ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ ತೂಕದಲ್ಲಿ ಆಗುತ್ತಿರುವ ವ್ಯತ್ಯಾಸ ಸರಿಪಡಿಸಬೇಕು ಎಂದು ರೈತ ಮುಖಂಡರಾದ ಶರಣು ಕುಂಬಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಉತ್ತರ ಪ್ರದೇಶದಲ್ಲಿ 3500, ಪಂಜಾಬ್ ನಲ್ಲಿ 3800 ಗುಜರಾತ್ ನಲ್ಲಿ 4400 ದರ ನಿಡುತ್ತಿದ್ದಾರೆ.ಕರ್ನಾಟಕದಲ್ಲಿ ನ್ಯಾಯಯುತ ದರ ನಿಗದಿಪಡಿಸಿ ರೈತರಿಗೆ ನ್ಯಾಯ ಕೊಡಿಸಬೇಕು,ಉತ್ಪಾದನಾ ವೆಚ್ಚ ಕೂಡಾ ಏರಿಕೆಯಾಗಿದೆ.ಹೀಗಾಗಿ ಪ್ರಸಕ್ತ ಹಂಗಾಮಿಗೆ ಕಬ್ಬಿನ ದರ ಪರಿಷ್ಕರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕಬ್ಬಿಗೆ ಬಳಸುವ ರಸಗೊಬ್ಬರದ, ಕೀಟನಾಶಕ,ಕಟಾವು ಕೂಲಿ,ಸಾಗಣಿಕೆ ವೆಚ್ಚ, ವಿಪರೀತವಾಗಿ ಎರಿಕೆಯಾಗಿದೆ.ಇದನ್ನು ಪರಿಗಣಿಸಿ ಹೆಚ್ಚುವರಿ ದರ ನಿಗದಿ ಮಾಡಬೇಕು.ಅಫಜಲಪುರ ತಾಲೂಕಿನಲ್ಲಿ ನಿರಂತರವಾಗಿ ರೈತರಿಗೆ ಅನ್ಯಾಯವಾಗುತ್ತಿದೆ.ಕಾರ್ಖಾನೆಗಳಲ್ಲಿ ನಿರಂತರವಾಗಿ ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ.ಇದು ರೈತರಿಗೆ ಗೊತ್ತಿದ್ದರೆ ಸಾಕು ಅಸಹಾಯಕರಾಗಿ ಕಾರ್ಖಾನೆಗೆ ಕಬ್ಬು ಹಾಕುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಗಂಬೀರವಾದ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕು,ಅಲ್ಲದೇ ಹೋರಾಟಗಾರರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದರೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ.ಅಲ್ಲದೇ ಈ ಬಾರಿ ದೀಪಾವಳಿ ಮುಂಚೆಯೇ ಕಾರ್ಖಾನೆಗಳು ಪ್ರಾರಂಭಿಸಬೇಕು,ತಡವಾಗಿ ಕಾರ್ಖಾನೆ ಪ್ರಾರಂಭ ಮಾಡಿದ್ದರಿಂದ ಮಧ್ಯವರ್ತಿಗಳು ರೈತರಿಂದ ಕಟಾವಿಗೆ ಹಣ ವಸೂಲಿ ಮಾಡುತ್ತಾರೆ.
ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಕಾರ್ಖಾನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.