ಕಲಬುರಗಿ: ವಿಷಪೂರಿತ ಹಾವು ಕಡಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಗುರುವಾರ ಸಂಜೆ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್-20ರ ಬಿಯ್ಯಾಬಾನಿ ಏರಿಯಾ ನಿವಾಸಿ, ಮೂರು ವರ್ಷ ವಯಸ್ಸಿನ ನಂದಿನಿ ಈಶ್ವರ ಜಾಧವ ಮೃತಪಟ್ಟ ಬಾಲಕಿ. ಬಾಲಕಿ ಮನೆಯ ಅಂಗಳದಲ್ಲಿ ಆಟವಾಡಿಕೊಂಡಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ತಕ್ಷಣ ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್, ಬಾಲಕಿಗೆ ವಿಷಜಂತುವಿನ ಚುಚ್ಚುಮದ್ದು ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಅದೇ ವೇಳೆ ವಿದ್ಯುತ್ ಕಡಿತುಂಟಾಗಿದ್ದರಿಂದ ವೆಂಟಿಲೇಟರ್ ಸೌಲಭ್ಯಕ್ಕಾಗಿ 108 ರಕ್ಷಾಕವಚದಲ್ಲಿ ಚಿಕಿತ್ಸೆ ಮುಂದುವರೆಸುವ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.
ಸ್ಥಳೀಯ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು, ವಿದ್ಯುತ್ ಹಾಗೂ ವೆಂಟಿಲೇಟರ್ ಸೌಲಭ್ಯ ಇದ್ದಿದ್ದರೆ ನಮ್ಮ ಮಗು ಬದುಕುಳಿಯುತ್ತಿತ್ತು ಎಂದು ಕುಟುಂಬದ ಸದಸ್ಯರು ರೋಧಿಸುತ್ತಲೇ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡರು.