ಸೇಡಂ; ಲಾಬಿಗಳ ನಡುವೆ `ಅಮ್ಮ ಪ್ರಶಸ್ತಿ’ ಪಾರದರ್ಶಕ: ಸಿದ್ದರಾಮಯ್ಯ ಶ್ಲಾಘನೆ

0
78

ಸೇಡಂ, ನ.26; ನಾಡೋಜದಿಂದ ಹಿಡಿದು ನೃಪತುಂಗ ಪ್ರಶಸ್ತಿಯವರೆಗೂ ಲಾಬಿಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ಆದರೆ, ಪಾರದರ್ಶಕ ಆಯ್ಕೆಮಾಡುವ ಮೂಲಕ ಅಮ್ಮ ಪ್ರಶಸ್ತಿ ಮಾದರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರೂ ಆಗಿರುವ ಸಂಸ್ಕøತಿ ಚಿಂತಕರಾದ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನವು ಕೊಡಮಾಡುವ 23ನೇ ವರ್ಷದ ರಾಜ್ಯ ಮಟ್ಟದ `ಅಮ್ಮ ಪ್ರಶಸ್ತಿ’ಯನ್ನು ಪುರಸ್ಕøತ ಸಾಹಿತಿಗಳಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಸಾಹಿತಿಗಳಾದವರು ಪ್ರಶಸ್ತಿಗಾಗಿ ಬರೆಯಬಾರದು. ಸಮಾಜದ ಬದಲಾವಣೆಗಾಗಿ ಸಾಹಿತ್ಯ ರಚನೆಯಾಗಬೇಕು ಎಂದರು.

Contact Your\'s Advertisement; 9902492681

ಕೆಲವರ ಬರಹಕ್ಕೆ ಯಾವುದೇ ಶಕ್ತಿ ಇರದೇ ಇದ್ದರೂ ಅವರಿಗೆ ಪ್ರಶಸ್ತಿಗಳು ಲಭಿಸುತ್ತವೆ. ನಿಷ್ಠುರ ಸಾಹಿತ್ಯ ಮತ್ತು ಸಾಹಿತಿಗಳಿಗೆ ನಿಜವಾದ ಪ್ರಶಸ್ತಿಗಳು ಸಿಗಬೇಕಿದೆ. ಹೀಗಾಗಿ ನಾಡಿನಾದ್ಯಂತ ನೀಡುವ ಪ್ರಶಸ್ತಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅಮ್ಮ ಪ್ರಶಸ್ತಿಯು ಪಾರದರ್ಶಕವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ, ನಾಡಿನ ವಿವಿಧ ಭಾಗಗಳ ಸಾಹಿತಿಗಳು ಈ ಪ್ರಶಸ್ತಿಗೆ ಸ್ಪಂದಿಸಿದ್ದು ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಪುಸ್ತಕಗಳ ಲೇಖಕರನ್ನು ಗುರುತಿಸಿದ್ದು ಶ್ಲಾಘನೀಯ ಎಂದು ಅವರು ಹೇಳಿದರು. ತಾಯಿಯ ವಾತ್ಸಲ್ಯ ಕುರಿತು ಮಹರ್ಷಿ ವಾಲ್ಮೀಕಿಯವರು ರಾಮಾಯಣ ಕೃತಿಯಲ್ಲಿ ಬಹಳ ಮಾರ್ಮಿಕವಾಗಿ ಬರೆದಿದ್ದಾರೆ.

ಅಹಿಂಸೆಯ ಅಸ್ತ್ರದಿಂದ ಮಾತ್ರ ಎಲ್ಲರ ಮನಸ್ಸು ಗೆಲ್ಲಲು ಸಾಧ್ಯ. ಪ್ರಶಸ್ತಿಯು ಸಾಹಿತಿಗಳನ್ನು ಹುಡುಕಿಕೊಂಡು ಬರುವಂತಾಗಬೇಕು. ಅಂದಾಗ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ. ಇದಕ್ಕೆ ಸೇಡಂ ನೆಲದ ಅಮ್ಮ ಪ್ರಶಸ್ತಿಯೇ ನಿದರ್ಶನ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕನಾಟಕ ಸಂಸ್ಕøತಿ, ಶಾಸನ ತಜ್ಞರಾದ ಡಾ.ದೇವರಕೊಂಡಾರೆಡ್ಡಿ ಬೆಂಗಳೂರ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸಾಂಸ್ಕøತಿಕ ಕೇಂದ್ರಗಳನ್ನು ಸ್ಥಾಪನೆಯ ಅಗತ್ಯವಿದೆ. ಆ ಮೂಲಕ ಇಲ್ಲಿಯ ಪ್ರತಿಭೆಗಳಿಗೆ ಬಹುದೊಡ್ಡ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಮಾತನಾಡಿ, ಮೌಲಿಕ ಮತ್ತು ದರ್ಶನವೀಯುವ ಕೃತಿಗಳನ್ನು ಇವತ್ತಿನ ಸಾಹಿತ್ಯದ ಸಮಕಾಲೀನ ಸಂದರ್ಭದಲ್ಲಿ ಹೆಚ್ಚಳವಾಗಬೇಕಿದೆ. ಅಪ್‍ಡೇಟ್ ಮತ್ತು ವಿಜಡಂ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಅಮ್ಮ ಪ್ರಶಸ್ತಿಯ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ವೇದಿಕೆಯಲ್ಲಿದ್ದರು. ಡಾ.ಮಿರ್ಜಾ ಬಷೀರ, ಚೈತ್ರಾ, ಸುಚಿತ್ರಾ ಹೆಗಡೆ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಓಂಪ್ರಕಾಶ ಪಾಟೀಲ, ಶಶಿಕಲಾ ಮಕ್ತಾಲ್ ಯಾದಗಿರಿ, ಶೇಖ ಮಹೆಬೂಬ ಸೇಡಂ ಹಾಗೂ ನಾಗೇಶನಾಯಕ ಮಾತನಾಡಿದರು. ಇದೇ ಸಂದರ್ಭದಲ್ಲಿ ದಿ.ನಾಗಪ್ಪ ಮಾಸ್ಟರ್ ಮುನ್ನೂರ್ ಅವರ ಸ್ಮರಣಾರ್ಥ ಇಬ್ಬರು ಬಡ ಹೆಣ್ಣುಮಕ್ಕಳಾದ ಶ್ರೀಮತಿ ಶಮೀಮಾ ಮತ್ತು ಪಾರ್ವತಿ ಚಂದಾಪುರ ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಆರಂಭದಲ್ಲಿ ಕಲಬುರಗಿಯ ಸುಕಿ ಸಾಂಸ್ಕøತಿಕ ಸಂಸ್ಥೆಯ ಮುಖ್ಯಸ್ಥ ಕಿರಣ್ ಪಾಟೀಲ ಅವರು ಅಮ್ಮನ ಕುರಿತು ಹಾಡುಗಳನ್ನು ಸೊಗಸಾಗಿ ಹಾಡಿದರು. ಸಿದ್ದಪ್ರಸಾದರೆಡ್ಡಿ ಸ್ವಾಗತಿಸಿದರೆ, ವಿಜಯ ಭಾಸ್ಕರರೆಡ್ಡಿ ವಂದಿಸಿದರು. ಮಹಿಪಾಲರೆಡ್ಡಿ ಮುನ್ನೂರ್ ಕಾರ್ಯಕ್ರಮ ನಿರೂಪಿಸಿದರು.

ಸಾರಸ್ವತಲೋಕದಲ್ಲಿ ಅಮ್ಮ ಪ್ರಶಸ್ತಿಯ ಛಾಪು: ಡಾ.ಶರಣಪ್ರಕಾಶ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದು ಸೇಡಂ ನೆಲದ ಅಮ್ಮ ಪ್ರಶಸ್ತಿ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ವಾತ್ಸಲ್ಯಕ್ಕೆ ಸರಿಸಾಟಿ ಯಾವುದಿಲ್ಲ. ಅಮ್ಮನ ಹೆಸರು, ಮಾತೃಭಾಷೆ ಜೊತೆಗೆ ಪಾರದರ್ಶಕ ಆಯ್ಕೆ ಇವುಗಳಿಂದ ಈ ಪ್ರಶಸ್ತಿಗೆ ಮೌಲ್ಯ ಹೆಚ್ಚಾಗಿದೆ ಎಂದು ಹೇಳಿದರು.

ಈ ಭಾಗ ಸಾಹಿತ್ಯಿಕವಾಗಿ ಶ್ರೀಮಂತಿಕೆ ಪಡೆದಿದೆ. 9ನೇ ಶತಮಾನದಲ್ಲಿ ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ, 12ನೇ ಶತಮಾನದಲ್ಲಿ ವಚನ ಸಾಹಿತ್ಯ, 15 ನೇ ಶತಮಾನದಲ್ಲಿ ದಾಸ ಸಾಹಿತ್ಯ ಇದಕ್ಕೆ ಪೂರಕ ಸಾಕ್ಷಿಯಾಗಿದೆ. ಸಾಂಸ್ಕøತಿಕ ಕೇಂದ್ರ ಸ್ಥಾಪನೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಹೇಳಿದರು.

`ಅಮ್ಮ ಪ್ರಶಸ್ತಿ’ ಪುರಸ್ಕøತರು : ಚೈತ್ರಾ ಶಿವಯೋಗಿಮಠ ಕೃಷ್ಣನಾಯಕ, ಡಾ.ಸಿ. ಚಂದ್ರಪ್ಪ, ಡಾ.ಮಿರ್ಜಾ ಬಷೀರ್, ಸುಚಿತ್ರಾ ಹೆಗಡೆ, ಡಾ.ಸ್ವಾಮಿರಾವ ಕುಲಕರ್ಣಿ, ನಾಗೇಶನಾಯಕ.

`ಅಮ್ಮ ಗೌರವ’ ಪುರಸ್ಕøತರು: ಡಾ.ಓಂಪ್ರಕಾಶ ಪಾಟೀಲ ಊಡಗಿ, ನರಸಿಂಗರಾವ ಪಾಟೀಲ ಚಾಂಗಲೇರ, ಶಶಿಕಲಾ ಮಕ್ತಾಲ್ ಯಾದಗಿರಿ, ಶೇಖ ಮಹೆಬೂಬ ಸೇಡಂ.

ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭವೇ ತವರುಮನೆಯ ಸಡಗರದಂತಿದೆ. 23 ವರ್ಷದಿಂದ ಬದ್ಧತೆಯಿಂದ ಮಾಡಿಕೊಂಡು ಬರುತ್ತಿರುವುದೇ ಸೋಜಿಗದ ಸಂಗತಿ. ಕರ್ನಾಟಕದಲ್ಲಿ ಅನೇಕರಿಗೆ ಅಮ್ಮ ಪ್ರಶಸ್ತಿ ಪಡೆಯುವ ಅಪೇಕ್ಷೆ ಜಾಸ್ತಿ ಮಾಡಿದೆ.
– ಸುಚಿತ್ರಾ ಹೆಗಡೆ ಮೈಸೂರು

ಪ್ರಶಸ್ತಿ ಬರಬಹುದು ಎಂದು ನಿರೀಕ್ಷೆಯಿತ್ತು. ಯಾಕೆಂದರೆ, ಪಾರದರ್ಶಕ ಆಯ್ಕೆಯಿದ್ದಾಗ ಕೃತಿ ಕಾಂಪಿಟೇಶನ್ ಮಾಡುತ್ತದೆ. ಶಿಫಾರಸ್ಸು ಮತ್ತು ತಮಗೆ ಬೇಕಾದವರಿಗೆ ಕೊಡುವಾಗ ಕಾಂಪಿಟೇಶನ್ ಇರುವುದಿಲ್ಲ. ಹೀಗಾಗಿ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ.
– ಡಾ.ಮಿರ್ಜಾ ಬಷೀರ ತುಮಕೂರು

ಹತ್ತು ವರ್ಷದ ಹಿಂದೆ ಕನಕಶ್ರೀ ಪ್ರಶಸ್ತಿ ಸಿಕ್ಕಾಗ ಆಗಿದ್ದ ಸಂತೋಷ, ಈಗ ಅಮ್ಮ ಪ್ರಶಸ್ತಿ ಪಡೆದಾಗ ಆಗುತ್ತಿದೆ. ನಿರಂತರತೆಯೇ ಈ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.
– ಡಾ.ಸ್ವಾಮಿರಾವ ಕುಲಕರ್ಣಿ, ಕಲಬುರಗಿ

ನಮ್ಮ ತಂದೆಯವರು ತೋರಿದ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವದನ್ನು ಗುರುತಿಸಿದ್ದಕ್ಕೆ ಅಮ್ಮ ಪ್ರಶಸ್ತಿಯ ಪ್ರತಿಷ್ಠಾನಕ್ಕೆ ಧನ್ಯವಾದಗಳು.
– ಡಾ.ಓಂಪ್ರಕಾಶ ಪಾಟೀಲ, ಊಡಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here