5 ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಅಸ್ತು: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಯಾವಗ ಆರಂಭ?

1
126

ಬೆಂಗಳೂರು; ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ, ಶಕ್ತಿ ಮತ್ತು ಯುವನಿಧಿ ಯೋಜನೆಗಳ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆ ಸಮ್ಮತಿ ನೀಡಿದೆ.

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸುವುದರ ಮೂಲಕ ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ;ಮುಂದೆಯೂ ನುಡಿದಂತೆ ನಡೆಯುತ್ತೇವೆ ಎಂಬ ಬದ್ಧತೆಯನ್ನು ಸಿದ್ದರಾಮಯ್ಯ ಸರಕಾರ ಮೆರೆದಿದೆ.

Contact Your\'s Advertisement; 9902492681

5 ಗ್ಯಾರಂಟಿಗಳ ಕುರಿತಂತೆ ಸಂಪುಟ ಸಭೆಯಲ್ಲಿ ವಿಸ್ತøತವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಂಪುಟ ಸಹದ್ಯೋಗಿಗಳ ಜತೆಗೆ ಚರ್ಚಿಸಿ ಒಪ್ಪಿಗೆ ಪಡೆದುಕೊಂಡ ನಂತರ ಕಾನ್ಪರೆನ್ಸ್ ಹಾಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಯಾವುದೇ ಜಾತಿ,ಧರ್ಮ,ಭಾಷೆಯ ತಾರತಮ್ಯವಿಲ್ಲದೇ ಈ ಎಲ್ಲ 5 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಗೃಹಜ್ಯೋತಿ: ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದು ಜನರಿಗೆ ನೀಡಿದ ಮೊದಲ ಭರವಸೆಯಾಗಿದ್ದು,ಅದನ್ನು ನಮ್ಮ ಸರಕಾರ ಜಾರಿಗೊಳಿಸಲಿದೆ.

ಇದಕ್ಕಾಗಿ ಕಳೆದ ವರ್ಷ ಬಳಕೆಯ ಒಟ್ಟು ಸರಾಸರಿ ವಿದ್ಯುತ್ ಯೂನಿಟ್ ಲೆಕ್ಕ ಹಾಕಿ; ಅದರ ಮೇಲೆ ಶೇ.10ರಷ್ಟು ಹೆಚ್ಚಳಕ್ಕೆ ಅವಕಾಶ ನೀಡಲಾಗಿದ್ದು,ಅಲ್ಲಿಯವರೆಗಿನ ವಿದ್ಯುತ್ ಉಚಿತವಾಗಿ ಯಾವುದೇ ರೀತಿಯ ಬಿಲ್ ಪಾವತಿಸದೇ ಬಳಸಬಹುದಾಗಿದೆ. ಒಟ್ಟಿನಲ್ಲಿ ತಿಂಗಳವರೆಗೆ 200 ಯೂನಿಟ್‍ವರೆಗೆ ವಿದ್ಯುತ್ ಉಚಿತವಾಗಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಬಾಕಿ ಉಳಿಸಿಕೊಂಡಿರುವ ಈ ಹಿಂದಿನ ವಿದ್ಯುತ್ ಬಿಲ್‍ಅನ್ನು ಅವರೇ ಕಟ್ಟಿಕೊಳ್ಳಬೇಕಿದ್ದು,ಅದಕ್ಕೆ ಕೆಲ ಸಮಯ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಜುಲೈ 1ರಿಂದ ಜಾರಿಗೆ ಬರಲಿದೆ ಎಂದರು.

ಗೃಹಲಕ್ಷ್ಮೀ ಯೋಜನೆ: ಮನೆಯ ಯಜನಮಾನಿಗೆ ತಿಂಗಳಿಗೆ 2 ಸಾವಿರ ರೂ. ಒದಗಿಸುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಇದಕ್ಕೆ ಬ್ಯಾಂಕ್ ಖಾತೆ,ಆಧಾರ್ ಕಾರ್ಡ್ ಒದಗಿಸಬೇಕಿದೆ. ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಜು.15ರಿಂದ ಆಗಸ್ಟ್ 15ರವರೆಗೆ ಈ ಪ್ರಕ್ರಿಯೆಯನ್ನು ಸಂಪೂರ್ಣ ಪೂರ್ಣಗೊಳಿಸಿ ಸ್ವಾತಂತ್ರ್ಯೋತ್ಸವ ದಿನವಾದ ಆ.15ರಂದು ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ದಾರರೆಲ್ಲರಿಗೂ ನೀಡಲಾಗುತ್ತದೆ. ಈಗಾಗಲೇ ಸಾಮಾಜಿಕ ಭದ್ರತಾ ಯೋಜನೆ ಅಡಿ ಪಿಂಚಣಿ ಪಡೆಯುತ್ತಿರುವವರ ಪಿಂಚಣಿಯ ಜೊತೆಗೆ ಈ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ.ಹಣವೂ ಅವರ ಕೈ ಸೇರಲಿದ್ದು,ಯಾವುದನ್ನು ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸಾಪ್ಟವೇರ್‍ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಮನೆಯ ಯಜಮಾನಿ ಯಾರು ಎಂಬುದನ್ನು ಆ ಕುಟುಂಬದವರೇ ನಿರ್ಧರಿಸಿಕೊಳ್ಳಬೇಕು ಎಂದರು.

ಅನ್ನಭಾಗ್ಯ ಯೋಜನೆ: ಈ ಯೋಜನೆ ಅಡಿ ಜುಲೈ 1ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‍ದಾರರಿಗೆ ತಲಾ ಒಬ್ಬರಿಗೆ 10 ಕೆ.ಜಿಯಂತೆ ಆಹಾರ ಧಾನ್ಯ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಈಗಾಗಲೇ ಈ ತಿಂಗಳ ಆಹಾರಧಾನ್ಯ ಸರಬರಾಜಾಗಿರುವ ಕಾರಣ ಮತ್ತು ಸಂಗ್ರಹವೂ ಇರದ ಕಾರಣ ಈ ತಿಂಗಳಲ್ಲಿ ಜಾರಿಗೆ ತರಲಾಗಿಲ್ಲ; ಅದರ ಬದಲಿಗೆ ಜುಲೈ 1ರಿಂದ ಜಾರಿಗೊಳಿಸಲಾಗುವುದು ಎಂದರು.

ಈ ಹಿಂದೆ ನಮ್ಮ ಸರಕಾರ ಅನ್ನಭಾಗ್ಯ ಯೋಜನೆ ಅಡಿ 07 ಕೆಜಿ ಆಹಾರಧಾನ್ಯ ನೀಡಲಾಗುತ್ತಿದ್ದು, ಈ ಹಿಂದಿನ ಸರಕಾರ ಅದನ್ನು 5 ಕೆ.ಜಿಗೆ ಇಳಿಸಿತ್ತು ಎಂದು ಹೇಳಿದ ಸಿಎಂ ಸಿದ್ದು ಅವರು ನಾವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 10 ಕೆ.ಜಿ ಆಹಾರ ನೀಡುವ ಯೋಜನೆ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.

ಶಕ್ತಿ(ಮಹಿಳೆಯರಿಗೆ ಸರಕಾರಿ ಬಸ್‍ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ)ಯೋಜನೆ: ಮಹಿಳೆಯ(ವಿದ್ಯಾರ್ಥಿನಿಯರು ಸೇರಿದಂತೆ)ರಿಗೆ ರಾಜ್ಯದಾದ್ಯಂತ ಸರಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಯೋಜನೆಯನ್ನು ಇದೇ ಜೂ.11ರಿಂದ ಜಾರಿಗೊಳಿಸಲಾಗುವುದು. ಈ ಯೋಜನೆಗೆ ಬೆಂಗಳೂರಿನಲ್ಲಿ ಇದೇ 11ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ರಾಜ್ಯದೊಳಗೆ ಎಸಿ ಬಸ್‍ಗಳು ಮತ್ತು ಲಕ್ಸುರಿ ಬಸ್‍ಗಳು ಹೊರತುಪಡಿಸಿ ಬಿಎಂಟಿಸಿ ಬಸ್ ಸೇರಿದಂತೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಉಳಿದ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ರೀತಿ ಮಾಡುವುದರಿಂದ ಶೇ.94ರಷ್ಟು ಬಸ್‍ಗಳಲ್ಲಿ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಪುರುಷರಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಲಾಗುವುದು ಎಂದು ಅವರು ಹೇಳಿದರು.

ಯುವನಿಧಿ: ಈ ಯುವನಿಧಿ ಯೋಜನೆ ಅಡಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಮತ್ತು ಡಿಪ್ಲೋಮಾ ಪದವೀಧರರಿಗೆ 1500 ರೂ.ಗಳ ನಿರುದ್ಯೋಗ ಭತ್ಯೆ ನೀಡುವುದಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು,ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.

2022-23ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಪದವೀಧರರು,ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾ ಪದವೀಧರರಿಗೆ ಅರ್ಜಿ ಸಲ್ಲಿಸಿದ ದಿನದಿಂದ 24 ತಿಂಗಳವರೆಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಅವಧಿಯಲ್ಲಿ ಸರಕಾರಿ ಅಥವಾ ಖಾಸಗಿ ಕೆಲಸಕ್ಕೆ ಸೇರಿದಲ್ಲಿ ಈ ಭತ್ಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಎಷ್ಟು ಜನ ನಿರುದ್ಯೋಗಿಗಳಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿದ್ದೇವೆ. ಶೀಘ್ರ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವರುಗಳು ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here