ಬೆಂಗಳೂರು; ವಿದ್ಯೆಯ ಜೊತೆಗೆ ಕೌಶಲ್ಯವಿದ್ದರೆ ಶಿಕ್ಷಣ ಪರಿಪೂರ್ಣವಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ಅವರು ತಿಳಿಸಿದರು.
ಇಂದು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕಿಮುರಾ ಫೌಂಡ್ರಿ, ಜಪಾನ್ ಸಹಯೋಗದೊಂದಿಗೆ ಕಾಸ್ಟಿಂಗ್ ಟೆಕ್ನಾಲಜಿ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದ ವಿವಿಧೆಡೆ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗ ಆಧಾರಿತ ಕೋರ್ಸ್‍ಗಳಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉದ್ಯೋಗ ಪಡೆಯುತ್ತಿದ್ದಾರೆ. ಅನೇಕರು ಸ್ವಯಂ ಉದ್ಯಮಿಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಅರೆಕಾಲಿಕ ಮತ್ತು ಪೂರ್ಣ ಪ್ರಮಾಣದ ಕೌಶಲ್ಯಾಭಿವೃದ್ಧಿ ತರಬೇತಿ ಕೋರ್ಸ್‍ಗಳಿದ್ದು ವಿಶ್ವದ ಪ್ರಮುಖ ಕಂಪನಿಗಳು ನಮ್ಮೊಂದಿಗೆ ಸಹಯೋಗದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಎಸ್.ಎಸ್.ಎಲ್.ಸಿ ಯಿಂದ ಪದವಿ ಶಿಕ್ಷಣ ಪಡೆದವರೆಲ್ಲರಿಗೂ ಆಯಾಯ ವಿಭಾಗಗಳಲ್ಲಿ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಇದರ ವಿಸ್ತರಣಾ ಕೇಂದ್ರಗಳು ಗೌರಿಬಿದನೂರು ಮತ್ತು ಕಾರ್ಕಳದಲ್ಲಿದೆ. ಉದ್ಯಮದ ಬೇಡಿಕೆಗೆ ಅನುಗುಣವಾಗಿ ಕರ್ನಾಟಕದ ಯುವಕರಿಗೆ ಸುಮಾರು 50ಕ್ಕೂ ಹೆಚ್ಚು ಅಲ್ಪಾವಧಿಯ ಕೋರ್ಸ್‍ಗಳೊಂದಿಗೆ ಏಳು ಕೌಶಲ್ಯ ವಲಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಒದಗಿಸಲು ಅತ್ಯಾಧುನಿಕ ಸೌಲಭ್ಯವನ್ನು ರಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ವಲಯದ ತರಬೇತಿ ಕಾರ್ಯಕ್ರಮಗಳನ್ನು ಎಲ್ಲಾ ಕೆಜಿಟಿಟಿಐಎಸ್ ನಲ್ಲಿ ನಡೆಸಲಾಗುತ್ತದೆ.
ಈಗಾಗಲೇ ಕೆಜಿಟಿಟಿಐಎಸ್ ಬೆಂಗಳೂರು ಮತ್ತು ಕಲಬುರಗಿ ಕಳೆದ ಐದು ವರ್ಷಗಳಿಂದ ಸ್ವಾವಲಂಬನೆ ಸಾಧಿಸಿದೆ. ಈ ಕೇಂದ್ರಗಳು ಉತ್ತಮ ಗುಣಮಟ್ಟದ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿವೆ. ಉತ್ತಮ ಉದ್ಯೋಗ ಮತ್ತು ಯುವಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸಮನ್ವಯಗೊಳಿಸುತ್ತಿದೆ. ಈಗಾಗಲೇ ಎಲ್ಲಾ ಕೆಜಿಟಿಟಿಐಎಸ್ ಕೇಂದ್ರಗಳಿಂದ 42227 ಅಭ್ಯರ್ಥಿಗಳು ವಿವಿಧ ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸ್‍ಗಳಲ್ಲಿ ತರಬೇತಿ ಪಡೆದಿದ್ದಾರೆ. ಇದರಲ್ಲಿ ಎಸ್‍ಸಿ 13309, ಎಸ್‍ಟಿ 2248, ಮಹಿಳೆಯರು 8618 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 16191 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದರು.
ಜಪಾನ್ ನ ಕಿಮುರಾ ಫೌಂಡ್ರಿಯ ಅಧ್ಯಕ್ಷರಾದ ಕಾಜುಟೋಶಿ ಕಿಮುರಾ ಅವರು ಮಾತನಾಡಿ ಭಾರತದೊಂದಿಗೆ ಸಹಭಾಗಿತ್ವ ಹೊಂದಿರುವುದು ನಮಗೆ ಹೆಮ್ಮೆಯ ವಿಷಯ ಸಂತಸ ವ್ಯಕ್ತಪಡಿಸಿದರಲ್ಲದೆ, ಇಲ್ಲಿ ತರಬೇತಿ ಪಡೆದವರಿಗೆ ಜಪಾನ್ ನಲ್ಲಿ ಉದ್ಯೋಗ ಕಲ್ಪಿಸುವುದಾಗಿಯೂ ಭರವಸೆ ನೀಡಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು, ಅವರು ಮಾತನಾಡಿ ಇಂದು ಭಾರತದಲ್ಲಿ ಪ್ರಥಮವಾಗಿ ಕಾಸ್ಟಿಂಗ್ ಟೆಕ್ನಾಲಜಿ ಲ್ಯಾಬ್ ಉದ್ಘಾಟನೆಯಾಗಿದೆ. ಇದರ ಸದುಪಯೋಗವನ್ನು ಕೈಗಾರಿಕೋದ್ಯಮಿಗಳು ಹಾಗೂ ಯುವಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಪಾನಿನ ಜೆಐಸಿಎ ಮುಖ್ಯ ಪ್ರತಿನಿಧಿ ಮಿಟ್ಸುನೋರಿ ಸಾಯಿಟೋ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಹಾಗೂ ಕೆ.ಜಿ.ಎಂ.ಎಸ್.ಡಿ.ಸಿ. ಸದಸ್ಯ ಕಾರ್ಯದರ್ಶಿಗಳಾದ ಡಾ. ರಾಗಪ್ರಿಯ, ಕೆ.ಜಿ.ಎಂ.ಎಸ್.ಡಿ.ಸಿ. ಜಂಟಿ ಕಾರ್ಯದರ್ಶಿಗಳಾದ ಕಾರ್ಯದ ಬಿ ಎಸ್ ರಘುಪತಿ ಸೇರಿದಂತೆ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.