ್ಮಹತ್ಯೆ ಮಾಡಿಕೊಂಡರು, ಅವರನ್ನು ಕೊಲೆಗೈಯ್ಯಲಾಗಿದೆ, ಅವರು ಬ್ರಾಹ್ಮಣರಲ್ಲ ಎಂಬಿತ್ಯಾದಿ ತೌಡು ಕುಟ್ಟುವ, ಮೊಸರಲ್ಲಿ ಹರಳು ಹುಡುಕುವ ಕೆಲಸ ಮೊದಲಿಂದಲೂ ನಡೆದಿದೆ. ಅಂತಹ ಕುಟಿಲತೆಗಳಲ್ಲಿ “ಬಸವಣ್ಣ ಎತ್ತು ಮತ್ತು ಬ್ರಾಹ್ಮಣ…” ಎಂಬುದು ಕೂಡ ಒಂದು ಎಂದು ಹೇಳಬಹುದು.

ಬಸವಣ್ಣ ಹಾಗೂ ಶರಣರು ರಚಿಸಿದ ವಚನಗಳು, ಆ ಕಾಲದ ಪರಿಸರ, ಅವರ ಕುರಿತಾಗಿ ಬಂದಿರುವ ಕೃತಿಗಳನ್ನು ಹಾಗೂ ಆ ವಚನಗಳ ನಿಜ ನೆಲೆಯನ್ನು ಅರ್ಥ ಮಾಡಿಕೊಳ್ಳದ ಈ ಉಳಿಗಮಾನ್ಯ ವಿದ್ವಾಂಸರುಗಳು ಉದ್ದೇಶಪೂರ್ವಕವಾಗಿಯೇ ಬಸವಣ್ಣನೆಂಬ “ಜೇನುಗೂಡಿ”ಗೆ ಕಲ್ಲು ಎಸೆಯುವ ಕೆಲಸ ಮಾಡುವ ಮೂಲಕ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಇದು ಅವರುಗಳ ಹಿಡನ್ ಅಜೆಂಡಾ ಕೂಡ ಆಗಿದೆ. ಇನ್ನು ಕೆಲವರು ಏನಕೇನ ಪ್ರಕಾರೇಣ ಪ್ರಸಿದ್ಧಿಗೆ ಬರಬೇಕು ಎಂದು ಬಸವಣ್ಣ ಹಾಗೂ ಶರಣರ ಕುರಿತಾಗಿ ಅಪಚಾರ ಎಸಗುತ್ತಿದ್ದಾರೆ.

ಗುರುವಿಲ್ಲದ ಗುಡ್ಡ ಬಸವಣ್ಣ
ಎನಗೆ ಗುರುಪಥವ ತೋರಿದವರಾರು?
ಲಿಂಗಪಥವ ತೋರಿದವರಾರು?
ಜಂಗಮ ಪಥವ ತೋರಿದವರಾರು?
ಪಾದೋದಕ, ಪ್ರಸಾದವ ತೋರಿದವರಾರು?
ತೋರುವ ಮನವೆ ನೀವೆಂದರಿತೆ

ಎನಗಿನ್ನಾವ ಭಯವಿಲ್ಲ
ಕೂಡಲಸಂಗಮದೇವ

ಬಸವಣ್ಣನವರ ಮೇಲಿನ ಈ ವಚನ ಅವರಿಗೆ ಯಾರು ಗುರುಗಳಾಗಿರಲಿಲ್ಲ. ತನ್ನ ಅರಿವೆ ತನಗೆ ಗುರುವಾಗಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರೂ ಬಸವಣ್ಣನಿಗೆ ಈಶಾನ್ಯಗುರುಗಳಿಂದ ಲಿಂಗದೀಕ್ಷೆ ಆಯಿತು ಎನ್ನುವುದು ಯಾವ ಸಂಶೋಧನೆ? ಅಂತೆಯೇ ನಮ್ಮ ಜನಪದರು ಬಸವಣ್ಣನವರನ್ನು ಗುರುವಿಲ್ಲದ ಗುಡ್ಡ ಎಂದು ಕರೆದಿದ್ದಾರೆ ಎಂದು ಡಾ. ಎಂ.ಎಂ. ಕಲ್ಬುರ್ಗಿಯವರು ಅಭಿಪ್ರಾಯಪಟ್ಟಿದ್ದಾರೆ.

ಬಸವಣ್ಣನವರ ಅಯ್ಯ ನೀನು ಆಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ, ಲೋಕದ ಡೊಂಕು ನೀವೇಕೆ ತಿದ್ದುವಿರಿ, ಎನ್ನ ಚಿತ್ತವು ಹತ್ತಿಯ ಹಣ್ಣು ನೋಡಯ್ಯ, ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ, ಹೊಲಸು ತಿಂಬುವನೆ ಹೊಲೆಯ.. ಇನ್ನು ಮುಂತಾದ ವಚನಗಳನ್ನು ಹೇಳುತ್ತ ಬಸವಣ್ಣನವರೇ ಹೇಳಿಲ್ಲವೇ? ಎಂಬ ಕುತರ್ಕವನ್ನು ಮುಂದಿಟ್ಟು ಜನರನ್ನು ದಿಕ್ಕು ತಪ್ಪಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ.

ಹಾಗೆಂದ ಮಾತ್ರಕ್ಕೆ ಬಸವಣ್ಣ ಹಾಗೂ ಶರಣರ ಬಗ್ಗೆ ಯಾರೂ ಮಾತನಾಡಬಾರದು ಎಂಬುದು ಇದರರ್ಥವಲ್ಲ. ಸಂಶೋಧಕರು ಹಾಗೂ ಬರಹಗಾರರು ಚರಿತ್ರಾರ್ಹ ವ್ಯಕ್ತಿಗಳ ಚರಿತ್ರೆ ಮತ್ತು ಪುರಾಣಗಳ ನಡುವಿನ ದ್ವಂದ್ವವನ್ನು ಬಿಡಿಸಿ ಜನರ ಮುಂದೆ ಸ್ಪಷ್ಟವಾಗಿ ಬಿಚ್ಚಿಡಬೇಕು. ಇಲ್ಲದಿದ್ದಲ್ಲಿ ಸತ್ಯಕ್ಕೆ ಸಮೀಪವಾದ ಅಂಶಗಳನ್ನಾದರೂ ರುಜುವಾತುಪಡಿಸಬೇಕು. ಒಂದು ಸುಳ್ಳನ್ನು ನಿಜ ಎಂದು ಸಾಧಿಸಬೇಕಾದರೆ ಅದರ ಸುತ್ತ ಹತ್ತಾರು ಸುಳ್ಳುಗಳನ್ನು ಎಣೆಯಬೇಕಾಗುತ್ತದೆ. ಇದು ಸುಳ್ಳು ಹೇಳುವ ಆ ಪಂಡಿತರಿಗೂ ಹಾಗೂ ಅವರ ಬರಹಗಳನ್ನು ಓದುವ ಪಾಮರರಿಗೂ ಅಪಾಯ ಕಟ್ಟಿಟ್ಟ ಬುತ್ತಿ.

ಬಸವಣ್ಣನ ನಂತರದ ಆತನ ಸ್ಮಾರಕಗಳು ಎತ್ತುಗಳಾಗಿಯೇ ಚಿತ್ರಿಸಲ್ಪಟ್ಟವು. ಹೆಸರು ಬಸವಣ್ಣನದಾಯಿತು. ಆಕಾರ ಮಾತ್ರ ಎತ್ತುಗಳದ್ದೇ ಆಯಿತು. ಪರಿಣಾಮವಾಗಿ ಬಸವಣ್ಣ ಹಿಂದಾದನು. ಎತ್ತು ಮುಂದಾಯಿತು.  -ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ( ಶತಮಾನೋತ್ಸವ ಸಂದೇಶ ಪುಸ್ತಕದಿಂದ)

ಹಾಗೆ ನೋಡಿದರೆ ಬಸವಣ್ಣನವರ ಶಿವ ಪುರಾಣದಲ್ಲಿ ಬರುವ ಜಡೆಯೊಡೆಯ, ಗಂಗಾಧರ, ಪಾರ್ವತಿಯ ಪತಿ ಅಲ್ಲ. ಬಸವಣ್ಣನ ಶಿವ ದ್ರಾವಿಡ ಶಿವ. ಅದರಂತೆ ಇಲ್ಲಿ ಬಸವಣ್ಣ ವೃಷಭನೆಂಬ ವಾಹನವಾಗಿರ್ದೆ ಕಾಣಾ ಎಂದರೆ ತಾನೇ ಎತ್ತು ಎಂದು ಹೇಳಿಕೊಂಡಿಲ್ಲ. ವೃಷಭನೆಂದರೆ ದೇವಲೋಕದ ಗಣಾಧೀಶ್ವರ! ಶಿವನಿಗೂ ತನಗೂ ಇರುವ ಗಾಢ ಸಂಬಂಧವನ್ನು ಹೇಳಲು ಈ ಸಾಲನ್ನು ಬಳಸಿದ್ದಾರಷ್ಟೇ!!

ಬಸವಣ್ಣ ಹಾಗೂ ಶರಣರು ಬಳಸಿದ ಭಾಷೆ ಸರಳವಾಗಿದೆಯೇನೋ ನಿಜ! ಆದರೆ ವಚನಗಳ ಅರ್ಥ ಅಡಗಿರುವುದೇ ಅವುಗಳ ಕೊನೆಯ ಸಾಲಿನಲ್ಲಿ. ಹೀಗೆ ವಚನವೊಂದರ ಹಿನ್ನೆಲೆ, ಮುನ್ನೆಲೆ ತಿಳಿದು ಅಥೈಸುವ ಪ್ರಯತ್ನ ಮಾಡುವುದನ್ನು ಬಿಟ್ಟು ಅವರ ವಚನದ ಯಾವುದೋ ಸಾಲು ಉದಾಹರಣೆ ನೀಡಿ ಬಸವಣ್ಣನವರೇ ಹೇಳಿಲ್ಲವೇ? ಎಂದು ಅನಿಸಿಕೆ ವ್ಯಕ್ತಪಡಿಸಿದರೆ ನಗಬೇಕೋ ಅಳಬೇಕೋ?

ಕೃಪೆ: ಶರಣ ಮಾರ್ಗ (ಜೂನ್, ೨೦೨೦)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here