ಯಾದಗಿರಿ: ಜಾನಪದ ಕಲೆ, ಪರಂಪರೆ, ಸಾಹಿತ್ಯ ಸಂಸ್ಕೃತಿ ಮೌಖಿಕ ಪರಂಪರೆಯ ಮೂಲ ಸ್ವರೂಪದಿಂದ ಬಂದಿದ್ದು, ಇದು ಮೌಖಿಕ ಪರಂಪರೆಯ ತವನಿಧಿಯಾಗಿದೆ ಎಂದು ಜಾನಪದ ಸಾಹಿತಿ ನರಸಪ್ಪ ಚಿನ್ನಾಕಟ್ಟಿ ಹೇಳಿದರು.
ನಗರದ ಸರ್ವಜ್ಞ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವಜಾನಪ ದಿನಾಚರಣೆ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಯ ಹಾಡುಗಳು, ಸಂಪ್ರದಾಯದ ಪದಗಳು ಕೃಷಿ ಗೀತೆಗಳು, ಗ್ರಾಮೀಣ ಗೀತೆಗೆಳು ಇಂದು ಬಳಕೆ ಕಡಿಮೆಯಾಗಿ ಅಳಿವಿನ ಅಂಚಿನಲ್ಲಿವೆ. ಜಾಗತೀಕರಣ ಬೆಳೆದು ಜಾನಪದಕ್ಕೆ ಧಕ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾರಣ ಜಾನಪದ ತಜ್ಞರು ವಿದ್ವಾಂಸರು ಜಾನಪದಕ್ಕೆ ಜಾಗತೀಕರಣದ ಸ್ವರ್ಶ ನೀಡಬೇಕಾಗಿದೆ. ಜೊತೆಗೆ ಅನೇಕ ಹಳ್ಳಿಯ ಹಾಡುಗಳನ್ನು ಮೂಲಗೀತೆಗಳನ್ನು ದಾಖಲಿಕರಣಗೊಳಿಸುವುದರ ಜೊತೆಗೆ ಮುಂದಿನ ಪಿಳೀಗೆಗೆ ಪರಿಚಯಿಸಬೇಕಾಗಿದೆ ಎಂದು ಹೇಳಿದರು.
ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ, ಇಂದಿನ ಯುವ ಜನ ಮತ್ತು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು, ಜೊತೆಗೆ ಜಾನಪದ ಕಲೆ ಮತ್ತು ಕ್ರೀಡೆ ಉಳಿಯುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೆಕಾರ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರ, ಸಾಹಿತಿ ಗುರು ಪ್ರಸಾದ ವೈದ್ಯ, ಕಾಲೇಜಿನ ಪ್ರಾಚಾರ್ಯರಾದ ಗಂಗಾಧರ ಬಡಿಗೇರ್ ಮಾತನಾಡಿದರು. ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಸಮಾರಂಭದ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ.ಚೆನ್ನಾರಡ್ಡಿ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಶ್ರೀಶೈಲ ಹಿರೇಮಠ ನಿರೂಪಿಸಿದರು. ಸಿದ್ರಾಮಪ್ಪ ನಿರಡಗಿ ಸ್ವಾಗತಿಸಿ, ವಂದಿಸಿದರು.