ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕ್ಷೇತ್ರೀಯ ಕಾರ್ಯಾಲಯದಲ್ಲಿ ಜಾಗೃತ ಜಾಗೃತಿ ಸಪ್ತಾಹ ಕಾರ್ಯಕ್ರಮ ನಿಮಿತ್ತವಾಗಿ ಶಾಲಾ ಮಕ್ಕಳಿಗೆ ನಿಬಂಧ ಸ್ಪರ್ಧೆ ಹಾಗೂ ಸಿಬ್ಬಂದಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬುಧವಾರದಂದು ಬಹುಮಾನಗಳನ್ನು ವಿತರಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಗಡ್ಡಪರ್ತಿ ಮನಿಶಾ ಪ್ರಥಮ ಸ್ಥಾನ, ಪ್ರಶಾಂತ ತಮದಡ್ಡಿ ದ್ವಿತೀಯ ಸ್ಥಾನ ಹಾಗೂ ಸುಜಯ ಬಿಸ್ವಾಸ್ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರವಿ ಯಾದವ ಕೇಂದ್ರ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಬಹಿರಂಗಪಡಿಸುವಿಕೆ ಮತ್ತು ಮಾಹಿತಿದಾರರ ರಕ್ಷಣೆಯ (ಪಿ.ಐ.ಡಿ.ಪಿ.ಐ) ನಿರ್ಣಯದ ಅಡಿಯಲ್ಲಿ ಕೇಂದ್ರಿಯ ಜಾಗೃತ ಆಯೋಗವನ್ನು (ಸಿ.ವಿ.ಸಿ) ಸಾರ್ವಜನಿಕರಿಂದ ಭ್ರಷ್ಟಾಚಾರದ ಲಿಖಿತ ದೂರುಗಳನ್ನು ಹಾಗೂ ಕೇಂದ್ರ ಸರ್ಕಾರದ, ಕಾರ್ಪೊರೇಷನ್, ಕಂಪನಿ, ಸೊಸೈಟಿ ಇತ್ಯಾದಿಗಳ ನೌಕರರು ಕಚೇರಿಯ ದುರ್ಬಳಕೆಯ ಬಗ್ಗೆ ಯಾವುದೇ ಆಪಾದನೆಯನ್ನು ಸ್ವೀಕರಿಸಲು ಗೊತ್ತುಪಡಿಸಿದ ಏಜೆನ್ಸಿಯನ್ನಾಗಿ ಗುರುತಿಸಿದೆ. ಇದರಲ್ಲಿ ದೂರು ಸಲ್ಲಿಸಿದ ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ದೂರುದಾರರನ್ನು ಅಪಾಯದಿಂದ ರಕ್ಷಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಠ್ಠಲ, ಮೋಹ್ಮದ್ ಅರ್ಸ್ಲಾನ್, ಪ್ರಶಾಂತ ಇಂಗಳೇಶ್ವರ, ಚಿಂದಮ ರಾಮು, ಜಗನ್ನಾಥ, ಕೇಶವರಾವ ಕುಲಕರ್ಣಿ, ಪ್ರತಿಭಾ, ಸವಿತಾ, ಅರುಣಕುಮಾರ, ಜಮೀಲ್ ಅಹ್ಮದ್ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮದನ ಕುಲಕರ್ಣಿ ನಿರೂಪಿಸಿದರು. ಬಸವರಾಜ ಹೆಳವರ ಸ್ವಾಗತಿಸಿದರು. ಸುಜಯ ಬಿಸ್ವಾಸ ವಂದಿಸಿದರು.