ಜಿಲ್ಲಾಧಿಕಾರಿಗಳಿಂದ ಅಂತಿಮ ಪೂರ್ವಸಿದ್ಧತೆ ಪರಿಶೀಲನೆ
ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸೆ.25 ರಂದು (ಸೋಮವಾರ) ಸಾರ್ವಜನಿಕರ ಕುಂದುಕೊರತೆ ಆಲಿಸುವ ಪ್ರಥಮ ಜನತಾ ದರ್ಶನ ಕಾರ್ಯಕ್ರಮಕ್ಕೆ ಗಡಿ ತಾಲೂಕು ಚಿಂಚೋಳಿ ಸಜ್ಜುಗೊಂಡಿದೆ.
ತಮ್ಮ ಸಮಸ್ಯೆಗೆ ಪರಿಹಾರ ಕಾಣಲು ಸಾರ್ವಜನಿಕರು ಮುಖ್ಯಮಂತ್ರಿ, ಸಚಿವರ ಭೇಟಿಗೆ ಬೆಂಗಳೂರು ಹೋಗುವುದನ್ನು ತಪ್ಪಿಸಿ ಜಿಲ್ಲಾ ಹಂತದಲ್ಲಿಯೇ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಗಡಿ ತಾಲೂಕಿನ ಜನರ ಸಮಸ್ಯೆ ಆಲಿಸಲಿದ್ದಾರೆ. ಪಂಚ ಗ್ಯಾರಂಟಿಯಲ್ಲಿ 4 ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ರಾಜ್ಯ ಸರ್ಕಾರ, ಇದೀಗ ಜನರ ಬಳಿಗೆ ಧಾವಿಸಿ ಅವರ ದೂರು, ದುಮ್ಮಾನುಗಳಿಗೆ ಕಿವಿಯಾಗುವತ್ತ ಹೆಜ್ಜೆ ಇಟ್ಟಿದೆ.
ತೆಲಾಂಗಾಣದ ಗಡಿಗೆ ಹತ್ತಿಕೊಂಡಿರುವ ಗಡಿ ತಾಲೂಕು ಚಿಂಚೋಳಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ “ಜನತಾ ದರ್ಶನ” ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆ ವರೆಗೆ ನಡೆಯಲಿದ್ದು, ರವಿವಾರ ಚಿಂಚೋಳಿ ಪಟ್ಟಣಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಅಂತಿಮ ಪೂರ್ವಸಿದ್ಧತೆ ಪರಿಶೀಲಿಸಿದರು.
ಸುಮಾರು 4 ಸಾವಿರ ಜನ ಸೇರುವ ನಿರೀಕ್ಷೆ ಇರುವುದರಿಂದ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ಶಾಮಿಯಾನ ಟೆಂಟ್ ಹಾಕಿದ್ದು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ.
ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ರೇಷ್ಮೆ , ತೋಟಗಾರಿಕೆ, ಕಾರ್ಮಿಕ, ಸಂಚಾರಿ ಪೊಲೀಸ್, ಕಂದಾಯ ಹೀಗೆ ಪ್ರಮುಖ 20ಕ್ಕೂ ಹೆಚ್ಚು ಇಲಾಖೆಯ ಮಳಿಗೆ ಹಾಕಲಾಗುತ್ತಿದೆ. ಪಡಿತರ ಚೀಟಿ ತಿದ್ದುಪಡಿ, ಆಧಾರ್, ಕೆ.ವೈ.ಸಿ., ವೋಟರ್ ಐ.ಡಿ, ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಇನ್ನಿತರ ಯೋಜನೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಿಬ್ಬಂದಿಗಳು ಸ್ಥಳದಲ್ಲಿ ಇರಲಿದ್ದಾರೆ. ಕುಂದುಕೊರತೆ ಅರ್ಜಿ ಸ್ವೀಕಾರಕ್ಕೆ 10-15 ಕೌಂಟರ್ ತೆರೆಯಲಾಗುತ್ತಿದೆ.
*ಸೌಲಭ್ಯ ವಿತರಣೆ*: ಪಿಂಚಣಿ ಆದೇಶ, ಯೋಜನೆಗಳ ಮಂಜೂರಾತಿ ಪತ್ರ ಸೇರಿದಂತೆ ವಿವಿಧ ಇಲಾಖೆಯ ಯೋಜನೆಯಡಿ ಸರಕು-ಸಾಮಗ್ರಿ ವಿತರಣೆ ಸೌಲಭ್ಯವನ್ನು ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಲಿದ್ದಾರೆ.
ಈ ಸಂದರ್ಭದಲ್ಲಿ ಚಿಂಚೋಳಿ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ತಾಲೂಕ್ ಪಂಚಾಯತ್ ಇ.ಓ. ಶಂಕರ ರಾಠೋಡ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.