ಕಲಬುರಗಿ (ಚಿತ್ತಾಪುರ): ವೃದ್ಧೆಯೊಬ್ಬಳು ರೈಲು ಹಳಿ ದಾಟುವಾಗಲೇ ರೈಲು ಅಡಿ ಸಿಲುಕಿ ಹಳಿಗಳ ಮಧ್ಯೆ ಮಲಗಿಕೊಂಡು ಅಚ್ಚರಿ ಹಾಗೂ ಪವಾಡ ಸದೃಶ್ಯ ರೀತಿಯಲ್ಲಿ ಕೊನೆಗೂ ಅಜ್ಜಿ ಪಾರಾದ ಘಟನೆ ಜಿಲ್ಲೆಯ ಚಿತ್ತಾಪೂರ್ ಪಟ್ಟಣದ ರೈಲು ನಿಲ್ದಾಣದಲ್ಲಿ ಗಣೇಶ್ ಚತುರ್ಥಿಯ ದಿನವಾದ ಸೋಮವಾರದಂದು ವರದಿಯಾಗಿದೆ.
ಚಿತ್ತಾಪೂರ್ ಸ್ಟೇಷನ್ ತಾಂಡಾದ ನಿವಾಸಿ ಮಾನಿಬಾಯಿ ಚಂದರ್ ಎಂಬ ಅಜ್ಜಿಯೇ ಯಮಲೋಕದ ಬಾಗಿಲು ತಟ್ಟಿ ಸುರಕ್ಷಿತವಾಗಿ ಮರಳಿ ಬಂದ ಅದೃಷ್ಟವಂತೆ.
ಮಾನಿಬಾಯಿ ಗೂಡ್ಸ್ ರೈಲು ಬರುವುದನ್ನು ಗಮನಿಸದೇ ತಾಂಡಕ್ಕೆ ಹೋಗಲು ರೈಲು ಹಳಿ ದಾಟುವಾಗ ದಿಡೀರ್ ಅಂತ ರೈಲು ಪ್ರತ್ಯಕ್ಷವಾಗಿದೆ. ತಕ್ಷಣ ಸ್ಥಳೀಯರು ಆಕೆಯನ್ನು ರಕ್ಷಿಸಲು ಕಿರುಚಾಡತೊಡಗಿದರು. ಹಳಿಗಳ ಮಧ್ಯೆ ಮಲಗಿ ಜೀವ ರಕ್ಷಿಸಿಕೊಳ್ಳಲು ಎಲ್ಲರೂ ಕೂಗಿ, ಕೂಗಿ ಹೇಳಿದರು. ಅವರು ಹೇಳಿದಂತೆ ಅಜ್ಜಿ ತನ್ನ ಜೀವ ಉಳಿಸಿಕೊಳ್ಳಲು ರೈಲು ಹಳಿಗಳ ಮಧ್ಯೆ ಮಲಗಿಬಿಟ್ಟಳು. ಒಂದು ಹಂತದಲ್ಲಿ ರೈಲು ಬೋಗಿಗಳು ಒಂದೊಂದೇ ಆಕೆಯನ್ನು ದಾಟಿ ಹೋಗುತ್ತಿದ್ದಾಗ ವೃದ್ಧ ಮಹಿಳೆ ಕತ್ತು ಮೇಲಕ್ಕೆ ಎತ್ತುವುದನ್ನು ಕಂಡ ಸ್ಥಳೀಯರು ರೈಲು ದಾಟುವವರೆಗೂ ಮಿಸುಕಾಡದಿರಲು ಎಚ್ಚರಿಕೆ ಕೊಟ್ಟರು. ಪರಿಣಾಮ ರೈಲು ದಾಟುವವರೆಗೂ ಅಜ್ಜಿ ರೈಲು ಹಳಿಗಳೆರಡರ ಮಧ್ಯೆ ಮಲಗಿದಳು. ಪರಿಣಾಮ ಆಕೆ ಜೀವ ಉಳಿಯಿತು.
ಮಾನಿಬಾಯಿಯ ಪ್ರಾಣ ಕಂಟಕದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆಯಿಂದ ಗಾಬರಿಯಾಗಿದ್ದ ಮಾನಿಬಾಯಿ ನಂತರ ಚೇತರಿಕೊಂಡಿದ್ದಾಳೆ. ಇನ್ನು ಸ್ಟೇಚನ್‌ನ ಪಕ್ಕದಲ್ಲಿಯೇ ಇರುವ ತಾಂಡಾಕ್ಕೆ ಹೋಗಬೇಕಾದರೆ ಅಲ್ಲಿನ ನಿವಾಸಿಗಳು ನಿತ್ಯ ಪ್ರಾಣ ಪಣಕ್ಕಿಟ್ಟು ರೈಲು ಹಳಿ ದಾಟಬೇಕಾಗಿದೆ. ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟೇಷನ್‌ನಿಂದ ತಾಂಡಾ ಸೇರಲು ಈಗಲಾದರೂ ಮೇಲ್ಸೆತುವೆ ನಿರ್ಮಾಣ ಮಾಡುವ ಮೂಲಕ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಾಂಡಾ ನಿವಾಸಿಗಳು ಒತ್ತಾಯಿಸಿದ್ದಾರೆ.