ಸುರಪುರ: ಕೋವಿಡ್ ರೂಪಾಂತರ ನಿಯಂತ್ರಣಕ್ಕಾಗಿ ಈಗಾಗಲೇ ಸುರಪುರ ಮತ್ತು ಹುಣಸಗಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ 280 ಆಕ್ಸಿಜನ್ ಪೈಪಲೈನ್ ಬೆಡ್‍ಗಳ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ತಿಳಿಸಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ ಮುಂಜಾಗ್ರತಾ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ನಡೆದ ಸಭೆಯ ನಂತರ ಪ್ರಕಟಣೆ ಮೂಲಕ ಮಾಹಿತಿ ನೀಡಿದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸುರಪುರ,ಪ್ರಾಥಮಿಕ ಆರೋಗ್ಯ ಕೇಂದ್ರ ಕೆಂಭಾವಿ,ನಗರ ಆರೋಗ್ಯ ಕೇಂದ್ರ ಸುರಪುರ,ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರ ,ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡೇಕಲ್‍ನಲ್ಲಿ ಒಟ್ಟು 280 ಆಕ್ಸಿಜನ್ ಪೈಪ್‍ಲೈನ್ ಬೆಡ್‍ಗಳಿದ್ದು,256 ಕಾಟ್‍ಗಳು,268 ಆಕ್ಸಿಜನ್ ಕಾನ್ಸಟೇಟರ್ಸ್,ಜಂಬು ಮತ್ತು ಚಿಕ್ಕ ಒಟ್ಟು 131 ಸಲಿಂಡರ್ ವ್ಯವಸ್ಥೆ ಇದೆ ಎಂದರು.ಈಗಾಗಲೇ ವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಮುಂಜಾಗ್ರತಾ ತಯಾರಿಗೆ ಸೂಚಿಸಲಾಗಿದೆ ಎಂದರು.
ಇನ್ನೂ ಎಲ್ಲಾ ಖಾಸಗಿ ವೈದ್ಯರುಗಳಿಗೆ ಸಭೆ ಮಾಡಲಾಗಿದ್ದು,ಎಲ್ಲಾ ಖಾಸಗಿ ವೈದ್ಯರಿಗೆ ಮುಂಜಾಗ್ರತೆಯಾಗಿ,ಕೋವಿಡ್ ನಿಯಮ ಪಾಲಿಸಲು ಸೂಚಿಸಲಾಗಿದೆ ಹಾಗೂ ಎಲ್ಲಾ ಖಾಸಗಿ ವೈದ್ಯರು ಕಡ್ಡಾಯವಾಗಿ ಕೆ.ಪಿ.ಎಮ್.ಇ ಅಡಿ ನೊಂದಣಿ ಮತ್ತು ಅವಧಿ ಮುಗಿದಿರುವ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳ ರಿನಿವಲ್ ಮಾಡಿಸಲು ಸೂಚಿಸಲಾಗಿದೆ,ಸಭೆಯಲ್ಲಿ ನಕಲಿ ವೈದ್ಯರ ಕಡಿವಾಣದ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.