ಕಲಬುರಗಿ,ಚಿತ್ತಾಪೂರ: ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗೆಲ್ಲ ಈ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಿದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಚಿತ್ತಾಪೂರ ಮತಕ್ಷೆತ್ರದ ನಾಲವಾರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಸುಮಾರು 2000 ಕೋಟಿ ವೆಚ್ಚದಲ್ಲಿ ಸೋಲಾಪುರದಿಂದ ಕಲಬುರಗಿ, ವಾಡಿ, ನಾಲವಾರ, ಯಾದಗಿರಿ ಮೂಲಕ ಹಾದು ಹೋಗಿ ಬೆಂಗಳೂರುವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದೆ ಅದು ಇನ್ನೇನು ಕೆಲಸ ಮುಗಿಯಲಿದೆ. ಆರ್ಟಿಕಲ್ 371 ( ಜೆ) ಅನ್ವಯ ಈ ಭಾಗದ 800 ವೈದ್ಯಕೀಯ ಹಾಗೂ 3000 ಇಂಜನಿಯರಿಂಗ್ ಸೀಟುಗಳನ್ನು ನಯಾಪೈಸೆಯಿಲ್ಲದೇ ದೊರಕಿಸಿಕೊಡಲಾಗಿದೆ. ಈ ಭಾಗದ ಅರ್ಹ 31000 ಅಭ್ಯರ್ಥಿಗಳಿಗೆ ಸರಕಾರದಲ್ಲಿ ಉದ್ಯೋಗ ದೊರಕಿಸಿಲಾಗಿದೆ. ಇದು ಅಭಿವೃದ್ದಿ ಅಲ್ಲವೇ? ಮೋದಿ ಬರೀ ಮಾತನಾಡುತ್ತಾನೆ ನಾನು ಮಾಡಿ ತೋರಿಸಿದ್ದೇನೆ ಇದಕ್ಕೆ ಶ್ರೀಮತಿ ಸೋನಿಯಾಗಾಂಧಿ ಅವರ ಸಹಕಾರ ಹಾಗೂ ನಿಮ್ಮ ಆಶೀರ್ವಾದ ಕಾರಣವಾಗಿದೆ ಎಂದು ಸ್ಮರಿಸಿದರು.
ಈ ಹಿಂದೆ ನಮ್ಮ ಬಳಿಯೇ ಇದ್ದು ಈಗ ಬಿಜೆಪಿ ಸೇರಿರುವವರು ತಮ್ಮ ತಂದೆ ತಾಯಿ ಮಕ್ಕಳ ಮನೆದೇವರ ಮೇಲೆ ಆಣೆ ಮಾಡಿ ಹೇಳಲಿ ಈ ಹಿಂದೆ ಕಾಂಗ್ರೇಸ್ ಪಕ್ಷ ಜಾರಿಗೆ ಆರ್ಟಿಕಲ್ 371 (j)ದಿಂದ ಜನರಿಗೆ ಅನುಕೂಲವಾಗಿದೆ ಎಂದು ಜನರಿಗೆ ಹೇಳಿಲ್ಲ ಎಂದು. ನಮ್ಮಲ್ಲಿರುವಾಗ ಹೊಗಳೋದು ನಮ್ಮಿಂದ ಹೋದಾಗ ನಮ್ಮನ್ನುವ ತೆಗೋಳದಾ? ಎಂದು ಪ್ರಶ್ನಿಸಿದರು.
ಏನೂ ಕೆಲಸ ಮಾಡದ ಮೋದಿ ಅವರನ್ನ ಟಿವಿಯವರು ತಾಸುಗಟ್ಟಲೇ ತೋರಿಸುತ್ತಾರೆ. ಆದರೆ ಕೆಲಸ ಮಾಡಿದ ನಮ್ಮನ್ನು ಒಂದು ತಾಸು ತೋರಿಸುತ್ತಾರೆ. ಏನ್ ಮಾಡಣ ನಮ್ಮ ಬಳಿ ದುಡ್ಡಿಲ್ಲ ಅವರಷ್ಟು ಜಾಹಿರಾತು ಕೊಡಲು. ಇವರು ಇಷ್ಟೆಲ್ಲ ತಗೊಂಡು ಹೋಗ್ತಾರಲ್ಲ ತೋರ್ಸೋದು ಒಂದೇ ನಿಮಿಷ. ಪಾಪ ಇವರೇನು ಮಾಡ್ತಾರ ಇವರ ಮಾಲಕರು ಕಾರಣ ಎಂದು ಮಾದ್ಯಮಗಳು ಮೋದಿ ಅವರ ಬಗ್ಗೆ ಜಾಸ್ತಿ ಸುದ್ದಿ ತೋರಿಸುತ್ತಿರುವ ಕುರಿತು ಅಭಿಪ್ರಾಯಪಟ್ಟರು.
ಮಾಜಿ ಗೃಹಮಂತ್ರಿ ಹಾಗೂ ಶಾಸಕ, ರಾಮಲಿಂಗಾರೆಡ್ಡಿ ಮಾತನಾಡಿ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಟಿಕಲ್ 371 ( ಜೆ) ಜಾರಿಗೆ ತರುವ ಮೂಲಕ ಈ ಭಾಗದ ಅಭಿವೃದ್ದಿಗೆ ನಾಂದಿ ಹಾಡಿದ್ದಾರೆ.ಹಾಗಾಗಿ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತು. ವಿರೋಧ ಪಕ್ಷಗಳು ಕೂಡಾ ತಮ್ಮ ಅಭ್ಯರ್ಥಿಯನ್ನು ಹಾಕಬಾರದಿತ್ತು ಎಂದು ಅಭಿಪ್ರಾಯಪಟ್ಟರು.
ಮೋದಿ ಅಧಿಕಾರವಾಧಿಯಲ್ಲಿ ಜನಸಾಮಾನ್ಯರ ಬಳಕೆಯ ವಸ್ತುಗಳ, ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಆದರೆ ಯಾವ ಕ್ರಮ ಕೈಗೊಳ್ಳದ ಮೋದಿ ಈಗ ಮತ್ತೊಮ್ಮೆ ಓಟು ಕೇಳಲು ಬರುತ್ತಿದ್ದಾರೆ. ನೀವು ಯೋಚಿಸಿ ಮತ ನೀಡಿ ಎಂದು ಕರೆ ನೀಡಿದರು. “70 ವರ್ಷವ ಕಾಂಗ್ರೇಸ್ ಏನು ಮಾಡಿದೆ ಎಂದು ಕೇಳುವ ಮೋದಿ ಕಾಂಗ್ರೇಸ್ ಕಟ್ಟಿರುವ ಮನೆಯಲ್ಲಿ ಈಗ ಬಂದು ವಾಸವಾಗಿದ್ದಾರೆ. ಯಾವ ಕೆಲಸ ಮಾಡದ ಮೋದಿ ಸಿನೆಮಾಗಳಲ್ಲಿನ ಸ್ಟಂಟ್ ಮಾಸ್ಟರ್ ಇದ್ದಂಗೆ” ಎಂದು ಜರಿದರು.
ಮಾಜಿ ರಾಜ್ಯ ಸಭಾ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ ಜಾಧವ್ ನಿನ್ನಿ ಹೇಳ್ಯಾನ ಬಜೆಪಿ ಒಳಗ ಉಸಿರುಕಟ್ಟೋ ವಾತವರಣ ಅದಾ ಅಂದಾನ.. ಅಲೇ ಹುಡುಗಾ ನನಗೆ 16 ವರ್ಷದಿಂದ ಉಸಿರುಗಟ್ಟೋ ವಾತವಾರಣ ಅನುಭವಿಸಿ ಹೊರಗ ಬಂದಿನಿ. ನಿನಗ ಸ್ವಲ್ಪ ದಿನಕ್ಕಾ ಉಸಿರುಗಟ್ಟೋ ವಾತವಾರಣ ತಿಳಿತೇನ..ನೀನು ಸುಮ್ಮನೆ ಖರ್ಗೆ ಸಾಹೇಬರನ್ನ ಒಪ್ಪಿಕೊಂಡುಬಿಡು ” ಎಂದು ಮಾತಿನಲ್ಲೇ ತಿವಿದರು.
ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಬಾಬುರಾವ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್, ಉಮೇಶ್ ಜಾರಿಗೆ ಒಂದೇ ತಾಯಿಯ ಮಕ್ಕಳಿದ್ದಂಗೆ ಒಂದೇ ಬಳ್ಳಿಯ ಹೂವುಗಳಿದ್ದಂತೆ. ನೀವು ಮತ್ತೆ ಬಂದರೆ ಕಾಂಗ್ರೇಸಗೆ ನಿಮ್ಮನ್ನು ಸೇರಿಸಿಕೊಳ್ಳಲ್ಲ ಎಂದು ಚಾಟಿ ಬೀಸಿದರು. ಬಿಜೆಪಿ ಜತೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಜಾಧವ್ ಹೇಳಿರುವುದು ಅವರೇ ಸೋಲೊಪ್ಪಿಕೊಂಡಂತಾಗಿದೆ ಎಂದರು. ಬಾಬುರಾವ ಚಿಂಚನೂರು ಅನಕ್ಷರಸ್ಥ ಮನುಷ್ಯ ಅವನು ಏನೇನೋ ಹೇಳುತ್ತಾನೆ. ಅವನೊಂದಿಗೆ ಐದು ಮಂದಿ ಮತದಾರರು ಹೋಗಿಲ್ಲ. ಸರ್ವ ಕೋಲಿ ಸಮಾಜ ನಿಮ್ಮೊಂದಿಗೆ ಎಂದು ವಾಗ್ದಾನ ನೀಡಿದರು.
ಪ್ರಚಾರ ಸಭೆಗೂ ಮುನ್ನ ನಾಲವಾರದ ಕೋರಿಸಿದ್ಧೇಶ್ವರ ಸಂಸ್ಥಾನದ ಡಾ.ತೋಟೇಂದ್ರ ಶಿವಾಚಾರ್ಯರ ದರ್ಶನಾಶೀರ್ವಾದ ಪಡೆದರು.
ವೇದಿಕೆಯ ಮೇಲೆ ಭಾಗನಗೌಡ ಸಂಕನೂರು, ನಾಗರೆಡ್ಡಿ ಕರದಳ್ಳಿ, ತಿಪ್ಪಣ್ಣಪ್ಪ ಕಮಕನೂರು, ಜಾಫರ್ ಪಟೇಲ್, ಭೀಮಣ್ಣ ಸಾಲಿ, ಇಬ್ರಾಹಿಂ ಪಟೇಲ್ ಸೇರಿದಂತೆ ಮತ್ತಿತರಿದ್ದರು.