ಸಿಎಂ ಸಿದ್ದರಾಮಯ್ಯ ಒಬಿಸಿ ವಿರೋಧಿ; ಬಿಜೆಪಿ ಒಬಿಸಿ ಮೋರ್ಚಾ ಆರೋಪ

0
27

ಕಲಬುರಗಿ: ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತರ (ಅಹಿಂದ) ಶ್ರೇಯೋಭಿಲಾಷಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ಅಹಿಂದ ವಿರೋಧಿ ಎಂದು ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಮುಖಂಡರು ಗಂಭೀರ ಆರೋಪ ಮಾಡಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ತಳವಾರ, ಶೋಭಾ ಬಾಣಿ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ಸಂಯುಕ್ತ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಹಿಂದುಳಿದ ವರ್ಗಗಳ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ 12 ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ. ಮತ್ತೊಂದೆಡೆ, ಅಗ್ಗದ ಭಾಗ್ಯಗಳನ್ನು ಜಾರಿಗೆ ತಂದು ರಾಜ್ಯದ ಪ್ರಗತಿಗೆ ಮಾರಕವಾಗಿದ್ದಾರೆ ಎಂದು ಟೀಕಿಸಿದರು.

Contact Your\'s Advertisement; 9902492681

ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ದೇವರಾಜ ಅರಸು ಪ್ರಶಸ್ತಿ ನೀಡುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುವ ಸುಧಾರಕರಿಗೆ ರೂ. 50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿತ್ತು. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ಮಟ್ಟದಲ್ಲಿ ಅರಸು ಪ್ರಶಸ್ತಿ ನೀಡುವುದನ್ನು ತಡೆ ಹಿಡಿದಿದ್ದಾರೆ. ಸ್ವತಃ ತಾವು ಮೈಸೂರಿನವರೇ ಆಗಿದ್ದಾಗ್ಯೂ, ಅದೇ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಹೆಸರಿನಲ್ಲಿ ಜಿಲ್ಲಾ ಮಟ್ಟದ ಅರಸು ಪ್ರಶಸ್ತಿ ನೀಡದಿರಲು ನಿರ್ಧರಿಸಿರುವುದು ಮುಖ್ಯಮಂತ್ರಿಗಳ ಮನಸ್ಥಿತಿ ಅನಾವರಣಗೊಳಿಸುವಂತಿದೆ ಎಂದರು.

ಅರಸು ಮಾದರಿಯಲ್ಲೇ ಅಧಿಕಾರ ನಡೆಸುವುದಾಗಿ ವಾಗ್ದಾನ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ರೈತರು ಮತ್ತು ನೇಕಾರರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಯೋಜನೆ ಕೈಬಿಟ್ಟಿದ್ದಾರೆ. ಇನ್ನೊಂದೆಡೆ, ಹಿಂದುಳಿದ ಅಸಂಘಟಿತ ಸಮುದಾಯಗಳ ಪ್ರಗತಿಗಾಗಿ ಶ್ರಮಿಸದೆ ಈ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಸಾಕಷ್ಟು ಅವಕಾಶ ಕಲ್ಪಿಸಿದ್ದರು. ಆದರೆ, ಹಾಲಿ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಈ ಸಮುದಾಯಗಳಿಗೆ ಬಹಿರಂಗವಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಒಂದುವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಹಿತಾಸಕ್ತಿ ಕಡೆಗಣಿಸುವ ತಮ್ಮ ಮನೋಭಾವ ಬದಲಿಸಿಕೊಳ್ಳದೆ ಹೋದರೆ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಧರ್ಮಣ್ಣ ದೊಡ್ಡಮನಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮಿಗನೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಮೃತ ಡಿಗ್ಗಿ, ಮೋರ್ಚಾ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೀರಣ್ಣ ಪೂಜಾರಿ, ಬಿಜೆಪಿ ಮುಖಂಡ ವಿದ್ಯಾಧರ ಕೆ.ಮಂಗಳೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here