ಎರಡು ಗಂಟೆಯಿಂದ ಚಲಿಸದ ರೈಲು: ಪ್ರಯಾಣಿಕರ ಆಕ್ರೋಶ

0
250

ವಾಡಿ: ರೈಲು ನಿಲ್ದಾಣದಲ್ಲಿ ನಿಲ್ಲಿಸಲಾದ ರೈಲು, ಈಗ ಹೊರಡುತ್ತೋ ಆಗ ಹೊರಡುತ್ತೋ ಎಂದು ಕಾದು ಕುಳಿತಿದ್ದ ಪ್ರಯಾಣಿಕರು ಬೇಸತ್ತು ಹೋಗಿದ್ದರು. ಎರಡು ಗಂಟೆ ಕಳೆದರೂ ರೈಲು ಹೊರಡದ ಪ್ರಸಂಗ ಕಂಡು ಕುಪಿತರಾದ ಪ್ರಯಾಣಿಕರು ರೈಲು ಚಾಲಕನ ಜೊತೆ ವಾಗ್ವಾದ ನಡೆಸಿದ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

ವಾಡಿ ರೈಲು ನಿಲ್ದಾಣದಿಂದ ಶುಕ್ರವಾರ 9.45 ಕ್ಕೆ ಹೊರಡಬೇಕಿದ್ದ ರಾಯಚೂರು ವಿಜಯಪುರ ಪ್ಯಾಸೆಂಜರ್ ರೈಲು, ತನ್ನ ನಿಗದಿತ ಸಮಯಕ್ಕೆ ವಾಡಿ ನಿಲ್ದಾಣ ತಲುಪಿತ್ತಾದರೂ ಎರಡು ತಾಸು ಸಮಯ ಕಳೆದರೂ ರೈಲು ವಾಡಿ ನಿಲ್ದಾಣದಿಂದ ಹೊರಡಲಿಲ್ಲ. ಕಲಬುರಗಿ, ವಿಜಯಪುರ, ಸೊಲ್ಲಾಪುರ, ಹೀಗೆ ವಿವಿದೆಡೆ ಆಸ್ಪತ್ರೆ, ಮದುವೆ, ಊರು ಕೇರಿಗಳತ್ತ ತೆರಳಬೇಕಿದ್ದ ಪ್ರಯಾಣಿಕರು, ರೈಲು ಭೋಗಿಯಲ್ಲಿ ಕುಳಿತು ಸುಸ್ತಾದರು. ರೈಲು ಹೊರಡುವ ಲಕ್ಷಣ ಮಾತ್ರ ಕಂಡು ಬರಲಿಲ್ಲ. ಆಕ್ರೋಶಗೊಂಡ ಕೆಲ ಜಾಗೃತ ಪ್ರಯಾಣಿಕರು, ಸಂಘಟಿತರಾಗುವ ಮೂಲಕ ರೈಲು ಚಾಲಕನ ಜೊತೆ ತೀವ್ರ ವಾಗ್ವಾವಾದ ನಡೆಸಿದರು. ಮಾತಿನ ಜಟಾಪಟಿ ನಡೆಯಿತು. ರೈಲು ಹೊರಡುತ್ತೋ ಇಲ್ವೋ ಸ್ಪಷ್ಟಪಡಿಸಿ ಎಂದು ತರಾಟೆಗೆ ತೆಗೆದುಕೊಂಡರು.

Contact Your\'s Advertisement; 9902492681

ತುರ್ತು ಕೆಲಸಗಳಿಗಾಗಿ ದೂರದ ಊರುಗಳಿಗೆ ಹೋಗಬೇಕಿದೆ. ರೈಲು ಹೊರಡುವ ಸಮಯ ಎರಡು ತಾಸು ಕಳೆದಿದೆ. ಆದರೂ ರೈಲು ಹೊರಡುತ್ತಿಲ್ಲ. ಏನಾಗಿದೆ ಎಂಬುದು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿಲ್ಲ. ರೈಲು ಹೊರಡುವುದಿಲ್ಲ ಎಂದರೆ ಬೇರೆ ಮಾರ್ಗ ಅನುಸರಿಸುತ್ತೇವೆ. ರೈಲು ವಿಳಂಬಕ್ಕೆ ಕಾರಣ ಹೇಳದೆ ರೈಲ್ವೆ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಸರಿಯಲ್ಲ . ಪ್ರಯಾಣಿಕರ ಸಂಕಷ್ಟಗಳು ನಿಮಗೇನು ಗೊತ್ತು ಎಂದು ಸಹಪ್ರಾಣಿಕರು ಒಕ್ಕೊರಲಿನಿಂದ ಆಕ್ರೋಶ ಹೊರ ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈಲು ಚಾಲಕ, ಈ ಕುರಿತು ನಾನು ಉತ್ತರ ನೀಡುವುದಿಲ್ಲ. ಇದು ನನಗೆ ಸಂಬಂಧಿಸಿದ್ದಲ್ಲ. ಕೆಂಪು ದೀಪ ತೆಗೆದು ಹಸಿರು ಹಳದಿ ಬೆಳಗಿದರೆ ನಾನು ಹೊರಡುತ್ತೇನೆ. ನೀವು ನನ್ನ ಜೊತೆ ವಾಗ್ವಾದ ಮಾಡುವ ಬದಲು ರೈಲ್ವೆ ಸ್ಟೇಷನ್ ಮ್ಯಾನೇಜರ್ ಜೊತೆ ಮಾತನಾಡಿ ಎಂದು ಪ್ರತಿಕ್ರಿಯಿಸಿದರು. ಇದಕ್ಕೂ ಜಗ್ಗದ ಪ್ರಯಾಣಿಕರು ತೀವ್ರ ಕೆಂಡಕಾರಿದರು.

ಪ್ರಯಾಣಿಕರ ಆಕ್ರೋಶ ಅರಿತ ರೈಲ್ವೆ ಅಧಿಕಾರಿಗಳು ತಕ್ಷಣ ಹಳದಿ ಸಿಗ್ನಲ್ ಕೊಟ್ಟು ರೈಲು ಹೊರಡಲು ಅನುಕೂಲ ಮಾಡಿಕೊಟ್ಟರು. ಬರಬರುತ್ತಾ ರೈಲ್ವೆ ಇಲಾಖೆ ಪ್ಯಾಸೆಂಜರ್ ರೈಲುಗಳ ಸಮಯವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಗೊಣಗುತ್ತಲೆ ರೈಲು ಹತ್ತಿದರು.

ಟಿಕೆಟ್ ಪಡೆದರೂ ಪ್ಯಾಸೆಂಜರ್ ರೈಲುಗಳು ನಿಗದಿತ ಸಮಯಕ್ಕೆ ಹೊರಡದೆ ಪ್ರಯಾಣಿಕರ ಸಮಯ ಹಾಳು ಮಾಡುತ್ತಿವೆ. ರೈಲ್ವೆ ಇಲಾಖೆ ಇತ್ತೀಚೆಗೆ ಪ್ಯಾಸೆಂಜರ್ ರೈಲು ಪ್ರಯಾಣಿಕರನ್ನು ಕೀಳಾಗಿ ಕಾಣಲು ಶುರುಮಾಡಿದೆ. ಇಲಾಖೆಗೆ ಬಿಸಿ ಮುಟ್ಟಿಸುವ ಹೋರಾಟಗಳ ಅಗತ್ಯವಿದೆ ಎಂದು ಬಡ ಪ್ರಯಾಣಿಕರು ಸಿಟ್ಟು ಪ್ರದರ್ಶಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here