ಕಲಬುರಗಿ: ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಅವರು ಶುಕ್ರವಾರ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮೂರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದಲ್ಲದೆ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮಕ್ಕಳಿಗೆ ನೀಡಲಾಗುತ್ತಿರುವ ಊಟವನ್ನು ಖುದ್ದಾಗಿ ಪರಿಶೀಲಿಸಿದರು.
ನಂತರ ವಾರ್ಡನ್ ಅವರನ್ನು ಕರೆದು ಮಾತನಾಡಿದ ಸಿ.ಇ.ಓ ಅವರು, ಊಟದಲ್ಲಿ ಇನ್ನು ಗುಣಮಟ್ಟವಿರಬೇಕು. ಅಡುಗೆ ಕೋಣೆ, ಊಟ ಬಡಿಸುವ ಕೋಣೆಯಲ್ಲಿ ಶುಚಿತ್ವ ಕಾಪಾಡಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ವೇಳೆಯಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ಥ್ರ ಹಾಗೂ ರಸಾಯನ ಶಾಸ್ಥ್ರ ವಿಷಯ ಬೋಧಕರ ಹುದ್ದೆ ಖಾಲಿ ಇದ್ದು, ಇದರಿಂದ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಸಿ.ಇ.ಓ ಗಮನಕ್ಕೆ ತಂದರು. ಕೂಡಲೆ ಅತಿಥಿ ಬೋಧಕರನ್ನು ನೇಮಕ ಮಾಡಲು ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗೆ ಭಂವಾರ್ ಸಿಂಗ್ ಮೀನಾ ಸೂಚಿಸಿದರು.
ಇನ್ನು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಿ.ಇ.ಓ, ಆಸ್ಪತ್ರೆಯ ಒಳ-ಹೊರ ರೋಗಿಗಳ ಸಂಖ್ಯೆ, ಶಸ್ತ್ರಚಿಕಿಸ್ಥೆ, ಹೆರಿಗೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಇಲ್ಲ. ಆಸ್ಪತ್ರೆಯು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ತುರ್ತು ಚಿಕಿತ್ಸಾ ಘಟಕ ಮಂಜೂರು ಮಾಡಲು ಮತ್ತು 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಗಮನಕ್ಕೆ ತಂದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಸಿ.ಇ.ಓ ತಿಳಿಸಿದರು.
ಇನ್ನು ಚಿತ್ತಾಪೂರ ತಾಲೂಕಿನ ದಂಡೋತಿ ಗ್ರಾಮದ ಅಲ್ಪಸಂಖ್ಯಾತ ಇಲಾಖೆಯ ಮೂರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು, ಅಲ್ಲಿಯೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು. ಎರಡು ವರ್ಷಗಳಿಂದ ಬೆಡ್‌ಶೀಟ್ ಸಬರಾಜಾಗಿಲ್ಲ, ಆಟದ ಮೈದಾನ ಇಲ್ಲ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಚಿತ್ತಾಪೂರಿನಲ್ಲಿ ಪ್ರಗತಿ ಪರಿಶಿಲನಾ ಸಭೆ: ಇದಕ್ಕೂ ಮುನ್ನ ಭಂವಾರ್ ಸಿಂಗ್ ಮೀನಾ ಅವರು ಚಿತ್ತಾಪೂರ ತಾಲೂಕ್ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನರೇಗಾ ಪ್ರಗತಿ ಪರಶೀಲನಾ ಸಭೆ ನಡೆಸಿ, ನಿಗದಿತ ಗುರಿಯಂತೆ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಸಭೆಗೆ ಗೈರಾದ ಇಬ್ಬರು ಪಿ.ಡಿ.ಓ ಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ನರೇಗಾ ಸಹಾಯಕ ನಿರ್ದೇಶಕ ಪಂಡಿತ್ ಸಿಂಧೆ ಹಾಗೂ ತಾಲೂಕಿನ ಪಿ.ಡಿ.ಓ. ಗಳು ಉಪಸ್ಥಿತರಿದ್ದರು.