ಶಹಾಬಾದ:ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಪಿಂಚಣಿ ಸೌಲಭ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಧಾರವಾಡದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಇದೇ ಡಿಸೆಂಬರ್ 11ಕ್ಕೆ ಕಲಬುರಗಿ ಜಿಲ್ಲೆಯಿಂದ ನೂರಾರು ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘ ರಾಜ್ಯ ಉಪಾಧ್ಯಕ್ಷ ಹಾಗೂ ಪಿಂಚಣಿ ವಂಚಿತರ ಸಂಘದ ಗೌರಾವಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್ ತಿಳಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳಿಗೆ ಜನೇವರಿ 4, 2021ರ ಒಳಗಾಗಿ ಪಿಂಚಣಿ ವಂಚಿತ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಪಿಂಚಣಿ ಒದಗಿಸಬೇಕೆಂದು ಮನವಿ ಮಾಡಲಾಗಿದೆ. ಕಳೆದ ಎಪ್ರಿಲ್ 1, 2006ರಿಂದ ಅನುದಾನಿತ ಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಾಗಲಿ ಅಥವಾ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ ಸೌಲಭ್ಯ ನೀಡಿರುವುದಿಲ್ಲ.ಈಗಾಗಲೇ ಸಾವಿರಾರು ನೌಕರರು ಕೊನೆ ತಿಂಗಳ ಸಂಬಳ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ.ಅವರ ಮುಂದಿನ ಬದುಕು ಬಹಳ ಕಷ್ಟದಾಯಕವಾಗಿದೆ.
ಈ ಬಗ್ಗೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತ ಬರಲಾಗಿದೆ.ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಧಾರವಾಡದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸುತ್ತಿದ್ದೆವೆ. ಇದೇ ಡಿಸೆಂಬರ್ 11 ಕ್ಕೆ ಧಾರವಾಡಕ್ಕೆ ನಮ್ಮ ನೌಕರ ಸಂಘದವರು ತೆರಳಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೆವೆ.ಆದ್ದರಿಂದ ಕಲಬುರಗಿ ಜಿಲ್ಲೆಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ- 9880407613 ಗೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.