ಶಹಾಬಾದ: ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸುವುದು ಹಾಗೂ ಕರಿ ಹರಿಯುವ ವಿಶಿಷ್ಟ ಮತ್ತು ಅಪರೂಪದ ಆಚರಣೆ ಸೋಮವಾರ ಸಂಜೆ ಜನಸಾಗರದ ಮಧ್ಯೆ ಸಂಪನ್ನಗೊಂಡಿತು.
ದೇವಿಯ ಮೂರ್ತಿಯನ್ನು ರವಿವಾರ ರಾತ್ರಿ ಹತ್ತಿರದ ಕಾಗಿಣಾ ನದಿಗೆ ಗಂಗಾಸ್ನಾಕ್ಕೆ ತೆಗೆದುಕೊಂಡು ಹೋಗಿ, ಸೋಮವಾರ ಬೆಳಿಗ್ಗೆ ಪೂಜೆ, ವಿಧಿ ವಿಧಾನಗಳ ನಂತರ ಗ್ರಾಮದ ಅಗಸಿಯಲ್ಲಿ ನಿಲ್ಲಿಸಿ, ಗ್ರಾಮಸ್ಥರು ದೇವಿಗೆ ಪೂಜೆ, ನೈವಿದ್ಯ, ಹಣ್ಣು ಕಾಯಿ ಅರ್ಪಿಸಿದರು.
ಬಂಡಿ ಓಡಿಸಿ ಕರಿ ಹರಿದರು : ಕಾರ ಹುಣ್ಣಿಮೆಯ ಮೂಲ ನಕ್ಷತ್ರದಲ್ಲಿ ನಡೆಯುವ ಈ ಜಾತ್ರೆಯನ್ನು ಜನಸಾಗರವೇ ಬಂದಿತ್ತು.ಊರೊಳಗಿಂದ ಬಂಡಿ ದೇವಸ್ಥಾನಕ್ಕೆ ತಲುಪುವ ಮಾರ್ಗದಲ್ಲಿಉ ರೈತರು ತಮ್ಮ ಎತ್ತುಗಳನ್ನು ಬಂಡಿಗೆ ಹೂಡಿ ಕೃತಾರ್ಥರಾದರು. ದೇವಸ್ಥಾನಕ್ಕೆ ತಲುಪಿದ ಬಂಡಿಗೆ ಕರಿ ಹರಿಯುವುದಕ್ಕಾಗಿ ಸುಮಾರು ದಿನಗಳಿಂದ ಜೋಡೆತ್ತುಗಳನ್ನು ಮೇಯಿಸಿ ಬಂಡಿಗೆ ಕಟ್ಟಿ, ಬಂಡಿಯೊಳಗೆ ಖಡ್ಗದಾರಿಯಾದ ಕುಲಕರ್ಣಿ ಹಾಗೂ ಬಾರಕೋಲು ಹಿಡಿದ ಮಜ್ಜಿಗೆ ಮನೆತನದ ವ್ಯಕ್ತಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ಮಂದಿರದ ಗುಡ್ಡದಿಂದ ಬಂಡಿ ಓಡುವ ಮನಮೋಹಕ ದೃಶ್ಯವನ್ನು ಸಾವಿರಾರು ಜನರು ನೋಡಿ ದೇವಿಗೆ ಕೈ ಮುಗಿದು ಧನ್ಯಾರ್ಥತೆಯನ್ನು ಅನುಭವಿಸಿದರು.
ಭಂಕೂರ ಕರಿ ಹರಿಯುವುದನ್ನು ನಾಡಿನ ಎಲ್ಲಡೆಯಿಂದ ಜನರು ಆಗಮಿಸಿ, ತುದಿಗಾಲಲ್ಲಿ ನಿಂತು ಕುತೂಹಲ ಹಾಗೂ ಆತಂಕದಿಂದ ವೀಕ್ಷಿಸಿದರು. ಗುಡ್ಡದಿಂದ ಬಂಡಿ ಓಡುವ ದೃಶ್ಯ ಮಾತ್ರ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಗುಡ್ಡದಿಂದ ಕೆಳಗಡೆ ಹೋದ ನಂತರ ಬಂಡಿಯೂ ಊರ ಹೊರವಲಯದಿಂದ ಈಶ್ವರ ದೇವಸ್ಥಾನದ ಹತ್ತಿರ ಬಂದು ನಿಂತು ಅಗಸಿಗೆ ಕಟ್ಟಿದ ಸಿಂಗರಿಸಿದ ಹಗ್ಗವನ್ನು (ಕರಿ) ಹರಿಯುವ ರೋಮಾಂಚನ ದೃಶ್ಯವನ್ನು ನೋಡಲು ಸಾವಿರಾರು ಜನರು ಕಿಕ್ಕಿರಿದು ನಿಂತ್ತಿತ್ತು. ಖಡ್ಗದಾರಿಯಾದ ಕುಲಕರ್ಣಿ ಹಗ್ಗವನ್ನು ಕಡಿದಾಗ ಎಲ್ಲರೂ ಕರಿಹರಿಯಿತು ಎಂದು ಹರ್ಷೋದ್ಘಾರಗೈದರು. ಈ ಒಂದು ಜಾತ್ರೆಯಲ್ಲಿ ಎಲ್ಲಾ ಜಾತಿ ಜನಾಂಗದವರು ತಮ್ಮ ತಮ್ಮ ಚಾಜಾ ಮಾಡುತ್ತಾ ದೇವಿಗೆ ಸೇವೆ ಸಲ್ಲಿಸಿದರು.
ಗ್ರಾಮದ ಮುಖಂಡರಾದ ಚನ್ನವೀರಪ್ಪ ಪಾಟೀಲ,ಶಶಿಕಾಂತ ಪಾಟೀಲ, ಡಾ.ಸುರೇಶ ಪಾಟೀಲ, ನೀಲಕಂಠ ಪಾಟೀಲ, ಲಕ್ಷ್ಮಿಕಾಂತ ಕಂದಗೂಳ, ಪ್ರಕಾಶ ಪಾಟೀಲ, ಶರಣಗೌಡ ದಳಪತಿ, ಶರಣಬಸಪ್ಪ ಧನ್ನಾ, ಸುರೇಶ ಮೆಂಗನ್, ಹೆಚ್.ವಾಯ್.ರಡ್ಡೇರ್,ಈರಣ್ಣ ಕಾರ್ಗಿಲ್, ಸೇರಿದಂತೆ ಅನೇಕ ಮುಖಂಡರು ಇದ್ದರು.
ದೂರದ ಆಂದ್ರಪ್ರದೇಶ, ಗುಜರಾತ, ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಶಹಾಬಾದ, ವಾಡಿ,ರಾವೂರ, ಮುತ್ತಗಿ, ಶಂಕರವಾಡಿ, ಭಂಕೂರ ವಾಡಾ, ತರಿತಾಂಡಾ, ತೆಗನೂರ ಮುಗುಳನಾಗಾಂವ, ನಂದೂರ , ಅಲ್ದಿಹಾಳ, ಪೇಠಸಿರೂರ, ಗೋಳಾ,ಮಾಲಗತ್ತಿ ಮುಂತಾದ ಗ್ರಾಮದ ಸಮಸ್ತ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ನಿಮಿತ್ಯ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.