ಕಲಬುರಗಿ: ತ್ಯಾಗ, ಸಮಾನತೆಯ ಸಂಕೇತವೇ ಬಕ್ರೀದ್ ಆಗಿದೆ ಎಂದು ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ನಗರದ ಕರುಣೇಶ್ವರ ನಗರದಲ್ಲಿರುವ ವಿಶ್ವನಾಥ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಬಕ್ರೀದ್ ಹಬ್ಬದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾದಿ ಇಬ್ರಾಹಿಂ ಹಾಗೂ ಅವರ ಪುತ್ರ ಇಸ್ಮಾಯಿಲರ ದೇವರ ನಿಷ್ಠೆ ಸ್ಮರಣೀಯವಾಗಿದೆ. ಇಬ್ರಾಹಿಂ ತನ್ನ ಪುತ್ರನನ್ನು ದೇವರ ಅರ್ಪಿಸುವ ಬದಲಾಗಿ ಕುರಿಯನ್ನು ಬಲಿಕೊಡಲಾಗುತ್ತದೆ. ಇದರ ನಿಮಿತ್ತ್ಯ ಬಕ್ರೀದ್ ಆಚರಿಸಲಾಗುತ್ತದೆ.
ಬಕ್ರೀದ್ ಮುಸ್ಲಿಂ ಧರ್ಮೀಯರ ಎರಡನೇ ಅತಿದೊಡ್ಡ ಪವಿತ್ರ ಹಬ್ಬ. ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಪ್ರವಾದಿ ಇಬ್ರಾಹಿಂ ಅವರ ಈ ಭಕ್ತಿ ಮತ್ತು ತ್ಯಾಗದ ನೆನೆಪಿಗಾಗಿ ವಿಶ್ವದಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲರನ್ನೇ ದೇವನಿಗೆ ಬಲಿ ಅರ್ಪಿಸಲು ಮುಂದಾಗುವ ರೋಚಕ ಘಟನೆಯೇ ಬಲಿದಾನ ಅಥವಾ ಕುರ್ಬಾನಿಯ ಹಿಂದಿರುವ ಇತಿಹಾಸ, ಸುದೀರ್ಘ ಕಾಲದ ಬಳಿಕ ಜನಿಸಿದ ಮಗ ಇಸ್ಮಾಯಿಲ ಜೊತೆ ಸಂತೋಷಭರಿತ ಜೀವನವನ್ನು ನಡೆಸುತ್ತಿರುವ ಇಬ್ರಾಹಿಂರಿಗೆ ಒಂದಿನ ವಿಶೇಷ ಕನಸು. ಮಗನನ್ನೇ ಬಲಿ ಅರ್ಪಿಸುವ ಕನಸೊಂದನ್ನು ಕಾಣುವ ಇಬ್ರಾಹಿಂರು ಅದನ್ನು ಪುತ್ರ ಇಸ್ಮಾಯಿಲರಿಗೂ ತಿಳಿಸುತ್ತಾರೆ. ಪರಸ್ಪರ ಒಪ್ಪಿಗೆಯೊಂದಿಗೆ ಸ್ವಂತ ಪುತ್ರನನ್ನೇ ಬಲಿ ಅರ್ಪಿಸಲು ಪ್ರವಾದಿ ಇಬ್ರಾಹಿಂ ತಯಾರಾಗುತ್ತಾರೆ.
ದೇವನ ಆದೇಶ ಅಲ್ಲದಿದ್ದರೂ ಕನಸಿನಲ್ಲಿ ಕಂಡದ್ದೂ ದೇವನ ಆದೇಶ ಎಂದುಕೊಂಡು ಅದರ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಆದರೆ ಅಲ್ಲಾಹನಿಗೆ ಬೇಕಿದ್ದದ್ದೂ ಪ್ರವಾದಿ ಇಬ್ರಾಹಿಂರ ದೇವನಿಷ್ಠೆ ಮಾತ್ರವಾಗಿತ್ತು. ಅದಕ್ಕಾಗಿಯೇ ಆಡೊಂದನ್ನು ಇಬ್ರಾಹಿಂರಿಗೆ ನೀಡುವ ಅಲ್ಲಾಹನು, ಅದನ್ನೇ ಬಲಿ ಅರ್ಪಿಸಲು ಆದೇಶಿಸುತ್ತಾನೆ. ಈ ಕುರಿತು ಖುರಾನ್ ಹೇಳುವುದು ನೋಡಿ, ‘ನಿಶ್ಚಯವಾಗಿಯೂ ಅದೊಂದು ಪ್ರತ್ಯಕ್ಷ ಪರೀಕ್ಷೇಯಾಗಿತ್ತು. ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು. ಆ ಘಟನೆಯ ನೆನಪನ್ನು ಮುಂದಿನ ಜನಾಂಗದಲ್ಲೂ ಉಳಿಸಿದೆವು. ಇಂದು ಬಕ್ರೀದ್ ಸಂದರ್ಭ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯೂ ಇಬ್ರಾಹಿಂ ಮತ್ತವರ ಪುತ್ರನ ತ್ಯಾಗದ ಸಂದೇಶವನ್ನಷ್ಟೇ ಸಾರುತ್ತದೆ.
ಅವುಗಳ ‘ಮಾಂಸವಾಗಲಿ ರಕ್ತವಾಗಲೀ ಅಲ್ಲಾಹನಿಗೆ ತಲುಪಿಸುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು ಧರ್ಮನಿಷ್ಟೇ ಮಾತ್ರ’ ಎಂದು ಖುರಾನ್ ಸ್ಪಷ್ಟವಾಗಿ ಮಾನವನ ದೇವನಿಷ್ಟೇಯನ್ನೇ ಹೇಳುತ್ತದೆ. ಇದನ್ನೇ ಅನುಸರಿಸಿ ತ್ಯಾಗದ ಸಂಕೇತವಾಗಿ ಮುಸ್ಲಿಮರು ಬಕ್ರೀದ್ ದಿನ ಪ್ರಾಣಿಬಲಿ ನೀಡುತ್ತಾರೆ. ಬಲಿ ನೀಡಲಾದ ಪ್ರಾಣಿಯ ಮಾಂಸವನ್ನು ಮೂರು ಪಾಲುಗಳಾಗಿಸಿ, ಒಂದನ್ನು, ಬಲಿಕೊಟ್ಟವರ ಕುಟುಂಬದವರಿಗೆ, ಇನ್ನೊಂದು ಬಂಧು ಮಿತ್ರರಿಗೆ ಮತ್ತು ಮೂರನೇಯದನ್ನು ಬಡವರಿಗೆ ಹಂಚಲಾಗುತ್ತದೆ.
ಹಬ್ಬ ಉಳ್ಳವರ ಮನೆಯ ಸಂಭ್ರಮ ಮಾತ್ರವಾಗದೆ, ಬಡವನ ಮನೆಯ ಒಲೆಯೂ ಉರಿಯಬೇಕೆಂಬುದೇ ಇದರ ಉದ್ದೇಶ. ಹಂಚಿ ತಿನ್ನಬೇಕೆಂಬ ಪಾಠ ಇಲ್ಲಿ ಮತ್ತೆ ಅನಾವರಣಗೊಳ್ಳುತ್ತದೆ ಎಂದು ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ಈ ಸಂದರ್ಭದಲ್ಲಿ ಮೆಹಬೂಬ್, ಮಹಮ್ಮದ್ ರಫಿ, ಸಲೀಂ ವಿದ್ಯಾರ್ಥಿಗಳು ಸೇರಿ ಮುಂತಾದವರು ಹಾಜರಿದ್ದರು.