ಕಲಬುರಗಿ; ಇತ್ತೀಚೆಗೆ ದೆಹಲಿಯಲ್ಲಿ ಫಿನ್ಲ್ಯಾಂಡ್, ಆಸ್ಟ್ರೇಲಿಯಾ, ಜರ್ಮನಿ, ಡೆನ್ಮಾರ್ಕ್ ರಾಯಭಾರಿಗಳನ್ನು ಭೇಟಿ ಮಾಡಿ ಕರ್ನಾಟಕ ಮತ್ತು ಆ ದೇಶಗಳ ನಡುವಿನ ಶಿಕ್ಷಣ ಉದ್ಯಮ ತಂತ್ರಜ್ಞಾನ ಮುಂತಾದ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು ಈ ಭೇಟಿಯು ಅತ್ಯಂತ ಫಲಪ್ರದವಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ/ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕ – ಫಿನ್‌ಲ್ಯಾಂಡ್ ಇನ್ನೋವೇಶನ್ ಕಾರಿಡಾರ್ ಅನ್ನು ಬಲಪಡಿಸಿವುದರ ಜೊತೆಗೆ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಸಹಯೋಗದ ಕುರಿತು ಫಿನ್ನಿಷ್ ರಾಯಭಾರಿಗಳಾದ ಕಿಮ್ಮೋ ಲಹ್ದೇವಿರ್ತಾ ಅವರೊಂದಿಗೆ ಚರ್ಚಿಸಲಾಯಿತು.
ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್‌ನಲ್ಲಿ ಆಸ್ಟ್ರೇಲಿಯಾ ಮೌಲ್ಯಯುತ ಪಾಲುದಾರವಾಗಿದೆ. ಕರ್ನಾಟಕ ಸರ್ಕಾರವು ವಿಕ್ಟೋರಿಯಾ ಇಂಡಿಯಾ ಗವರ್ನಮೆಂಟ್ ಎಕ್ಸ್‌ಚೇಂಜ್ ಪ್ರೋಗ್ರಾಂನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದು ಎರಡೂ ರಾಜ್ಯ ಸರ್ಕಾರಗಳಲ್ಲಿನ ಅಧಿಕಾರವರ್ಗ ಮತ್ತು ಸರ್ಕಾರಿ ವ್ಯವಸ್ಥೆಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ಆಸ್ಟ್ರೇಲಿಯಾ ಹೈ ಕಮಿಷನರ್ ಆಗಿರುವ ಫಿಲಿಪ್ ಗ್ರೀನ್ ಅವರೊಂದಿಗಿನ ಭೇಟಿಯ ವೇಳೆ ಸಾಗರ ಜೈವಿಕ ತಂತ್ರಜ್ಞಾನ ಇನ್ನಿತರೆ ವಿಚಾರಗಳ ಕುರಿತು ಚರ್ಚಿಸಲಾಯಿತು.
ಜರ್ಮನಿ ರಾಯಭಾರಿಗಳಾದ ಡಾ. ಫಿಲಿಪ್ ಅಕರ್‌ಮನ್ ಅವರನ್ನು ಭೇಟಿ ಮಾಡಿ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್‌ನ ಭಾಗವಾಗಿ, ಜ್ಞಾನ ವಿನಿಮಯ ಮತ್ತು ಮಾರುಕಟ್ಟೆ ಪ್ರವೇಶಕ್ಕಾಗಿ ಕರ್ನಾಟಕ ಸರ್ಕಾರವು ಬರ್ಲಿನ್ ಮತ್ತು ಡಸೆಲ್ಡಾರ್ಫ್ ನಗರದೊಂದಿಗಿನ ಪ್ರಾದೇಶಿಕ ಪಾಲುದಾರಿಕೆಯ ಕುರಿತು ಚರ್ಚಿಸಲಾಯಿತು.
ಕರ್ನಾಟಕ ಮತ್ತು ಡೆನ್ಮಾರ್ಕ್ ನಡುವೆ ಗ್ರೀನ್ ಟೆಕ್ ವಲಯದಲ್ಲಿನ ಸಹಕಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಅನ್ವೇಶಿಸುವ ಕುರಿತು ಡೆನ್ಮಾರ್ಕ್ ರಾಯಭಾರಿಗಳಾದ ಫ್ರೆಡ್ಡಿ ಸ್ವೇನ್ ಅವರೊಂದಿಗೆ ಚರ್ಚಿಸಲಾಯಿತು.
ನಮ್ಮ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಸಾಧ್ಯವಿರುವ ಎಲ್ಲಾ ವಿದೇಶಿ ಪಾಲುದಾರರೊಂದಿಗೆ ಶಿಕ್ಷಣ, ಉದ್ಯಮ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರ ಮತ್ತು ಪಾಲುದಾರಿಕೆಗೆ ನಿರಂತರವಾಗಿ ಶ್ರಮಿಸಲಿದೆ ಎಂದು ಖರ್ಗೆ ಹೇಳಿದ್ದಾರೆ.