ಆಳಂದ; ಅಪಾರ ಶಿಷ್ಯ ಬಳಗವನ್ನು ಹೊಂದಿರುವ ಬಹುಮುಖ ಪ್ರತಿಭೆಯ ಆದರ್ಶ ಶಿಕ್ಷಕ ಅಪಾಸಾಹೇಬ ಬಿ. ತೀರ್ಥ ಅವರು ಜಿಲ್ಲಾಮ ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಜನಿಸಿದ ಇವರು ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, 8 ನೇ ಕಲಬುರಗಿಯ ಎಂಪಿಎಚ್ ಎಸ್ ಶಾಲೆಯಲ್ಲಿ ಕಲಿತು, ಭೂಸನೂರ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ9,10 ತರಗತಿ ಅಭ್ಯಾಸ ಮಾಡಿದ್ದಾರೆ. ಆಳಂದ ಸರಕಾರಿ ಪಪೂ ಕಾಲೇಜಿನಲ್ಲಿ ಪಿಯುಸಿ ಉತ್ತೀರ್ಣರಾಗಿ, ಎ.ವಿ.ಪಾಟೀಲ್ ಡಿಗ್ರಿ ಕಾಲೇಜಿನಲ್ಲಿ ಪದವಿ ಪಡೆದು, ಬಳಿಕ ಕಲಬುರಗಿಯ ಆಶಾ ಜ್ಯೋತಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ತಂದೆಯವರಂತೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿ ಕೊ೦ಡವರು.
ಆಳಂದ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಮತಾ ಲೋಕ ಶಿಕ್ಷಣ ಸಮಿತಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1990ರಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ನಿಸ್ಸಿಮರಾದರು. ಬಡ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಸಮವಸ್ತ್ರ ಶಾಲಾ ಬ್ಯಾಗು ಇತರೆ ಲೇಖನಿ ಸಾಮಾಗ್ರಿಗಳ ನೀಡುವ ಮೂಲಕ ವಿದ್ಯಾರ್ಥಿಗಳ ಬಾಳು ಬೆಳಗಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ.
ಶಿಕ್ಷಣ ಪಾಠದ ಜತೆಗೆ ಕ್ರೀಡೆ, ಭಾರತ ಸೇವಾದಳ, ಭಾರತ ಸೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿಗಳಾಗಿ ಮಕ್ಕಳಿಗೂ ತರಬೇತಿ ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಸಂಘ ಸಂಸ್ಥೆಗಳು 2 ಬಾರಿ ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರಿನಲ್ಲಿ 3 ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿವೆ. ಮಠಗಳು, ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಕಡೆಗಳಲ್ಲಿಯೂ ಸನ್ಮಾನ ಪ್ರಶಸ್ತಿಗಳು ಮುಡಿಗೇರಿವೆ. ಶಿಕ್ಷಣ ಇಲಾಖೆಯು 10 ವರ್ಷಗಳ ಹಿಂದೆ ಇವರನ್ನು ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಣ ಇಲಾಖೆಯು ನೀಡುವ 2023 ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತೀರ್ಥ ಅವರನ್ನು ಆಯ್ಕೆ ಮಾಡಿರುವದಕ್ಕೆ ಅಭಿಮಾನಿ ಹಾಗೂ ಶಿಷ್ಯ ಬಳಗದಲ್ಲಿ ಖುಷಿ ಇಮ್ಮಡಿ ಮಾಡಿದೆ.
ಕಳೆದ 33 ವರ್ಷಗಳಿಂದಲೂ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಸರಳ ಸಜ್ಜನಿಕಿಯ ಕ್ರಿಯಾಶೀಲ ಶಿಕ್ಷಕರಿಗೆ ದೊರೆತ ಈ ಪ್ರಶಸ್ತಿ ಇವರ ಜವಾಬ್ದಾರಿ ಹೆಚ್ಚಿಸಿದೆ. ತಂದೆ ದಿ. ಬಸವಂತರಾಯ ಶಿಕ್ಷಕರಾಗಿರುವದರಿಂದ ಅವರ ಹೆಸರು, ಕೀರ್ತಿ ತಂದೆಗೆ ತಕ್ಕ ಮಗನಾಗಿ ಜನಮಾನಸದಲ್ಲಿ ಉಳಿದಿರುವುದು ಹೆಮ್ಮೆಯ ಸಂಗತಿಯಾಗಿದೆ.