ಕಲಬುರಗಿ: ಖರ್ಗೆ ಹೆಂಡತಿ ಮಕ್ಕಳನ್ನ ಸಾಫ್ ಮಾಡುತ್ತೇನೆ ಎಂದು ಮಣಿಕಂಠ ರಾಠೋಡ ಹೇಳಿದ್ದಾನೆ ಎನ್ನಲಾದ ಆಡಿಯೋ ಧ್ವನಿಗೆ ಖಡಕ್ ಎಚ್ಚರಿಕೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಳೆದ 50 ವರ್ಷದಿಂದ ಕಲಬುರಗಿ ಜನರಿಗಾಗಿಯೇ ದುಡಿಯುತ್ತಿದ್ದಾರೆ ಅಂತವರನ್ನು ಸಾಯಿಸುತ್ತಾನಂತೆ ಎಂದರು.
ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಖರ್ಗೆ ಸಾಹೇಬರು, ನಮ್ಮ ತಾಯಿ, ನಾನು ಹಾಗೂ ನನ್ನ ಪತ್ನಿ ತಪ್ಪು ಏನಾದರೂ ಮಾಡಿದ್ದೀವಾ ನಮ್ಮನ್ನ ಸಾಫ್ ಮಾಡಲು? ನಾನು ಇಂತಹ ಹತ್ತು ಮಣಿಕಂಠ ರಾಠೋಡಗಳನ್ನು ನೋಡಿದ್ದೇನೆ ಎಂದು ಖಡಕ್ ಉತ್ತರ ನೀಡಿದರು.
ಈ ಸಲದ ಚಿತ್ತಾಪುರ ಚುನಾವಣೆ ವಿಚಿತ್ರ ವಾತಾವರಣದಲ್ಲಿ ನಡೆಯುತ್ತಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆಯುತ್ತಿಲ್ಲ ಬದಲಿಗೆ ಚಿತ್ತಾಪುರ ಜನರ ಸ್ವಾಭಿಮಾನದ ಬದುಕಿಗೆ ಧಕ್ಕೆ ತರುವಂತ ಚುನಾವಣೆಯಾಗಿದೆ. ಇದನ್ನು ಮನಗಂಡು ತಾವೆಲ್ಲ ಮತ ಚಲಾವಣೆ ಮಾಡಬೇಕು ಎಂದು ಕರೆ ನೀಡಿದರು.
ನಮ್ಮ ಯುವಕರ ಭವಿಷ್ಯ ಹಾಗೂ ಮಹಿಳೆಯರ ಸುರಕ್ಷತೆಗಾಗಿ ನೀವೆಲ್ಲ ನನಗೆ ಓಟು ಮಾಡಬೇಕು ಎಂದು ಮನವಿ ಮಾಡಿದರು.