ಜೇವರ್ಗಿ: ರೈತಬಂಧು ಕೇದಾರಲಿಂಗಯ್ಯ ಹಿರೇಮಠ ಅವರು ರೈತರ ನಾಡಿ ಮಿಡಿತ ಅರಿತು ಸ್ಪಂದಿಸಿ ನ್ಯಾಯ ಒದಗಿಸಿಕೊಡುವಲ್ಲಿ ನಿರಂತರ ಹೋರಾಟ ನಡೆಸಿದ ಹೋರಾಟಗಾರ ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೇದಾರಲಿಂಗಯ್ಯ ಹಿರೇಮಠ ಅವರ ಸತ್ಯಾಗ್ರಹಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಾಬಾದ ಏತ ನೀರಾವರಿ, ಬೆಳೆ ಪರಿಹಾರ, ವಿಮಾ ಹಣ ಸೇರಿದಂತೆ ಹತ್ತು ಹಲವಾರು ಜನಪರ, ರೈತಪರ ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿದ್ದಾರೆ ಎಂದರು.
ಈ ಭಾಗದ ರೈತಪರ, ಜನಪರ ಸಮಸ್ಯೆಗಳಿಗೆ ನಿರಂತರ ಹೋರಾಟದ ಮೂಲಕ ಧ್ವನಿ ಎತ್ತಿ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಇವರ ಪ್ರಮುಖ ಬೇಡಿಕೆಗಳ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ಸ್ಪಂದಿಸುವ ಮೂಲಕ ಅನೇಕ ಜನಪರ ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. ಕೆಕೆಆರ್‌ಡಿಬಿ ನಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು. – ಡಾ. ಅಜಯಸಿಂಗ್, ಕೆಕೆಆರ್ಡಿಬಿ ಅಧ್ಯಕ್ಷ.
ಸತ್ಯಾಗ್ರಹಿ ಗ್ರಂಥ ಬಿಡುಗಡೆ ನಂತರ ಕೇದಾರಲಿಂಗಯ್ಯ ಹಿರೇಮಠ ಅವರು ಮಾತನಾಡಿ, ನನ್ನಲ್ಲಿ ಹೋರಾಟದ ಕಿಚ್ಚು ಹೋತ್ತಿಸಿದ್ದೆ ರೈತರ ಕಷ್ಟ. ಆ ಕಷ್ಟವನ್ನು ಮನಗಂಡು ಹೋರಾಟದ ಹಾದಿ ತುಳಿಯಬೇಕಾಯಿತು ಎಂದರು.
ರೈತರಿಗೆ ನ್ಯಾಯ ಒದಗಿಸಿ ಕೊಡಲು ಸೆರೆವಾಸ ಕೂಡ ಅನುಭವಿಸಿದ್ದೆನೆ. ನನ್ನ ಜೊತೆ ಅನೇಕ ಜನರು ಹೋರಾಟದಲ್ಲಿ ನೋವು ಅನುಭವಿಸಿದ್ದಾರೆ. ಕಾಮಗಾರಿ ಹಂತದಲ್ಲಿರುವ ಏತ ನೀರಾವರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಚಿವರು, ಶಾಸಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಮನವಿ ಮಾಡಿದ ಅವರು ಈ ಕಾಮಗಾರಿ ಪೂರ್ಣಗೊಂಡಿದ್ದೆಯಾದರೇ ಶಹಾಪುರ, ಜೇವರ್ಗಿ, ಯಡ್ರಾಮಿ ತಾಲೂಕಿನ ಲಕ್ಷಾಂತರ ಎಕರೆ ಜಮೀನು ನೀರಾವರಿ ಹೊಂದಲಿದೆ ಎಂದರು.
ನಾನು ಸತ್ಯಾಗ್ರಹ ಮಾಡಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೆನೆ. ನಾನು ಎಷ್ಟು ದಿನ ಬದುಕುತ್ತೆನೆ ಗೊತ್ತಿಲ್ಲ. ನಾವು ಮಾಡಿದ ಜನಪರ ರೈತಪರ ಹೋರಾಟ ಸ್ಮರಣಿಯವಾಗುತ್ತದೆ ಎಂದು ಭಾವುಕರಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಅಬ್ಬೆತುಮಕೂರಿನ ಡಾ.ಗಂಗಾಧರ ಶಿವಾಚಾರ್ಯರು, ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು, ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಶಕಾಪುರಿನ ಡಾ.ಸಿದ್ಧರಾಮ ಶಿವಾಚಾರ್ಯರು, ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ಆಲೂರಿನ ಶ್ರೀ ಕೆಂಚವೃಷಬೇAದ್ರ ಶಿವಾಚಾರ್ಯರು, ಕಡಕೋಳದ ಡಾ.ರುದ್ರಮುನಿ ಶಿವಾಚಾರ್ಯರು, ನೆಲೋಗಿಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಜೇರಟಗಿಯ ಶ್ರೀ ಮಹಾಂತ ಸ್ವಾಮೀಜಿ, ಆಂದೋಲಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಹಿಪ್ಪರಗಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಯಲಗೋಡದ ಶ್ರೀ ಗುರುಲಿಂಗ ಮಹಾಸ್ವಾಮೀಜಿ, ಮಳ್ಳಿಯ ಶ್ರೀ ರುದ್ರಮುನಿ ಶಿವಾಚಾರ್ಯರು, ಕುಕನೂರಿನ ಶ್ರೀ ಚನ್ನಮಲ್ಲ ದೇವರು, ಅಂಕಲಗಿಯ ಶ್ರೀ ಅಭಿನವ ಗುರುಬಸವ ಶಿವಾಚಾರ್ಯರು, ಚಿಗರಹಳ್ಳಿಯ ಶ್ರೀ ಸಿದ್ದಬಸವ ಕಬೀರಾನಂದ ಸ್ವಾಮೀಜಿ, ಮಾವನೂರಿನ ಶ್ರೀ ದರ್ಮರಾಯ ಮುತ್ಯಾ, ಕಲ್ಲೂರಿನ ಶ್ರೀ ಮಲ್ಲಕಾರಸಿದ್ದ ಒಡೆಯರ್ ಉಪಸ್ಥಿತರಿದ್ದರು.
ಮಾಜಿ ಸಚಿವ ಎಸ್.ಕೆ.ಕಾಂತಾ, ಶಾಸಕರಾದ ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಅಶೋಕ ಮನಗೂಳಿ, ಮಲ್ಲಿನಾಥಗೌಡ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ.ಪೋತೆ, ಅಭಿನಂದನಾ ಗ್ರಂಥ ಸಂಪಾದಕ ಸದಾನಂದ ಪಾಟೀಲ್, ಸಮಾಜ ಸೇವಕ ಕಲ್ಯಾಣಕುಮಾರ ಸಂಗಾವಿ, ಚನ್ನಮಲ್ಲಯ್ಯ ಹಿರೇಮಠ, ಕಸಾಪ ಅಧ್ಯಕ್ಷ ಎಸ್.ಕೆ.ಬಿರೆದಾರ ನಿರೂಪಿಸಿದರು. ವಿಜಯಕುಮಾರ ಹಿರೇಮಠ ಸ್ವಾಗತಿಸಿದರು.
ಶಿವರುದ್ರಯ್ಯ ಸ್ವಾಮಿ ಗೌಡಗಾಂವ ಸಂಗೀತ ಸೇವೆಸಲ್ಲಿಸಿದರು. ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಿದರು. ಕೆಕೆಆರ್‌ಡಿಬಿ ಅಧ್ಯಕ್ಷ ಶಾಸಕ ಡಾ.ಅಜಯಸಿಂಗ್ ಅಧ್ಯಕ್ಷತೆ ವಹಿಸಿದ್ದರು.