ಜೇವರ್ಗಿ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆ ಸೇರಿದಂತೆ ತಾಲೂಕಿನ ಹಲವಡೆ ಸಾಕಷ್ಟು ಅವಾಂತರ ಸೃಷ್ಟಿಸಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಮಾಡಿದೆ.
ಜೇವರ್ಗಿ ತಾಲೂಕಿನ ಕುರನಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಆಗಲೋ, ಈಗಲೋ ಎನ್ನುವಂತಾಗಿದೆ. ಶಾಲೆಯೂ ಹಳೆ ಕಟ್ಟಡ ಹೊಂದಿದ್ದು, ನಿರಂತರ ಮಳೆಯಿಂದ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ. ಮಕ್ಕಳು ಜೀವ ಭಯದಲ್ಲೇ ಅಭ್ಯಾಸ ಮಾಡುವ ಪರಿಸ್ಥಿತಿ ಉಂಟಾಗಿದೆ.
ಪ್ರತಿದಿನ ಶಾಲೆಯ ಮೇಲ್ಛಾವಣಿ ಹಂತ ಹಂತವಾಗಿ ಉದರಿ ಬೀಳುತ್ತಿದ್ದು, ಈಗಾಗಲೇ ಮೇಲ್ಚಾವಣಿಯಲ್ಲಿನ ಸಿಮೆಂಟ್ ಪದರದ ಭಾಗ ಮಕ್ಕಳ ತಲೆಯ ಮೇಲೆ ಬಿದ್ದು ತೆಲೆಯ ತೂತು ಬಿದ್ದಿರುವ ವರದಿಯಾಗಿವೆ.
ಮಳೆ ಬಂದರೆ ಸಾಕು ಶಾಲೆಯ ಆವರಣದಲ್ಲಿ ನೀರು ತುಂಬಿಕೊಳ್ಳುತ್ತದೆ. ಅಲ್ಲದೇ, ತರಗತಿ ಕೋಣೆಗಳಲ್ಲಿ ಪಾದ ಮುಗುಳುವಸಷ್ಟು ನೀರು ನಿಲ್ಲುತ್ತದೆ. ಶಾಲೆಯ ಸುತ್ತಮುತ್ತ ಸ್ವಚ್ಛತೆ ಇಲ್ಲದೇ ತುಂಬಾ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಹುಳ ಹುಪ್ಪಟೆಯ ಭಯದಲ್ಲೇ ನಿತ್ಯವೂ ಮಕ್ಕಳು ಶಾಲೆ ತೆರಳುತ್ತಿದ್ದಾರೆ ಎಂದು ಪಾಲಕರ ಆರೋಪವಾಗಿದೆ.