ಸುರಪುರ: ತಾಲೂಕಿನ ವಾಗಣಗೇರಾ ಗ್ರಾಮದಲ್ಲಿನ ಮಲ್ಲಿಕಾರ್ಜುನ,ರೇಣುಕಾ ದಂಪತಿಗಳ ಮನೆಯಲ್ಲಿನ ಇಬ್ಬರು ಮಕ್ಕಳು ಥಲಸ್ಸೇಮಿಯಾ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಕುಟುಂಬಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಭೇಟಿ ನೀಡಿ ಕುಟುಂಬಕ್ಕೆ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಹೆಚ್‍ಓ ಅವರು,ಗ್ರಾಮದ ಮಲ್ಲಿಕಾರ್ಜುನ ರೇಣುಕಾ ದಂಪತಿಗಳ ಇಬ್ಬರು ಮಕ್ಕಳಾದ ಹರಿಶ್ಚಂದ್ರ ಮತ್ತು ಯಶೋಧಾ ಎನ್ನುವ ಇಬ್ಬರು ಮಕ್ಕಳು ಥಲಸ್ಸೇಮಿಯಾ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು,ಸಾಮಾನ್ಯವಾಗಿ ಈ ಕಾಯಿಲೆ ಅನುವಂಶಿಕವಾಗಿ ಬರುವ ಸಾಧ್ಯತೆ ಇದೆ.ಇದಕ್ಕೆ ತಲೆಮಾರಿನಿಂದ ಕುಟುಂಬದೊಳಗೆ ಮದುವೆ ಮಾಡಿಕೊಳ್ಳುವ ದಂಪತಿಗಳಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.
ಅಲ್ಲದೆ ಈ ಮಕ್ಕಳಿಗೆ ಚಿಕಿತ್ಸೆಗಾಗಿ ಈಗಾಗಲೇ ನಾರಾಯಣ ಹೆಲ್ತ ಸಿಟಿ ಬೆಂಗಳೂರು ನಿರ್ದೇಶಕರಿಗೆ ಸಂಪರ್ಕಿಸಿ ಉಚಿತ ಚಿಕಿತ್ಸೆಗಾಗಿ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.ಅಲ್ಲದೆ ಶಾಸಕರಾದ ರಾಜುಗೌಡ ಅವರು ತಮ್ಮ ಅನುದಾನವನ್ನು ನೀಡುವುದಾಗಿ ತಿಳಿಸಿದ್ದಾರೆ.ಅಲ್ಲದೆ ಸರಕಾರ ದಿಂದಲೂ ಸಾಧ್ಯವಾದ ನೆರವು ಕೊಡಿಸುವುದಾಗಿ ತಿಳಿಸಿದ್ದಾರೆ.
ಮಕ್ಕಳಿಗೆ ಬೋನ್ ಮ್ಯಾರೊ ಟ್ರಾನ್ಸಪ್ಲಾಂಟ್ ಮಾಡಬೇಕಿದ್ದು ಇದಕ್ಕೆ ಸುಮಾರು 40 ಲಕ್ಷ ವೆಚ್ಚ ತಗುಲುತ್ತದೆ ಎಂದು ತಿಳಿಸಿದರು.ಈಗಾಗಲೇ ಪರೀಕ್ಷೆ ಮಾಡಿಸಲಾಗಿದ್ದು ಯಶೋಧಾ ಮಗುವಿಗೆ ತಂದೆ ಬೋನ್ ಮ್ಯಾರೊ ಹೊಂದಾಣಿಕೆಯಾಗಿದ್ದು ಇನ್ನೊಂದು ಮಗು ಹರಿಶ್ಚಂದ್ರನಿಗೆ ಬೋನ್ ಮ್ಯಾರೋ ನೀಡುವ ದಾನಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದರು.
ಮಕ್ಕಳಿಗೆ ಬೋನ್ ಮ್ಯಾರೋ ಟ್ರಾನ್ಸ್‍ಪ್ಲಾಂಟ್ ಚಿಕಿತ್ಸೆಯಾದ ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಕ್ಕಳ ತಜ್ಞರಾದ ಡಾ:ಮಲ್ಲಿಕಾರ್ಜುನ ಅವರು ನಿರಂತರ ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ:ಮಲ್ಲಿಕಾರ್ಜುನ,ಆಯುಷ್ ವೈದ್ಯರಾದ ಸಿದ್ದಪ್ಪ ನ್ಯಾಮಗೊಂಡ,ತಾಲೂಕು ವ್ಯವಸ್ಥಾಪಕರಾದ ಆರ್.ವಿಶ್ವನಾಥ ನಾಯಕ ಹಾಗೂ ಪೇಠ ಅಮ್ಮಾಪುರ ಪ್ರಾ.ಆ.ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.