ಕಲಬುರಗಿ: ಕನ್ನಡೇತರ ಭಾಷಾ ಮಾಧ್ಯಮದ ಶಾಲೆಗಳಲ್ಲಿ, ಪ್ರಾಥಮಿಕ ಹಂತದಿಂದಲೇ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯ ಪಠ್ಯಕ್ರಮವನ್ನಾಗಿ ಅಳವಡಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಇಂದು (ಸೆ.29) ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡ “ಶಿಕ್ಷಣದಲ್ಲಿ ಕನ್ನಡ ಅನುಷ್ಟಾನ” ಅಭಿಯಾನದ ಹಕ್ಕೊ ತ್ತಾಯದ ಮನವಿ ಪತ್ರವನ್ನು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಿಗಳಿಗೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
2017-18 ನೇಯ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಇರುವ ವಿವಿಧ ಕನ್ನಡೇತರ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಎಲ್ಲಾ ಬಗೆಯ ಖಾಸಗಿ ಶಾಲೆಗಳು, ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಬೇಕು ಎನ್ನುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಹಕ್ಕೊತ್ತಾಯದ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಶರಣಪ್ಪ ಬನ್ನಿಕಟ್ಟಿ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರವನ್ನು ಎಲ್ಲಾ ಶಾಲೆಗಳಿಗೆ ರವಾನಿಸಿ, ಕನ್ನಡ ಭಾಷೆಯ ಅಭಿವೃದ್ಧಿಗೆ ಸಹಕರಿಸಲಾಗುವುದೆಂದು ಹೇಳಿದರು.
ಅಭಿಯಾನದಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಚ್ ನಿರಗುಡಿ, ಸಾಹಿತಿ ರಾಜಶೇಖರ್ ಮಾಂಗ, ಕೆ.ಎಚ್ ಮಲ್ಲಿಕಾರ್ಜುನ ವಿಜಯಕುಮಾರ ಹಂಚಿನಾಳ, ರತ್ನಾಕರ್ ಕುಲರ್ಣಿ, ಮಲ್ಲಿನಾಥ ಕುಂಬಾರ ಯಶವಂತ ಸಲಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.