ಸುರಪುರ: ಕೇಂದ್ರ ಸರಕಾರದ ವೈಫಲ್ಯ ನೀತಿ ಮತ್ತು ರೈತರ ಹಾಗು ಕಾರ್ಮಿಕರ ಕಡೆಗಣನೆ ಮತ್ತು ರಾಜ್ಯ ಸರಕಾರದ ರೈತರ ನಿರ್ಲಕ್ಷ್ಯ ಖಂಡಿಸಿ ಸಪ್ಟೆಂಬರ್ ೫ ರಂದು ರಾಷ್ಟ್ರವ್ಯಾಪಿ ಚಳುವಳಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿದರು.
ನಗರದ ಸಂಘದ ಕಚೇರಿ ಆವರಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಬರಗಾಲವಿದೆ,ಹದಿನೇಳಕ್ಕು ಹೆಚ್ಚಿನ ಜಿಲ್ಲೆಗಳಲ್ಲಿ ನೆರೆಯಿಂದ ದೊಡ್ಡ ಮಟ್ಟದ ಹಾನಿಯುಂಟಾಗಿದೆ.ಸುಮಾರು ಮೂರು ನೂರಕ್ಕು ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ,ನಾಲ್ಕು ಲಕ್ಷ ಕುಟುಂಬಗಳು ನೆರೆಯಿಂದ ಸಂತ್ರಸ್ತಗೊಂಡಿವೆ,ಹದಿನೈದು ಲಕ್ಷ ಹೆಕ್ಟೆರ್ ಬೆಳೆ ನಾಶವಾಗಿದೆ.ನೂರಕ್ಕು ಹೆಚ್ಚು ಜನ ಸಾವಿಗೀಡಾಗಿದ್ದಾರೆ.ಅರವತ್ತೈದು ಸಾವಿರ ಮನೆಗಳು ಬಿದ್ದಿವೆ.ಸಾವಿರಾರು ಜಾನುವಾರುಗಳು ಕೊಚ್ಚಿ ಹೋಗಿವೆ,ಇಷ್ಟೆಲ್ಲ ಆಗಿದ್ದರು ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡದೆ ರಾಜ್ಯಕ್ಕೆ ಅನ್ಯಾಯ ಮಡುತ್ತಿದೆ.ಕಾಟಾಚಾರಕ್ಕೆ ಇಬ್ಬರು ಸಚಿವರು ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೊದರೆ ವಿನ ಬಿಡಿಗಾಸುಕೂಡ ನೆರವು ನೀಡದೆ ಕಡೆಗಣಿಸಿದ್ದಾರೆ.ಈಗ ಎಲ್ಲೆಡೆ ಒತ್ತಾಯ ಮಾಡಿದ್ದರಿಂದ ಸಾವಿರ ಕೋಟಿ ನೀಡಿದ್ದಾರೆ,ಇದು ಯಾವುದಕ್ಕೂ ಸಾಲದು ಇದೆಲ್ಲವನ್ನು ಖಂಡಿಸಿ ಚಳುವಳಿ ನಡೆಸಲಾಗುತ್ತಿದೆ ಎಂದರು.
ಕುಡಲೆ ಕೇಂದ್ರ ಸರಕಾರ ರಾಜ್ಯದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.ಹಾನಿಗೀಡಾದ ಬೆಳೆಗೆ ಪ್ರತಿ ಎಕರೆಗೆ ಇಪ್ಪತ್ತೈದು ಸಾವಿರ ಪರಿಹಾರ ನೀಡಬೇಕು.ಸಾವಿಗೀಡಾದ ಕುಟುಂಬಕ್ಕೆ ಕನಿಷ್ಟ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು.ರಾಜ್ಯಕ್ಕೆ ನೆರೆ ಪರಿಹಾರಕ್ಕಾಗಿ ಕನಿಷ್ಟ ಹತ್ತು ಸಾವಿರ ಕೋಟಿ ಅನುದಾನ ನೀಡಬೇಕು,ರೈತರ ಎಲ್ಲಾ ಸಾಲ ಸಂಪೂರ್ಣ ಮನ್ನಾ ಮಾಡಬೇಕು,ನೆರೆಯಿಂದ ಹಾಳಾದ ಎಲ್ಲಾ ರಸ್ತೆ,ಸೇತುವೆ,ಶಾಲೆ,ಅಂಗನವಾಡಿ ಕೇಂದ್ರಗಳ ನಿರ್ಮಿಸಬೇಕು.ನೆರೆಯ ಹಾನಿಗೊಳಗಾದ ಪ್ರದೇಶಗಳಲ್ಲಿ ನಿರಂತರ ಗಂಜಿ ಕೇಂದ್ರ ತೆರೆಯಬೇಕು,ಅಂಗನವಾಡಿಗಳಲ್ಲಿ ಮೂರೊತ್ತು ಊಟ ನೀಡಬೇಕೆಂದರು.
ಅಲ್ಲದೆ ಕೇಂದ್ರ ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ರದ್ದು ಪಡಿಸಿ ಸರ್ವಾಧಿಕಾರಿ ಧೋರಣೆ ತೋರಿದ್ದನ್ನು ಖಂಡಿಸಲಾಗುವುದು.ಅಲ್ಲದೆ ಅದರಂತೆ ನಮ್ಮ ಹೈದರಾಬಾದ ಕರ್ನಾಟಕ ಭಾಗಕ್ಕೆ ನೀಡಲಾದ ಸೌಲಭ್ಯದ ಕಲಂ ೩೭೧(ಜೆ) ಅಡಿಯಲ್ಲಿ ಎಲ್ಲಾ ಹುದ್ದೆಗಳಲ್ಲಿ ಶೇ ೮೦ ರಷ್ಟು ಮೀಸಲಿಡಬೇಕೆಂದರು. ಈ ಎಲ್ಲಾ ವಿಷಯಗಳನ್ನಿಟ್ಟಕೊಂಡು ಸಪ್ಟೆಂಬರ್ ೫ ರಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಗು ತಾಲ್ಲೂಕು ಕಚೇರಿಗಳ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಮುಖಂಡ ಚೆನ್ನಪ್ಪ ಆನೆಗುಂದಿ ಮಾತನಾಡಿ,ಹುಣಸಗಿ ಮತ್ತು ವಡಗೇರಿ ತಾಲ್ಲೂಕುಗಳ ಅನೇಕ ಗ್ರಾಮಗಳಲ್ಲಿ ನೆರೆಯಿಂದ ಬೋರುಕಾ ವಿದ್ಯೂತ್ ಕಂಪನಿಯಿಂದಾಗಿ ಸಾವಿರಾರು ಎಕರೆ ಬೆಳೆ ಹಾನಿಗೀಡಾಗಿದೆ.ಈ ಎಲ್ಲಾ ರೈತರಿಗೆ ಎಕರೆಗೆ ತಲಾ ಐವತ್ತು ಸಾವಿರ ಪರಿಹಾರ ನೀಡಬೇಕು.ಪ್ರತಿ ಎಕರೆಗೆ ಐವತ್ತು ಸಾವಿರದಂತೆ ಬ್ಯಾಂಕ್ ಸಾಲ ನೀಡಬೇಕು,ಬಹುವಾರ್ಷಿಕ ಬೆಳೆಗಳ ಹಾನಿಯನ್ನು ಭರಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ,ಜಿಲ್ಲಾ ಉಪಾಧ್ಯಕ್ಷ ನಾಗನಗೌಡ,ಎಸ್.ಎಮ್.ಸಾಗರ,ಪ್ರಕಾಶ ಆಲ್ಹಾಳ,ಮಹಿಬೂಬ ಕಕ್ಕೇರಾ,ಬಸವರಾಜ ಐಕೂರ,ಶರಣಪ್ಪ ಗುಡಗುಂಡ,ಸಂಗಣ್ಣ ಅರಕೇರಿ,ಸಿದ್ದಲಿಂಗಯ್ಯ ಹಿರೇಮಠ,ಬಸವರಾಜ ಹೊಸ್ಮನಿ ಸೇರಿದಂತೆ ಅನೇಕರಿದ್ದರು.
Nice sar