ಕಲಬುರಗಿ: ನನ್ನ ದುಡಿಮೆಗೆ ಪ್ರತಿಫಲವಾಗಿ ನಿಮ್ಮೆಲ್ಲರ ಬಳಿ ಕೂಲಿ ಕೇಳಲು ಬಂದಿದ್ದೇನೆ. ನನಗೆ ಹೆಚ್ಚಿನ ಕೂಲಿ ಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ಕುಂದನೂರು ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದ ಅವರು ಕುಂದನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ರೂ 45 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್ ಹಾಗೂ ಹೊನಗುಂಟಾದಿಂದ ಗ್ರಾಮಕ್ಕೆ ರೂ 6 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿದ್ದೇನೆ ಎಂದ ಖರ್ಗೆ ಈ ಗ್ರಾಮದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಇಂದು ಕೂಲಿ ಕೇಳಲು ಬಂದಿದ್ದೇನೆ. ತಾವು ಹೆಚ್ಚಿನ ಕೂಲಿ ಕೊಟ್ಟು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಳೆದ ಮೂರು ವರ್ಷದಲ್ಲಿ ರಾಜ್ಯದಿಂದ ಕೇಂದ್ರಕ್ಕೆ ರೂ 6 ಲಕ್ಷ ಕೋಟಿ ಟ್ಯಾಕ್ಸ್ ಕಟ್ಟಿದ್ದೇವೆ. ಆದರೆ, ಕೇಂದ್ರ ನಮಗೆ ವಾಪಸ್ ಕೊಟ್ಟಿರುವುದು ಕೇವಲ ರೂ 2 ಲಕ್ಷ ಕೋಟಿ. ಉತ್ತರ ಪ್ರದೇಶ ಕಟ್ಟಿದ ಟ್ಯಾಕ್ಸ್ ರೂ 2 ಲಕ್ಷ ಕೋಟಿ ಆದರೆ ಕೇಂದ್ರ ಉತ್ತರ ಪ್ರದೇಶಕ್ಕೆ ಕೊಟ್ಟಿರುವುದು ರೂ 6 ಲಕ್ಷ ಕೋಟಿ. ನೋಡಿದೆ ಹೇಗಿದೆ ತಾರತಮ್ಯ ಎಂದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನ ಮೇಲೆ ಅಕ್ಕಿ ಹಾಗೂ ಹಾಲಿನ ಪೌಡರ್ ಕಳ್ಳತನ ಮಾಡಿ ಸಾಗಾಣಿಕೆ ಮಾಡಿರುವುದಕ್ಕೆ ಒಟ್ಟು 40 ಕೇಸುಗಳು ದಾಖಲಾಗಿವೆ. ಇಂತಹ ವ್ಯಕ್ತಿಯನ್ನು ಸಮರ್ಥಿಸಲು ಸಿಎಂ ಬೊಮ್ಮಾಯಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಬಂದಿದ್ದರು ಇದು ದುರಂತ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನ ಹಿಂದೆ ನಿಮ್ಮ ಮಕ್ಕಳು ಹೋದರೆ ನಿಮ್ಮ ಮಕ್ಕಳ ಮೇಲೂ ಕೂಡಾ ಕೇಸು ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಚಿತ್ತಾಪುರದ ಮೊಮ್ಮಗ ನಾನು ಇನ್ನೂ ಬದುಕಿದ್ದೇನೆ ಚಿತ್ತಾಪುರವನ್ನು ಕಳ್ಳಕಾಕರ ಕೈಗೆ ಕೊಡುವುದಕ್ಕೆ ನಾನು ಬಿಡುವುದಿಲ್ಲ ಎಂದರು.
ಬಿಜೆಪಿಯರು ಸುಳ್ಳು ಹೇಳುತ್ತಾರೆ ಅವರ ಮಾತು ಕೇಳಬೇಡಿ. ಪ್ರತಿಯೊಬ್ಬರು ಜೀರೋ ಅಕೌಂಟ್ ತೆಗೆಯಿರಿ ರೂ15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಹತ್ತು ವರ್ಷ ಆಯ್ತು ಹದಿನೈದು ಲಕ್ಷ ಬಿಡಿ ಹದಿನೈದು ರೂಪಾಯಿ ಕೂಡಾ ಹಾಕಿಲ್ಲ ಎಂದು ಕುಟುಕಿದರು.
ಬಿಜೆಪಿ ಪಕ್ಷ ಹಿಂದೂ ಮುಸ್ಲಿಂ ನಡುವೆ ಜಾತಿ ಜಗಳ ಹಚ್ಚುವ ರಾಜಕೀಯ ಮಾಡುತ್ತಿದೆ. ಆದರೆ ಮೋದಿ ಹಾಗೂ ಯೋಗಿಯವರು ಕುಂದನೂರು ಗ್ರಾಮಕ್ಕೆ ಬಂದು ನೋಡಲಿ ಇಲ್ಲಿ ಹಿಂದೂಗಳು ಹಾಗೂ ಮುಸ್ಲಿಂರು ಅನ್ಯೋನ್ಯ ವಾಗಿದ್ದಾರೆ. ಈ ದೇಶಕ್ಕೆ ಈಗ ಬೇಕಾಗಿರುವುದು ಕುಂದನೂರಿನಂತ ಭಾವೈಕ್ಯತೆ ಎಂದು ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಹೇಳಿದರು.
ವೇದಿಕೆಯ ಮೇಲೆ ಮಹೆಬೂಬ್ ಸಾಹೇಬ ಸೇರಿದಂತೆ ಮತ್ತಿತರಿದ್ದರು.