ಕಲಬುರಗಿ: 1948ರ ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು ಐತಿಹಾಸಿಕ ದಿನ. ಕಲ್ಯಾಣ ಕರ್ನಾಟಕವು ದೌರ್ಜನ್ಯಕಾರ ರಜಾಕಾರರ ಕಪಿಮುಷ್ಟಿಯಿಂದ ಬಿಡುಗಡೆಯಾದ ಅಮೃತ ಸಮಯ. ಯಾವಾಗ ದೇಶಕ್ಕೆ, ಧರ್ಮಕ್ಕೆ ಗ್ಲಾನಿ ಬಂದ ಸಂದರ್ಭದಲ್ಲಿ ಅನೇಕ ವಿಭೂತಿಪುರುಷರು ಈ ನಾಡಿನಲ್ಲಿ ಜನ್ಮ ತಳೆದರು. ಹಾಗೆಯೇ ಸ್ವಾಮಿ ರಮಾನಂದ ತೀರ್ಥರು ಹಿಂದುಗಳ ಮೇಲೆ ಆಗುತ್ತಿದ್ದ ಘೋರ ದೌರ್ಜನ್ಯ, ಕೊಲೆ ಹಾಗೂ ಹೆಣ್ಣುಮಕ್ಕಳ ಮೇಲಿನ ವ್ಯಾಪಕ ಅತ್ಯಾಚಾರಗಳನ್ನು ಕೊನೆಗಾಣಿಸಬೇಕೆಂದು ತೀರ್ಮಾನ ಮಾಡಿ ಗೌಪ್ಯವಾಗಿ ಅಂದಿನ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಭೇಟಿ ಮಾಡಿದ್ದಾರೆ ಎಂದು ರಾಜ್ಯ ವೈದ್ಯಕೀಯ ಪ್ರಕೋಷ್ಠ ವಕ್ತಾರರು ಡಾ. ಸುಧಾ ಆರ್ ಹಾಲಕಾಯಿ ಹೇಳಿದರು.
ರಜಾಕರ ಹಾಗೂ ನಿಜಾಮರ ದುರಾಕ್ರಮಣದ ಪೂರ್ಣ ವಿವರವನ್ನು ಅಂದಿನ ಗೃಹ ಮಂತ್ರಿ, ಉಕ್ಕಿನ ಮನುಷ್ಯ ಎಂದು ಬಿರುದಾಂಕಿತ ಸರ್ದಾರ್ ಪಟೇಲರಿಗೆ ನೀಡಿದರು. ಇದರ ಬಳಿಕ ನಡೆದ ಗೌಪ್ಯ ಕಾರ್ಯಾಚರಣೆ ‘ಆಪರೇಷನ್ ಪೆÇೀಲೊ’ ನಡೆಯಿತು. ಅಲ್ಲದೆ, ಕಲ್ಯಾಣ ಕರ್ನಾಟಕದ ಸಂಪೂರ್ಣ ಬಿಡುಗಡೆಯ ಕಾರ್ಯವನ್ನು ಮಾಡಿದ್ದು ಒಂದು ಹೆಗ್ಗಳಿಕೆಯೇ ಸರಿ. ಒಬ್ಬ ದೂರದೃಷ್ಟಿಯ ವ್ಯಕ್ತಿ, ಮುತ್ಸದ್ಧಿಯ ಕೈಯಲ್ಲಿ ರಾಷ್ಟ್ರದ ಚುಕ್ಕಾಣಿ ಇದ್ದರೆ ಏನೆಲ್ಲ ಆಗಲು ಸಾಧ್ಯ; ಅಖಂಡವಾಗಿ ರಾಷ್ಟ್ರ ನಿರ್ಮಾಣ ಆಗಲು ಸಾಧ್ಯ ಎಂಬುದಕ್ಕೆ ನೈಜ ಉದಾಹರಣೆ ಸರ್ದಾರ್ ಪಟೇಲ್ ಅವರ ಮೂಲಕ ಹೈದರಾಬಾದ್ ಕರ್ನಾಟಕದ ವಿಮೋಚನೆ ಕಾರ್ಯ ನಮ್ಮ ಮುಂದಿದೆ.
ಒಮ್ಮೊಮ್ಮೆ ಕಾಲದ, ಇತಿಹಾಸದ ಅಧ್ಯಯನ ಮಾಡಿದ ಸಂದರ್ಭದಲ್ಲಿ ಪುನಃ ಪುನಃ ನಮ್ಮ ಸಮಾಜದ ಮೇಲೆ, ಈ ದೇಶದ ಮೇಲೆ ತಥಾಕಥಿತ ವ್ಯಕ್ತಿಗಳು ಆಕ್ರಮಿಸಿ ಈ ಸಮಾಜವನ್ನು ಗ್ಲಾನಿ ಮಾಡುವ ಕೆಲಸ ಮಾಡಿದ್ದು ಸ್ಪಷ್ಟವಾಗುತ್ತದೆ. ತುಷ್ಟೀಕರಣ ದೃಷ್ಟಿಯಿಂದ ನೋಡದೆ, ಮತಬ್ಯಾಂಕ್ ರಾಜಕೀಯಕ್ಕೆ ಅಂಟಿಕೊಳ್ಳದೆ ನೈಜ ಭಾರತದ ಅಖಂಡತೆಗಾಗಿ ದುಡಿದ ಸರ್ದಾರ್ ಪಟೇಲರ ಮುಖಾಂತರ ಇವತ್ತು ಕಲ್ಯಾಣ ಕರ್ನಾಟಕದ ರೂಪಾಂತರವಾಗಿ ನಿಂತಿರುವುದು ಕಾಣುತ್ತದೆ.
ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡ ಈ ಭಾಗದ ಜಿಲ್ಲೆಗಳನ್ನು ಪ್ರಗತಿದಾಯಕವಾಗಿ ಒಯ್ಯಬೇಕೆಂದು ಅನೇಕ ಕಾರ್ಯಕ್ರಮಗಳನ್ನು ಕೂಡ ಸರಕಾರಗಳು ತೆಗೆದುಕೊಂಡಿವೆ. ಮತ್ತಷ್ಟು ತೀವ್ರತೆಯಿಂದ ಆ ಕಾರ್ಯ ಮುಂದುವರೆಯಬೇಕಾಗಿದೆ. ದೇಶದ ಚುಕ್ಕಾಣಿ ಹಿಡಿದ ಒಬ್ಬ ಅದ್ವಿತೀಯ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಭಾರತ ಹೇಗೆ ವಿಕಾಸ ಆಗುತ್ತಿದೆಯೋ ಆ ವಿಕಾಸದ ಹಾದಿಯಲ್ಲಿ ಕಲ್ಯಾಣ ಕರ್ನಾಟಕವೂ ನಡೆಯಬೇಕಾಗಿದೆ.
ಎಲ್ಲ ರಂಗಗಳಲ್ಲಿ ಬೆಳವಣಿಗೆ ಆಗಬೇಕಾಗಿದೆ. ಬಹು ಬೇಡಿಕೆಯ ರೈಲ್ವೆ ಸಂಪರ್ಕ, ಶಿಕ್ಷಣದ ಕ್ರಾಂತಿ ಆಗಬೇಕಿದೆ. ಅಕ್ಷರ- ಅನ್ನ ದಾಸೋಹದ ಮೂಲಕ ಇಲ್ಲಿನ ಗುರು ಪರಂಪರೆಯ ಮಠಗಳು ಅದನ್ನು ಪೆÇೀಷಿಸಿಕೊಂಡು ಬಂದಿವೆ. ಆ ನಿಟ್ಟಿನಲ್ಲಿ ಮತ್ತಷ್ಟು ತೀವ್ರ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನದ ಹೊಸ್ತಿಲಲ್ಲಿ ಕಲ್ಯಾಣ ಕರ್ನಾಟಕದ ಭಾಗ್ಯ ವಿಧಾತ ಬೆಳಕು ಆಗಲೇಬೇಕಿದೆ. ತನ್ಮೂಲಕ ಭಾರತದ ಜೊತೆಗೆ ಕಲ್ಯಾಣ ಕರ್ನಾಟಕದ ಸಂಪೂರ್ಣ ವಿಕಾಸ ಆಗುವುದು ಅವಶ್ಯ. ಆ ದಿಸೆಯಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಸಾಮೂಹಿಕ ಪ್ರಯತ್ನ ಮಾಡೋಣ.