ಕಲಬುರಗಿ: ಭಾರತ ದೇಶವು ವಿಶ್ವಗುರು ಆಗುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಪೂರಕ ಸಾಹಿತ್ಯ ಹೊರತರಬೇಕು. ಇದಕ್ಕಾಗಿ ಸಾಹಿತಿಗಳು ಸಹ ಸಾಹಿತ್ಯ ಸೇವೆ ಸಲ್ಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ್ ಪಾಟೀಲ್ ಸೇಡಂ ನುಡಿದರು.
ಸರ್ವಜ್ಞ ಕಾಲೇಜಿನಲ್ಲಿ ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕಿ ಡಾ. ಶೀತಲ್ ಪ್ರಶಾಂತ ಅವರ ವಿರಚಿತ ‘ನೆನಪುಗಳು ಸುಳಿದಾವು’ ಕೃತಿ ಜನಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯದಿಂದ ಮನುಷ್ಯನಲ್ಲಿ ಮಾನವೀಯ ಸಂಬಂಧಗಳು ಗಟ್ಟಿಯಾಗಬೇಕು. ಇದರಿಂದ ಜನರ ಮನಸ್ಸು ಪರಿವರ್ತಿಸುವ ಹಾಗೂ ಸೃಜನಾತ್ಮಕ ಶಕ್ತಿ ಬೆಳೆಸುವ ಉತ್ತಮ ಸಾಹಿತ್ಯ ರಚಿಸಬೇಕು. ಆದರೆ ಮನುಷ್ಯತ್ವ ಬದಿಗಿಟ್ಟು ತಾತ್ಕಾಲಿಕ ಸುಃಖ, ಶಾಂತಿಗಾಗಿ ಬದುಕುವುದು ಬೇಡ, ದುಡಿಯುವ ಸಂಸ್ಕೃತಿ, ಸಂಸ್ಕಾರ, ಶಿಸ್ತು, ಸಂಯಮ ರೂಢಿಸಿಕೊಂಡು ಉತ್ತಮ ರೀತಿಯಲ್ಲಿ ಬದುಕುಬೇಕು ಎಂದರು.
ಕೃತಿ ಬಿಡುಗಡೆಗೊಳಿಸಿದ ಕೇಂದ್ರೀಯ ವಿವಿ ಕುಲಸಚಿವ ಡಾ. ಬಸವರಾಜ್ ಡೋಣೂರ ಅವರು, ಈ ಕೃತಿಯಲ್ಲಿ ೧೩೪ ಹನಿಗವನಗಳಿದ್ದು, ಸುಃಖ, ದುಃಖ, ತುಮಲು, ಸಂಬಂಧ, ಸ್ನೇಹ, ಪ್ರೀತಿ, ಕರುಣೆ ಹೀಗೆ ಎಲ್ಲ ಬಗೆಯ ನವರಸಗಳು ಸೇರಿವೆ. ಕನ್ನಡ ಸಾಹಿತ್ಯದಲ್ಲಿ ಹನಿಗವನ ಕೂಡ ಸ್ಥಾನ ಪಡೆದುಕೊಂಡಿದೆ. ಡಾ. ಶೀತಲ್ ಅವರ ಸಾಹಿತ್ಯದ ವೈವಿಧ್ಯತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯಿಕ ವಲಯದಲ್ಲಿ ಹೆಸರಾಂತ ಲೇಖಕಿಯಾಗಿ ಗುರುತಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ರಾಜ್ಯಾಧ್ಯಕ್ಷೆ, ಮಹಿಳಾ ಸಾಹಿತಿ ಡಾ. ವಿಶಾಲಾಕ್ಷಿ ವಿ. ಕರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶಿಕ್ಷಣ ತಜ್ಞ ಚೆನ್ನಾರಡ್ಡಿ ಪಾಟೀಲ್ ವೇದಿಕೆ ಮೇಲಿದ್ದರು. ಹಿರಿಯ ಮಕ್ಕಳ ಸಾಹಿತಿ ಡಾ. ಎ.ಕೆ. ರಾಮೇಶ್ವರ ಕೃತಿ ಪರಿಚಯಿಸಿದರು. ಕೃತಿ ಲೇಖಕಿ ಡಾ. ಶೀತಲ್ ಪ್ರಶಾಂತ ಅನಿಸಿಕೆ ವ್ಯಕ್ತಪಡಿಸಿದರು.
ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ಎಸ್. ದೇಸಾಯಿ, ಎನ್‌ವಿ ಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿ ರವೀಂದ್ರ ಕರಜಗಿ, ಖ್ಯಾತ ವೈದ್ಯ ಡಾ. ಎಸ್. ಎಸ್. ಗುಬ್ಬಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್‌ಕೆಇ ಆಡಳಿತ ಮಂಡಳಿ ಸದಸ್ಯ, ಖ್ಯಾತ ಮೂಳೆತಜ್ಞ ಡಾ. ಎಸ್.ಬಿ. ಕಾಮರಡ್ಡಿ, ಮಹಾದೇವಿ ಮಾಲಕರಡ್ಡಿ, ಗೀತಾ ಚನ್ನಾರೆಡ್ಡಿ ಪಾಟೀಲ್, ಕರುಣೇಶ ಹಿರೇಮಠ, ಬಸವರಾಜ್ ಬೆಂಡಗುಂಬಳ, ವಿಶ್ವನಾಥ ಸ್ವಾಮೀಜಿ, ಡಾ. ಎಸ್.ಎಸ್. ಹಿರೇಮಠ, ವೆಂಕಟರಡ್ಡಿ, ಭೀಮಣ್ಣ ಬೋನಾಳ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಪ್ರಭಾವತಿ ಪಾಟೀಲ್ ನಿರೂಪಿಸಿದರು. ಡಾ. ಶೈಲಜಾ ರಾಜಶೇಖರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ಜಮಶೆಟ್ಟಿ ನಗರದಲ್ಲಿ ೧೦ ಸಾವಿರ ಚದರ ಅಡಿ ಮೀಟರ್ ಅಳತೆಯ ದೊಡ್ಡದಾದ ನಿವೇಶನ ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಹಾಗೂ ಸಭಾಂಗಣ ನಿರ್ಮಿಸುವ ಗುರಿ ಹೊಂದಿದ್ದೇವೆ. -ಡಾ. ಶೈಲಜಾ ಬಾಗೇವಾಡಿ, ಸಂಸ್ಥೆಯ ನಿರ್ದೇಶಕಿ